ಫೆ.27- ಮಾ.3: ವಿಧಾನ ಸೌಧದಲ್ಲಿ ಪ್ರಥಮ ಪುಸ್ತಕ, ಸಾಹಿತ್ಯ ಉತ್ಸವ

Update: 2025-02-03 14:41 IST
ಫೆ.27- ಮಾ.3: ವಿಧಾನ ಸೌಧದಲ್ಲಿ ಪ್ರಥಮ ಪುಸ್ತಕ, ಸಾಹಿತ್ಯ ಉತ್ಸವ
  • whatsapp icon

ಮಂಗಳೂರು, ಫೆ.3: ಸಾಹಿತಿಗಳು, ಬರಹಗಾರರು ಹಾಗೂ ವಿದ್ವಾಂಸರನ್ನು ವಿಧಾನ ಸೌಧದ ಹತ್ತಿರವಾಗಿಸುವ ಉದ್ದೇಶದಿಂದ ಫೆ. 27ರಿಂದ ಮಾ. 3ರವರೆಗೆ ಇದೇ ಮೊದಲ ಬಾರಿಗೆ ವಿಧಾನ ಸೌಧದ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಉತ್ಸವದ ಜತೆ ಆಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ ಎಂದರು.

ಪುಸ್ತಕ ಉತ್ಸವದಲ್ಲಿ ಶೇ. 80ರಷ್ಟು ಕನ್ನಡ ಹಾಗೂ ಶೇ. 20ರಷ್ಟು ಇತರ ಭಾಷೆಗಳ ಪುಸ್ತಕಗಳ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 150ರಷ್ಟು ಮಳಿಗೆಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ ಎಂದವರು ಹೇಳಿದರು.

ಉತ್ಸವದಲ್ಲಿ ಸಾಹಿತಿಗಳು ಬರೆದ ಪುಸ್ತಕ ಬಿಡುಗಡೆಗೆ ವೇದಿಕೆ ಕಲ್ಪಿಸುವ ಜತೆಗೆ ಅತ್ಯುತ್ತಮ ಸಾಹಿತಿಯೊಬ್ಬರಿಗೆ ಪ್ರಶಸ್ತಿ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಉತ್ಸವದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಶಾಸಕರು ತಮ್ಮ ಕ್ಷೇತ್ರದ ಸರಕಾರಿ ಶಾಲಾ, ಕಾಲೇಜುಗಳಿಗೆ ಪೂರಕವಾಗಿ ತಲಾ 2ರಿಂದ 3 ಲಕ್ಷ ರೂ.ವರೆಗೆ ತಮ್ಮ ನಿಧಿಯಿಂದ ಪುಸ್ತಕ ಖರೀದಿಸಿ ಒದಗಿಸುವ ಕುರಿತಂತೆಯೂ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲಾ ಕಾಲೇಜುಗಳಿಂದ ಬೇಡಿಕೆ ಪಟ್ಟಿ ಪಡೆದುಕೊಳ್ಳಲು ತಿಳಿಸಲಾಗುತ್ತಿದೆ. ಐಎಎಸ್, ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಶಾಸಕರು ತಮ್ಮ ಕ್ಷೇತ್ರದ ಸರಕಾರಿ ಶಾಲಾ ಕಾಲೇಜುಗಳಿಗೆ ಒದಗಿಸಬಹುದು. ಈ ಬಗ್ಗೆ ಶಾಸಕರಿಗೆ ಪತ್ರ ಬರೆಯಲಾಗಿದೆ. ಪುಸ್ತಕ ಉತ್ಸವದಲ್ಲಿ ಇತರ ಕಡೆಗಿಂತ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಒದಗಿಸಲು ಪುಸ್ತಕ ಮಾರಾಟಗಾರರಿಗೆ ಸೂಚನೆ ನೀಡಲಾಗುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಉತ್ಸವದ ಲೋಗೋ, ಹೆಸರು ಸೂಚನೆಗೆ ಆಹ್ವಾನ

