ಆರೆಸ್ಸೆಸ್ ಅನ್ನು ನಾಝಿಗಳಿಗೆ ಹೋಲಿಸಿದ್ದ ಕುಮಾರಸ್ವಾಮಿ ಆಗ ಹೇಳಿದ್ದೇನು?

Update: 2023-12-07 05:26 GMT

ಎಚ್.ಡಿ. ಕುಮಾರಸ್ವಾಮಿ 

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಅವರ ಇತ್ತೀಚಿನ ನಿಲುವುಗಳು, ಹೇಳಿಕೆಗಳು ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರಾ ಅಥವಾ ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ಜೊತೆ ವಿಲೀನವೇ ಆಗಿಬಿಟ್ಟಿದ್ದಾರಾ ಎಂಬಷ್ಟರ ಮಟ್ಟಿಗೆ ಬದಲಾಗಿಬಿಟ್ಟಿವೆ. ಕೆಲವೇ ತಿಂಗಳುಗಳ ಹಿಂದಿನ ಅವರ ಹೇಳಿಕೆಗಳಿಗೆ ತೀರಾ ತದ್ವಿರುದ್ಧವಾದ ಹೇಳಿಕೆಗಳನ್ನು ಅವರು ಈಗ ನೀಡುತ್ತಿದ್ದಾರೆ. ಮುಸ್ಲಿಮರ ಬಗ್ಗೆಯಂತೂ ಅವರ ಅಸಹನೆ ಬಜರಂಗದಳ ನಾಯಕರು ವ್ಯಕ್ತಪಡಿಸುವಷ್ಟೇ ತೀವ್ರವಾಗಿ ಎದ್ದು ಕಾಣುತ್ತಿದೆ. ಬಿಜೆಪಿ ನಾಯಕರೂ ನೀಡಲು ಹಿಂಜರಿಯುವಷ್ಟು ತೀಕ್ಷ್ಣ ಹೇಳಿಕೆಗಳನ್ನು ಮುಸ್ಲಿಮರ ಬಗ್ಗೆ ನೀಡುತ್ತಿದ್ದಾರೆ ಕುಮಾರಸ್ವಾಮಿ.

ಆರೆಸ್ಸೆಸ್ ಅನ್ನು ನಾಝಿಗಳಿಗೆ ಹೋಲಿಸಿ ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿಯವರು ಈಗ ಆರೆಸ್ಸೆಸ್ ನ ದಕ್ಷಿಣ ಭಾರತದ ಪ್ರಮುಖ ನಾಯಕ, ಪ್ರಚೋದನಕಾರಿ ಹೇಳಿಕೆಗಳಿಗಾಗಿ ಕುಖ್ಯಾತ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಶ್ರೀ ರಾಮ ವಿದ್ಯಾ ಕೇಂದ್ರದ ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದಾರೆ. ಈ ಹಿಂದೆ ಇದೇ ಸಂಸ್ಥೆಯ ಇದೇ ರೀತಿಯ ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಕರ ಸೇವಕರ ಕಾರ್ಯಾಚರಣೆಯನ್ನೇ ದೇಶಪ್ರೇಮ ಸಾರುವ ಭಾರೀ ಸಾಹಸದಂತೆ ಬಿಂಬಿಸಿ ಶಾಲಾ ಮಕ್ಕಳಿಂದಲೇ ಅದರ ಮರುಸೃಷ್ಟಿ ಮಾಡಿಸಿ ತೋರಿಸಿ ವೈಭವೀಕರಿಸಿದ್ದು ವಿವಾದವಾಗಿತ್ತು.

ಆರೆಸ್ಸೆಸ್ ನಡೆಸುವ, ಆರೆಸ್ಸೆಸ್ ಸಿದ್ಧಾಂತವನ್ನೇ ಕಲಿಸುವ ಶಾಲೆಗೆ ಮುಖ್ಯ ಅತಿಥಿಯಾಗಿ ಹೋಗುತ್ತಿರುವ ಕುಮಾರಸ್ವಾಮಿ ಈ ಹಿಂದೆ ಆರೆಸ್ಸೆಸ್ ಬಗ್ಗೆ ಏನೆಲ್ಲಾ ಹೇಳಿದ್ದರು ಗೊತ್ತೇ? ಅವರು ಆರೆಸ್ಸೆಸ್ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ಆರೆಸ್ಸೆಸ್ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳು ಇಲ್ಲಿವೆ.

