ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಬಡವರನ್ನ ‘ಗೃಹಲಕ್ಷ್ಮಿ’ ರಕ್ಷಿಸಲಿದೆ: ದಿನೇಶ್ ಗುಂಡೂರಾವ್

Update: 2023-08-30 15:56 GMT

ಬೆಂಗಳೂರು ಆ. 30: ‘ಕುಟುಂಬದ ಕಣ್ಣು, ಮನೆಯೊಡತಿಗೆ ಮಾಸಿಕ 2ಸಾವಿರ ರೂ.ನೀಡುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಬಡವನ ಮನೆಗೆ ಲಕ್ಷ್ಮಿ ಕಾಲಿಟ್ಟಂತಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಯೋಜನೆಗೆ ಮೈಸೂರಿನಲ್ಲಿ ವಿದ್ಯುಕ್ತ ಚಾಲನೆ ದೊರೆತ ವೇಳೆಯೇ ನಗರದÀ ಪ್ರತಿ ವಾರ್ಡ್‍ಗಳಲ್ಲೂ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗಾಂಧಿನಗರ ಕ್ಷೇತ್ರದ ಗುಂಡೂರಾವ್ ಭವನದಲ್ಲಿ ಫಲಾನುಭವಿಗಳಿಗೆ ಯೋಜನೆಯ ಮಂಜೂರಾತಿ ಪತ್ರವನ್ನು ಅವರು ವಿತರಿಸಿದರು.

ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ‘ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಮಾಸಿಕ 2 ಸಾವಿರ ರೂ.ವಿತರಿಸುವ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ. ಯೋಜನೆ ಘೋಷಿಸಿದಾಗ ವಿಪಕ್ಷಗಳು ಟೀಕಿಸಿದ್ದವು. ಇದನ್ನ ಹೇಗೆ ಕೊಡ್ತಾರಾ? ಕೊಡಲು ಸಾಧ್ಯವೇ ಇಲ್ಲ, ಸರಕಾರ ಜನರ ದಾರಿತಪ್ಪಿಸುತ್ತಿದೆ ಎಂದು ಆರೋಪ ಮಾಡುತ್ತಿದ್ದರು. ಆದರೆ, ರಾಜ್ಯ ಸರಕಾರ ನುಡಿದಂತೆ ನಡೆದಿದೆ. ಯೋಜನೆಯನ್ನ ಜಾರಿಗೊಳಿಸಿದೆ. ಈಗ ವಿಪಕ್ಷದವರಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ. ಏನೇನೋ ಮಾತಾಡ್ತಿದ್ದಾರೆ. ಈ ಯೋಜನೆಗೆ ಇಷ್ಟೊಂದು ಹಣ ಏಕೆ ಖರ್ಚು ಮಾಡಬೇಕೆಂದು ಪ್ರಶ್ನೆ ಮಾಡ್ತಿದ್ದಾರೆ. ಮನೆಯ ಜಮಾನಿಗೆ 2ಸಾವಿರ ರೂ.ಹಣ ನೀಡಿದರೆ ಅದನ್ನ ವೆಚ್ಚ ಎಂಬ ದೃಷ್ಟಿಕೋನದಿಂದ ನೋಡುವ ಬದಲು, ಗ್ರಾಮೀಣ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುವ ದೃಷ್ಟಿಕೋನದಲ್ಲಿ ನೋಡಬೇಕು. ಬಡವರ ಕುಟುಂಬಗಳು ನಿಟ್ಟುಸಿರು ಬಿಡಲು ಈ ಯೋಜನೆ ಸಹಾಯಕ. ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆ ಸದೃಢಗೊಳ್ಳಲಿದೆ ಎಂದು ಅವರು ಹೇಳಿದರು.

ದಿನೇಶ್ ಗುಂಡೂರಾವ್

ʼಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಾಯ ಹಲವು ಬಡವರ ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ. ದೇಶದಲ್ಲಿಯೇ ಮಹಿಳೆಯರಿಗೆ ಸರಕಾರ ನೀಡುತ್ತಿರುವ ಅತಿದೊಡ್ಡ ಆರ್ಥಿಕ ಭದ್ರತೆ ಯೋಜನೆ ಇದಾಗಿದೆ ಎಂದರೆ ತಪ್ಪಾಗಲಾರದು. ಪ್ರತಿ ತಿಂಗಳು ಸಿಗುವ 2 ಸಾವಿರ ರೂ.ನಿಂದ ಮನೆ ಯಜಮಾನಿ ಕುಟುಂಬದ ನಿರ್ವಹಣಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬಹುದು. ಕೇಂದ್ರ ಸರಕಾರದ ಬೆಲೆ ಏರಿಕೆ ಬಿಸಿಯಿಂದ ಒಂದು ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಬಡವರನ್ನ ರಕ್ಷಿಸಲಿದೆʼ ಎಂದು ದಿನೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News