ಪೆನ್‍ಡ್ರೈವ್ ಬಿಡುಗಡೆಗೊಳಿಸದ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲು

Update: 2023-10-28 14:48 GMT

ಬೆಂಗಳೂರು, ಅ.28: ರಾಜ್ಯ ಸರಕಾರದ ಷ್ಟಾಚಾರದ ದಾಖಲೆಗಳಿರುವ ಪೆನ್‍ಡ್ರೈವ್ ತಮ್ಮ ಬಳಿಯಿದೆ ಎಂದು ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೆನ್‍ಡ್ರೈವ್ ಬಿಡುಗಡೆಗೊಳಿಸದೆ ಬೆದರಿಕೆ ಹಾಕುತ್ತಿದ್ದಾರೆ ಹಾಗೂ ಷ್ಟಾಚಾರಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಗೆ ವಕೀಲ ಅಮೃತೇಶ್ ಎನ್.ಪಿ. ಎಂಬವರು ದೂರು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣದ ಹಾಲಿ ಶಾಸಕರಾಗಿರುವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರದ ಭ್ರಷ್ಟಾಚಾರಗಳ ದಾಖಲೆಯಿರುವ ಪೆನ್‍ಡ್ರೈವ್ ತಮ್ಮ ಬಳಿ ಇರುವುದಾಗಿ ಹೇಳಿದ್ದರು. ಈ ಹೇಳಿಕೆ ನೀಡಿ ತಿಂಗಳುಗಳೇ ಕಳೆದರೂ ಸ್ಪೀಕರ್ ಗಾಗಲಿ, ಸಂಬಂಧಪಟ್ಟ ಇಲಾಖೆಗಾಗಲಿ ಅಥವಾ ಪೊಲೀಸರಿಗಾಗಲಿ ಪೆನ್‍ಡ್ರೈವ್ ನೀಡಿರುವುದಿಲ್ಲ. ರಾಜ್ಯದ ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ ಅವರು ಭ್ರಷ್ಟಾಚಾರಕ್ಕೆ  ಸಾಥ್ ನೀಡಿದಂತಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರದ ಭ್ರಷ್ಟಾಚಾರದ ದಾಖಲೆಗಳಿರುವ ಪೆನ್ ಡ್ರೈವ್‍ನ್ನು ಸ್ಪೀಕರ್ ಗಾಗಲಿ ಅಥವಾ ಅವರೇ ಹೇಳಿದಂತೆ ಎಲ್ಲಾ ಶಾಸಕರಿಗೆ ಹಂಚಲಿ, ಅಥವಾ ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಉತ್ತರ ಕೋರಿ ನೋಟಿಸ್ ನೀಡಿದ್ದೆವು. ಅದಕ್ಕಾಗಿ 7 ದಿನಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೆ ಇಂದಿಗೂ ಯಾರೊಬ್ಬರಿಗೂ ಪೆನ್ ಡ್ರೈವ್ ನೀಡದ ಕಾರಣ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಹುಲಿ ಉಗುರಿನ ವಿಚಾರ ಸುದ್ದಿಯಾದಾಗ, ತಮ್ಮ ಬಳಿಯಿದ್ದ ಹುಲಿ ಉಗುರಿನ ಪೆಂಡೆಂಟ್‍ಅನ್ನು ಅವರೇ ಕರೆದು ತನಿಖಾಧಿಕಾರಿಗಳ ಸುಪರ್ದಿಗೆ ನೀಡಿರುವುದಾಗಿ ಮೊನ್ನೆಯಷ್ಟೇ ಕುಮಾರಸ್ವಾಮಿಯವರು ಹೇಳಿದ್ದಾರೆ. ಹಾಗಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅದೇ ರೀತಿ ಅವರೇ ಕರೆದು ಪೆನ್‍ಡ್ರೈವ್ ಸಹ ನೀಡಲಿ. ಯಾಕೆಂದರೆ ರಾಜ್ಯ ಸರಕಾರ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇದೂ ಸುಳ್ಳು ಬೆದರಿಕೆ ತಂತ್ರದಂತಿದ್ದು, ಪೊಲೀಸರು ಅವರಿಂದ ಪೆನ್‍ಡ್ರೈವ್ ವಶಪಡಿಸಿಕೊಳ್ಳಲಿ ಎಂದು ವಕೀಲ ಅಮೃತೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News