"ಸಿಟಿ ರವಿ ಅವರೇ, 2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚೆರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. RSSನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಂಡರಿಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಬಿಜೆಪಿ ಸರಕಾರ."

"ಒಮ್ಮೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳಿ. ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ನಾವು. ನಮ್ಮ ಕುಟುಂಬ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ಅವರ ಮನೆಗಳ ಬೆಳಕಾಗಿದೆ. ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚೆನ್ನಾಗಿ ಗೊತ್ತಿದೆ ಎಂಬುದು ನನ್ನ ಭಾವನೆ. ಅಂದು ಆರೆಸ್ಸೆಸ್ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಲಿಲ್ಲ. ಎಚ್.ಡಿ.ಕುಮಾರಸ್ವಾಮಿಯ ನಿಸ್ವಾರ್ಥತೆಯ ಫಲಾನುಭವಿ ನೀವು. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ"

"1975ರಲ್ಲಿ ಜನಸಂಘವೂ ಜನತಾ ಪಕ್ಷದ ಮೈತ್ರಿ ಭಾಗವಾಗಿತ್ತು. ಆಗ ಜನಸಂಘದ ನಾಯಕರ ಜತೆ ದೇವೇಗೌಡರೂ ವೇದಿಕೆ ಹಂಚಿಕೊಂಡಿದ್ದರು. ಅಟಲ್, ಅಡ್ವಾಣಿ ಅವರಂತೆ ಗೌಡರೂ ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿದ್ದರು. ಆದರೆ, 1975ರ RSSಗೂ ಈಗಿನ RSSಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಮಗಿಂತ ಗೌಡರಿಗೇ ಚೆನ್ನಾಗಿ ಗೊತ್ತು. ಎಮರ್ಜೆನ್ಸಿ ವೇಳೆ ಜನಸಂಘವಷ್ಟೇ ಅಲ್ಲ, ಅನೇಕ ನಾಯಕರು ಜೈಲಿಗೆ ಹೋಗಿದ್ದರು. ಅಡ್ವಾಣಿ ಅವರು ಬೆಂಗಳೂರು ಜೈಲಿನಲ್ಲೇ ಇದ್ದರು. ಅಲ್ಲಿ ಅಡ್ವಾಣಿ ಅವರೊಂದಿಗಿನ ಒಡನಾಟದಿಂದ ಗೌಡರು ಹಾಗೆ ಹೇಳಿರಬಹುದು. ಎಮರ್ಜೆನ್ಸಿ ಬಳಿಕ RSS ಹೇಗೆ ಬದಲಾಯಿತೆಂಬುದು ಅವರಿಗೆ ತಿಳಿದಿದೆ. ಮೈಸೂರಿನಲ್ಲಿ ಗೌಡರು ಹೇಳಿದ್ದನ್ನೇ ಇವತ್ತು ತಿರುಚಿ ಹೇಳಬೇಡಿ"