ಈ ಉತ್ಸವಕ್ಕಾಗಿ ಈಗಾಗಲೇ ಸಂಬಂಧ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ತಿಳಿಸಲಾಗಿದ್ದು, ು ಸಾಹಿತಿಗಳನ್ನು ಒಳಗೊಂಡ ಸಮಿತಿಯು ಅಗತ್ಯ ಸಿದ್ಧತೆಗಳು, ಪ್ರಶಸ್ತಿಗೆ ಸಾಹಿತಿ ಆಯ್ಕೆ ಸೇರಿದಂತೆ ಉತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸಲಿದೆ. ಇದೇ ವೇಳೆ ಸಾರ್ವಜನಿಕರಿಂದ ಉತ್ಸವಕ್ಕೆ ಲೋಗೋ ಹಾಗೂ ಹೆಸರು ಸೂಚಿಸಲು ಆಹ್ವಾನ ನೀಡಲಾಗಿದ್ದು, ಆಸಕ್ತರು secy-kla-kar@nic.in ಗೆ ಅಥವಾ 9448108789 ವಾಟ್ಸಾಪ್ ಸಂಖ್ಯೆಯ ಮೂಲಕ ಹೆಸರು, ಲೋಗೋ ಸೂಚಿಸಬಹುದು ಎಂದು ಯು.ಟಿ.ಖಾದರ್ ತಿಳಿಸಿದರು.

ವಿಧಾನ ಸೌಧದಲ್ಲಿ ಶಾಶ್ವತ ಬೆಳಕಿನ ವ್ಯವಸ್ಥೆ

ವಿಧಾನ ಸೌಧದಲ್ಲಿ ಪ್ರಮುಖ ಸರಕಾರಿ ಹಾಗೂ ಹಬ್ಬಗಳ ಸಂದರ್ಭ ತಾತ್ಕಾಲಿಕ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಲಕ್ಷಾಂತರ ರೂ. ಪ್ರತಿಬಾರಿ ಖರ್ಚು ಮಾಡಲಾಗುತ್ತದೆ. ಇದಕ್ಕೆ ಬದಲಾಗಿ ವಿಧಾನ ಸೌಧದಲ್ಲಿ ಶಾಶ್ವತ ಲೈಟಿಂಗ್ ವ್ಯವಸ್ಥೆ ಕಲ್ಪಿಸಿ, ಪ್ರತಿ ಶನಿವಾರ ಮತ್ತು ರವಿವಾರ ಹಾಗೂ ಇತರ ಪ್ರಮುಖ ದಿನಗ ಸಂದರ್ಭ ಬೆಳಕಿನ ವ್ಯವಸ್ಥೆಯ ನಿರ್ವಹಣೆ ವ್ಯವಸ್ಥೆಗೆ ಚರ್ಚಿಸಲಾಗಿದ್ದು, ಸರಕಾರ ಒಪ್ಪಿಗೆ ಸೂಚಿಸಿದೆ. ಟೆಂಡರ್ ಕರೆಯಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

‘ವಿಧಾನ ಸೌಧದ ಆವರಣದ ಸುತ್ತ ಸಾಕಷ್ಟು ನಾಯಿಗಳು ಅಡ್ಡಾಡುತ್ತಿರುತ್ತವೆ. ಇದರಿಂದ ಕೆಲವರು ಆಕ್ಷೇಪಿಸುತ್ತಿದ್ದರೆ, ಮತ್ತೆ ಕೆಲವರು ಅವುಗಳ ಬಗ್ಗೆ ಪ್ರೀತಿ ತೋರಿಸುತ್ತಾರೆ. ಆದರೆ ಕಾರ್ಯಕ್ರಮಗಳ ಸಂದರ್ಭ, ವಾಕಿಂಗ್ ಬರುವವರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಅಂತಹ ನಾಯಿಗಳಿಗೆ ಆಹಾರ ಸೇರಿದಂತೆ ಸಮರ್ಪಕ ನಿರ್ವಹಣೆಗಾಗಿ ಸೂಕ್ತ ಜಾಗವನ್ನು ಒದಗಿಸಲು ಚಿಂತಿಸಲಾಗಿದೆ. ಇದಕ್ಕಾಗಿ ಪ್ರಾಣಿ ದಯಾ ಸಂಘದ ಮುಖ್ಯಸ್ಥರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ಶೀಘ್ರವೇ ನಡೆಸಿ ಕ್ರಮ ವಹಿಸಲು ನಿರ್ಧರಿಸಲಾಗಿದೆ. ’

ಯು.ಟಿ.ಖಾದರ್, ಸ್ಪೀಕರ್, ವಿಧಾನಸಭೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News