ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲ; ಪುನರ್ ಪರಿಶೀಲನೆ ಮಾಡಬೇಕು ಎಂದ ಡಿ.ಕೆ ಶಿವಕುಮಾರ್

Update: 2024-01-31 09:36 GMT

ಬೆಂಗಳೂರು: ಸೂಚನಾ ಫಲಕಗಳಲ್ಲಿ  ಶೇ 60 ರಷ್ಟು ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ ವಾಪಾಸ್‌ ಕಳುಹಿಸಿದ್ದು, ಇದರ ಬಗ್ಗೆ ಅವರು  ಪುನರ್ ಪರಿಶೀಲನೆ ಮಾಡಬೇಕು  ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕನ್ನಡ ಭಾಷೆಯು ಭಾವಾನಾತ್ಮಕ ವಿಚಾರ. ಕರ್ನಾಟಕದಲ್ಲಿ ಇದ್ದೀರಿ, ನಮ್ಮ ರಾಜ್ಯಪಾಲರಾಗಿದ್ದೀರಿ. ಸರ್ಕಾರದ ಇಂತಹ ನೀತಿಯಲ್ಲಿ ತಪ್ಪು ಕಂಡು ಹಿಡಿಯಬಾರದು. ಆದ ಕಾರಣ ಮತ್ತೊಮ್ಮೆ ಆದೇಶ ಪರಿಶೀಲಿಸುವಂತೆ ಸರ್ಕಾರದ ಪರವಾಗಿ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ ಎಂದರು.

ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂದು ಹೊರಡಿಸಿದ್ದ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ಸಹಿ ಹಾಕದೆ ಏಕೆ ವಾಪಸ್ಸು ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ. ರಾಜ್ಯಪಾಲರು ವಿಧಾನಸಭೆ ಅಧಿವೇಶನ ನಡೆಯುವ ತನಕ ಕಾಯಬಾರದಿತ್ತು. ಈಗಲೇ ಸಹಿ ಮಾಡಬಹುದಿತ್ತು. ದೇಶದ ರಕ್ಷಣೆಯ ವಿಚಾರದಲ್ಲಿ ನಮ್ಮ ಸರ್ಕಾರಗಳು ಬದ್ದವಾಗಿರುವಂತೆ, ರಾಜ್ಯದ ಗೌರವದ ವಿಚಾರದಲ್ಲೂ ನಾವು ಬದ್ದವಾಗಿದ್ದೇವೆ. ನಾಮ ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂದು ಸುಗ್ರಿವಾಜ್ಞೆ ಹೊರಡಿಸಲಾಗಿತ್ತು. ಕನ್ನಡ ಭಾಷೆ, ಅಸ್ಮಿತೆ ಮತ್ತು ಸಂಸ್ಕೃತಿ ರಕ್ಷಣೆ ಎಂದು ಇದನ್ನು ಕರೆಯುತ್ತೇವೆ. ಕನ್ನಡದ ವಿಚಾರವಾಗಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದವು. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಕನ್ನಡಪರ ತೀರ್ಮಾನ ತೆಗೆದುಕೊಂಡಿದ್ದೆವು ಎಂದರು.

“ನಾಮಫಲಗಳಲ್ಲಿ ಶೇ. 60 ಕನ್ನಡ ಇರಬೇಕು ಎನ್ನುವ ವಿಧೇಯಕವನ್ನು ವಿಧಾನಸಭೆ ಅಧಿವೇಶನಲ್ಲಿ ಮಂಡಿಸಿ ಜಾರಿಗೆ ತರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು 10-15 ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ವಿಧೇಯಕ ಮಂಡನೆಯಾಗಲಿದೆ” ಎಂದು ಹೇಳಿದರು.

ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂಬ ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, “ಬಾಲಕೃಷ್ಣ ಅವರು ಈ ರೀತಿ ಹೇಳಿಕೆ ಕೊಟ್ಟಿಲ್ಲ. ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಿದ್ದಾರೆ. ಬಿಜೆಪಿಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ” ಎಂದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News