"ದೇವೇಗೌಡರು ಎಂದೂ RSS ಒಪ್ಪಿಲ್ಲ. ಹಾಗಿದ್ದಿದ್ದರೆ, ಪ್ರಧಾನಿ ಆಗಿದ್ದ ಅವರಿಗೆ ಕಾಂಗ್ರೆಸ್ ʼಕೈʼಕೊಟ್ಟಾಗ ಬೆಂಬಲಕ್ಕೆ ಬಂದ ವಾಜಪೇಯಿ ಅವರ ಆಫರ್ ಒಪ್ಪುತ್ತಿದ್ದರು. ಅಷ್ಟೇ ಏಕೆ, ಬಿಜೆಪಿ ಜತೆ ನಾನು ಸರಕಾರ ರಚಿಸಿದ ಕಾರಣಕ್ಕೆ ಅವರ ಆರೋಗ್ಯ ಹಾಳಾಯಿತು. ಇದು RSS ಬಗ್ಗೆ ಗೌಡರು ಕಾಯ್ದುಕೊಂಡಿರುವ ಅಂತರ. ಅಪ್ರಬುದ್ಧತೆ ಇರುವುದು ಯಾರಿಗೆ? ಸೇವೆ, ಸಂಸ್ಕಾರ RSS ನೀಡುತ್ತಿದೆ ಎನ್ನುತ್ತೀರಿ. ಆದರೆ ಸಮಾಜಕ್ಕೆ ಬೇಕಿರುವುದು ನೆಮ್ಮದಿ, ಶಾಂತಿ, ಮಾಡುವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ. ಈ ವಿಷಯದಲ್ಲಿ RSS ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ಬದುಕಿಗೆ ಶಿಕ್ಷಣ ಕೊಡುವುದು ಬಿಟ್ಟು ರಾಷ್ಟ್ರವನ್ನು ಒಡೆಯುವ ರೀತಿ ಮುಗ್ಧ ಮಕ್ಕಳ ಮೆದುಳು ಹಾಳು ಮಾಡುತ್ತಿದ್ದೀರಿ. ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ. ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು? ಇಂದಿರಾಗಾಂಧಿ, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ಜೀವತ್ಯಾಗ ಮಾಡಿದರು. ನಿಮ್ಮಲ್ಲಿ ಅಂಥವರು ಒಬ್ಬರಿದ್ದಾರಾ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೇ ಗುಂಡಿಕ್ಕಿದವರು ನೀವು. ನೀವು ಸಮಾಜದ ಉದ್ಧಾರ ಮಾಡುತ್ತೀರಾ? ಇದಕ್ಕೇ RSS ʼವಿಶ್ವಕುಖ್ಯಾತಿʼ ಆಗಿದ್ದು"

"RSS ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ. ಇತಿಹಾಸವನ್ನು ತಿರುಚಿ ಮಕ್ಕಳ ಮನಸ್ಸುಗಳನ್ನು ಕೆಡಿಸಿ ಅವರ ಹೃದಯಗಳಲ್ಲಿ ವಿಷಬೀಜ ಬಿತ್ತಲು. ಕಲೆ, ಸಂಸ್ಕೃತಿ, ಸಾಹಿತ್ಯಗಳಲ್ಲಿ RSS ಬದ್ಧತೆ ಏನೆಂಬುದು ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೇ ಗೊತ್ತಿದೆ. ನಾನು ಓದಿ, ಕೇಳಿ, ನೋಡಿ ತಿಳಿದುಕೊಂಡಿದ್ದೇನೆ. ರೈತ-ಕಾರ್ಮಿಕರಿಗೆ RSS ಮಾಡಿದ್ದೇನು? ಅನೇಕ ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನ್ನದಾತರ ಮೇಲೆ ವಾಹನ ಹತ್ತಿಸಿ ಕೊಲ್ಲಲಾಗಿದೆ. ಈ ಬಗ್ಗೆ RSS ಮೌನ ಏಕೆ? ಕೊರೋನ ಸಂಕಷ್ಟದ ಸಮಯದಲ್ಲಿ ಯಾರ ಜೇಬುಗಳು ತುಂಬುತ್ತಿವೆ ಎಂಬುದು ದೇಶಕ್ಕೆ ಗೊತ್ತಿದೆ. ಸೇವೆ, ಸ್ವದೇಶಿ ತತ್ವಗಳು RSS ಅಲಂಕಾರಕ್ಕೆ ಮಾತ್ರ. RSSನಿಂದ ಸ್ವಾಗತ ಪಡೆದುಕೊಳ್ಳುವ ದುಃಸ್ಥಿತಿ ನನಗೆ ಇನ್ನೂ ಬಂದಿಲ್ಲ. ನೀವು RSS ಸಿದ್ದಾಂತದ ಬಗ್ಗೆ ಹೇಳುವುದನ್ನು ನಿಲ್ಲಿಸಿ. ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸ್ವಯಂ ಸೇವಕರನ್ನೇ ಮಾತನಾಡಿಸಿ, ಸಂಘವನ್ನು ಹತ್ತಿರದಿಂದ ಕಂಡ ಲೇಖಕರು ಬರೆದಿರುವ ಆ ಪುಸ್ತಕವನ್ನು ಒಮ್ಮೆ ಓದಿ ಸಿ.ಟಿ.ರವಿಯವರೇ"

