ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಎಚ್‌.ಡಿ. ಕುಮಾರಸ್ವಾಮಿ

Update: 2024-01-21 12:55 GMT

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ನ  ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್‍ವೈ ನಿವಾಸದಲ್ಲಿ ಮೈತ್ರಿ ನಾಯಕರ ಸಭೆ ನಡೆಯಿತು. ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಜೆಡಿಎಸ್ ಯುವ ಮುಖಂಡ ನಿಖಿಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ ಸಹಿತ ಹಲವು ಮುಖಂಡರು ಪಾಲ್ಗೊಂಡಿದ್ದರು.

ಮೈತ್ರಿ ಪಕ್ಷಗಳ ಮೊದಲ ಜಂಟಿ ಸಭೆ ಇದಾಗಿದೆ. ಉಪ ಚುನಾವಣೆ ಗೆಲ್ಲುವ ಮೂಲಕ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಬೇಕು. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಬಂಧ ಚರ್ಚಿಸಲಾಯಿತು. ಈ ಸಭೆಯ ಚರ್ಚೆಯ ವಿಷಯವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.

ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ‘ಬಿಎಸ್‍ವೈ ನಿವಾಸದಲ್ಲಿ ಎರಡೂ ಪಕ್ಷದ ಪ್ರಮುಖ ನಾಯಕರು ಪ್ರಥಮ ಹಂತದಲ್ಲಿ ಮೊದಲ ಸಭೆ ಮಾಡಿದ್ದೇವೆ. ವಿಧಾನ ಪರಿಷತ್ ಉಪಚುನಾವಣೆ ಇದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ಮಾಡಿದ್ದೇವೆ. ಬಿಜೆಪಿ ಹೈಕಮಾಂಡ್‍ಗೆ ಮಾಹಿತಿ ನೀಡುತ್ತೇವೆ. ಮುಂದಿನ ಚುನಾವಣೆಗೆ ಇಲ್ಲಿಂದಲೇ ಸಂದೇಶ ಕೊಡಲಿದ್ದೇವೆ. ಮೋದಿ ಕೈ ಬಲಪಡಿಲಸಲು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರಕಾರ ಆಡಳಿತದಲ್ಲಿದ್ದು, ಈ ಸರಕಾರ ತೊಲಗಬೇಕು’ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News