(ತಾನು RSS ಬಗ್ಗೆ ಮಾತನಾಡಿದ್ದನ್ನು ಪ್ರಶ್ನಿಸಿದ್ದ ಸಿಟಿ ರವಿಗೆ ತಿರುಗೇಟು ನೀಡಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅಕ್ಟೋಬರ್ 7, 2021 ರಂದು ಮಾಡಿರುವ ಟ್ವೀಟ್.)

"ಆರೆಸ್ಸೆಸ್‌ ಮತ್ತು ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿವೆ. 4 ದಿನಗಳಲ್ಲಿ ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಸರ್ಕಾರ ನಡೆಸೋದು ಹೇಗಂತ ಇದೇನಾ ಆರೆಸ್ಸೆಸ್‌ ಹೇಳಿಕೊಟ್ಟಿರೋದು. "

" ಆರೆಸ್ಸೆಸ್‌(RSS) ಬಗ್ಗೆ ಈ ಹಿಂದೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಸಮರ್ಥಿಸಿಕೊಂಡಿರುವ ಅವರು ಅವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದು ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರು ಚರ್ಚೆಗೆ ಬರಲಿ ಎಂದು ತಿಳಿಸಿದ್ದಾರೆ. ಜೆಡಿಎಸ್‌ ವರಿಷ್ಠರಾದ ದೇವೇಗೌಡರು ದೇಶದ ಪ್ರಧಾನಿಯಾಗಿದ್ದ 20 ತಿಂಗಳ ಅವಧಿಯಲ್ಲಿ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತಾ? ಸರ್ಕಾರ ನಡೆಸುವುದು ಹೇಗೆ ಎಂದು ಇದೇನಾ ನಿಮಗೆ ಆರೆಸ್ಸೆಸ್ ಹೇಳಿಕೊಟ್ಟಿರುವುದು "

(ದೇಶದ ಕಾರ್ಯಾಂಗದ ಮೇಲೆ ಆರೆಸ್ಸೆಸ್‌ ಹಿಡಿತವಿದೆ ಎಂದು ಅವರು ಈ ಹಿಂದೆ ನೀಡಿದ್ದ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಚನ್ನಪಟ್ಟಣದಲ್ಲಿ 2021 ಅ.09ರಂದು ಕೊಟ್ಟ ಪ್ರತಿಕ್ರಿಯೆ)

ನಾಝಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ:

"ಜರ್ಮನಿಯಲ್ಲಿ ನಾಝಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಆರೆಸ್ಸೆಸ್‌ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ. ದೇಶದಲ್ಲಿ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಸ್ವತಂತ್ರವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದು ಅಘೋಷಿತ ತುರ್ತು ಪರಿಸ್ಥಿತಿ"

"ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಝಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ."

"ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳು ಸರ್ಕಾರದ ಭಾವನೆಗಳನ್ನು ಎತ್ತಿಹಿಡಿದರೆ ಯಾರಿಗೆ ಏನಾಗುತ್ತದೆಯೋ ಗೊತ್ತಿಲ್ಲ.ಇನ್ನೂ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು? ವಾತಾವರಣವನ್ನು ನೋಡಿದಾಗ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಂತೂ ನಿಚ್ಚಳವಾಗಿದೆ"

(ರಾಮಮಂದಿರಕ್ಕೆ ಹಣ ನೀಡದವರ ಮನೆಗಳನ್ನು ಗುರುತು ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಫೆಬ್ರವರಿ 15, 2021 ರಂದು ಕುಮಾರಸ್ವಾಮಿ ಮಾಡಿರುವ ಟ್ವೀಟ್)

"ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರೆಸ್ಸೆಸ್ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ. ಆರೆಸ್ಸೆಸ್ ಅನ್ನೇ ಕೇಂದ್ರಬಿಂದು ಆಗಿಸಿಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೇ ವಿಸರ್ಜಿಸಿ ಹೊಸ ಪಕ್ಷ ರಚನೆಯತ್ತ ಅದು ಅಲೋಚನೆ ಮಾಡಿತ್ತು."

( 6 ಅಕ್ಟೋಬರ್ 2021 ರಂದು ಬಿಡದಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಚ್ ಡಿಕೆ )

" ನಿಮ್ಮ (ಬಿಜೆಪಿ– ಸಂಘಪರಿವಾರ) ಸಂಕುಚಿತ ಮನೋಭಾವವೇ ದೇಶ ವಿಭಜನೆ ಆಗಲು ಕಾರಣ. ಈಗ ನೆಹರೂ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. "

"ಇಂದು ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳು ಮತ್ತು ಗಾಂಧೀಜಿಯವರನ್ನು ಕೊಂದವರೇ ದೇಶ ವಿಭಜನೆಗೆ ಕಾರಣರು"

"ಒಂದು ಕಡೆ ನೆಹರೂ ಅವರ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ನೆಹರೂ ರಾಷ್ಟ್ರ ವಿಭಜನೆಗೆ ಕಾರಣ ಎಂದು ನೆಪ ಹೇಳುತ್ತಾರೆ. ನೆಹರೂ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು. ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ"

(ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಎಚ್ ಡಿಕೆ)

"ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್‌ ಹಾಗೂ ಬಿಜೆಪಿಯ ರಹಸ್ಯ ಕಾರ್ಯಸೂಚಿಗಳನ್ನು ಬಯಲಿಗೆಳೆಯುವ ಹೋರಾಟ ನಡೆಸುತ್ತಿರುವ ಕಾರಣಕ್ಕೆ ನನ್ನ ಹತ್ಯೆಗೆ ಆರ್‌ಎಸ್‌ಎಸ್ ಸಂಚು ರೂಪಿಸಿದೆ"

"ಮಹಾತ್ಮಗಾಂಧಿಯನ್ನೇ ಹತ್ಯೆ ಮಾಡಿದವರು ಅವರು. ಅಂತಹವರಿಗೆ ನಾನು ಯಾವ ಲೆಕ್ಕ. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ಮತ್ತೊಂದು ಸಮಾಜದ ಭಯೋತ್ಪಾದಕರ ಬಗ್ಗೆ ಮಾತನಾಡುವ ಬಿಜೆಪಿಯ ಅಂಗಸಂಸ್ಥೆಗಳಲ್ಲೇ ಭಯೋತ್ಪಾದಕರು ಇದ್ದಾರೆ. ಅತ್ಯಂತ ಜಾಗರೂಕತೆಯಿಂದ ಅವರು ನಡೆಸುವ ಚಟುವಟಿಕೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ಹಾಗಂತ ಅವರು ಹಾಕಿರುವ ಗೊಡ್ಡು ಬೆದರಿಕೆಗೆ ಹೆದರಿ ಮೌನಕ್ಕೆ ಶರಣಾಗುವುದಿಲ್ಲ"

"ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ನನಗೆ ಸರ್ಕಾರ ಭದ್ರತೆ ಕೊಟ್ಟಿದೆ. ಅದನ್ನು ಲೆಕ್ಕಿಸದೇ ನಾನು ನೇರವಾಗಿ ಜನರ ಬಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ನನ್ನ ದೇಹದ ಮೇಲೆ ಸಣ್ಣ ದಬ್ಬಾಳಿಕೆ, ದೌರ್ಜನ್ಯ ನಡೆಸಿದರೆ ಅಂತಹವರು ಸುಟ್ಟು ಭಸ್ಮವಾಗುತ್ತಾರೆ. ಬೆಂಕಿ ಬಿದ್ದುಬಿಡುತ್ತದೆ"

"ಜರ್ಮನಿಯಲ್ಲಿ ಹಿಟ್ಲರ್‌ನ ನಾಝಿಪಂಥ ಹುಟ್ಟಿಕೊಂಡಾಗಲೇ ಆರೆಸ್ಸೆಸ್ ಕೂಡ ಹುಟ್ಟಿದೆ. ನಾಝಿ ಸಂಘಟನೆಗೂ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಆರೆಸ್ಸೆಸ್ ಗೂ ವ್ಯತ್ಯಾಸವಿಲ್ಲ"

"ಮಂಗಳೂರಿನ ಘಟನೆಗಳ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಕೆಲವರು ಹೇಳಿದ್ದಾರೆ. ಪಾಕಿಸ್ತಾನದ ಭಜನೆ ಮಾಡುತ್ತಿರುವವರು ಬಿಜೆಪಿಯವರೇ ವಿನಃ ನಾವಲ್ಲ. ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಝಿಗಳಲ್ಲಿರಬಹುದು. ನನ್ನ‌ ಜೀನ್ ಈ ಮಣ್ಣಿನಲ್ಲಿದೆ"

(26 ಜನವರಿ 2020 ರಂದು ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ)

"ಒಕ್ಕಲಿಗ ಅಸ್ಮಿತೆಯ ವಿರೋಧಿಗಳು"

" ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ... ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು. ಅಥವಾ ಜರ್ಮನಿಯ ನಾಝಿಗಳಲ್ಲಿರಬಹುದು. ನನ್ನ‌ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು."

"ಒಕ್ಕಲಿಗರ ಪ್ರತಿನಿಧಿ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯ"

(ಜನವರಿ 25, 2020 ರಂದು ಮಾಡಿರುವ ಸರಣಿ ಟ್ವೀಟ್ ಗಳು )

" ಅಗ್ನಿಪಥ್ ಯೋಜನೆಯನ್ನು ಆರಂಭಿಸಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟವರು ಯಾರು?. ರಕ್ಷಣಾ ಇಲಾಖೆಯವರು ಸಲಹೆ ಕೊಟ್ಟರೋ , ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ ಆರೆಸ್ಸೆಸ್ ನವರು ಸಲಹೆ ಕೊಟ್ಟಿದ್ದಾರ? ಹಿಂದೆ ನಾಝಿ ಸಾಮ್ರಾಜ್ಯದ ಹಿಟ್ಲರ್ ಸರ್ವಾಧಿಕಾರಿ ಇತ್ತಲ್ಲ, ಆಗಲೇ ಆರೆಸ್ಸೆಸ್ ಹುಟ್ಟಿಕೊಂಡಿತ್ತು. ನಾಝಿ ಮಾದರಿಯ ರೀತಿ ಸೇನೆಯಲ್ಲೂ ಹಿಡಿತ ಸಾಧಿಸಲು ಹೊರಟಿದ್ದಾರೆ. ಸೇನೆಯಲ್ಲಿ ಆರೆಸ್ಸೆಸ್ ನವರನ್ನು ತುಂಬಲು ಈ ಪ್ಲ್ಯಾನ್. ಇದು ಆರೆಸ್ಸೆಸ್ ನವರ ಅಗ್ನಿಪಥ್ ಯೋಜನೆ. ಪ್ರಾರಂಭದಲ್ಲಿ ಹತ್ತು ಲಕ್ಷ ಸೇನೆಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಆಯ್ಕೆ ಮಾಡಿ ನಾಲ್ಕು ವರ್ಷಗಳ ನಂತರ 25% ಯುವಕರನ್ನು ಉಳಿಸಿಕೊಂಡು ಸೇನೆಯನ್ನು ಅರ್ಎಸ್ಎಸ್ ಮಯ ಮಾಡಿ ಇನ್ನೂ ಉಳಿದ 75% ಯುವಕರನ್ನು ದೇಶಕ್ಕೆ ಹಂಚಿ ನಾಜಿ ಸಂಸ್ಕೃತಿ ತರಲು ಬಿಜೆಪಿ ಹೊರಟಿದೆ"

(ಜೂನ್ 19, 2022 ರಂದು ಚನ್ನಪಟ್ಟಣದಲ್ಲಿ ಬಮೂಲ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದು)

" ಸಂಘ ಪರಿವಾರದ ಹಿಡನ್ ಅಜೆಂಡಾ ವಿರುದ್ಧ ನನ್ನ ಹೋರಾಟ"

(2020ಜನವರಿ 25 ಬೆಂಗಳೂರಿನಲ್ಲಿ ನೀಡಿದ ಪ್ರತಿಕ್ರಿಯೆ)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News