ಹಿಜಾಬ್ | ಸರಕಾರದ ನಿರ್ಧಾರಕ್ಕೆ ಸ್ವಾಗತ: ಓದು ಮುಂದುವರಿಸುವುದಾಗಿ ಹೇಳಿದ ವಿದ್ಯಾರ್ಥಿನಿ ಮುಸ್ಕಾನ್
ಮಂಡ್ಯ: ಹಿಜಾಬ್ ವಿವಾದದ ವೇಳೆ ದೇಶದ ಗಮನ ಸೆಳೆದಿದ್ದ ನಗರದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್, ಹಿಜಾಬ್ ನಿಷೇಧ ವಾಪಸ್ ಪಡೆಯುವ ರಾಜ್ಯ ಸರಕಾರದ ಇಂಗಿತಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮತ್ತೆ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಹೇಳಿದ್ದಾರೆ.
ಕಳೆದ ವರ್ಷ ಹಿಜಾಬ್ ವಿವಾದ ಮುನ್ನೆಲೆಗೆ ಬಂದಾಗ ಮುಸ್ಕಾನ್ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವೇಳೆ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪು ‘ಜೈ ಶ್ರೀರಾಮ್’ ಘೋಷಣೆ ಕೂಗಿದಾಗ, ಮುಸ್ಕಾನ್ ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಗಮನ ಸೆಳೆದಿದ್ದರು.
ಹಿಂದಿನ ಸರಕಾರ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿದ್ದನ್ನು ವಿರೋಧಿಸಿ ಕಾಲೇಜು ತೊರೆದಿದ್ದ ಮುಸ್ಕಾನ್, ಇದೀಗ ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಹಿನ್ನೆಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʼಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಅವರಿಗೆ ಧನ್ಯವಾದಗಳು. ಮತ್ತೆ ನಾನು ಕಾಲೇಜಿಗೆ ಹೋಗುತ್ತೇನೆ. ಕಾಲೇಜು ತೊರೆದಿರುವ ಇತರ ವಿದ್ಯಾರ್ಥಿನಿಯರಿಗೂ ವಿದ್ಯಾಭ್ಯಾಸ ಮುಂದುವರಿಸುವಂತೆ ಕೇಳಿಕೊಳ್ಳುತ್ತೇನೆʼ ಎಂದು ಹೇಳಿದರು.
ʼಈ ಹಿಂದೆಯೂ ನಾವೆಲ್ಲರೂ ಕಾಲೇಜಿನಲ್ಲಿ ಅಣ್ಣತಮ್ಮಂದಿರಂತೆ ಪ್ರೀತಿಯಿಂದ ಇದ್ದೆವು. ಇನ್ನು ಮುಂದೆಯೂ ಹಾಗೆಯೇ ಪ್ರೀತಿಯಿಂದ ಇರೋಣ ಎಂದು ಮನವಿ ಮುಸ್ಕಾನ್ ಮನವಿ ಮಾಡಿದರು. ಹಿಜಾಬ್ ವಿವಾದದ ಬಗೆಗಿನ ಸುಪ್ರೀಂಕೋರ್ಟ್ ತೀರ್ಪು ಕೂಡ ಸಕಾರಾತ್ಮಕವಾಗಿ ಬರಲಿದೆʼ ಎಂಬ ಅವರು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಕಾನ್ ತಂದೆ ಮುಹಮ್ಮದ್ ಹುಸೇನ್ ಅವರೂ ಸರಕಾರದ ನಿರ್ಧಾರ ಸ್ವಾಗತಿಸಿದ್ದಾರೆ. ನನಗೆ ಬಹಳ ಖುಷಿಯಾಗಿದೆ. ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟಿದ್ದ ಮಕ್ಕಳಿಗೆ ಮತ್ತೆ ಶಿಕ್ಷಣ ಕೊಡಿಸುವುದಕ್ಕೆ ದಾರಿ ಕಾಣಿಸುತ್ತಿದೆ ಎಂದು ಹುಸೇನ್ ಹೇಳಿದರು.
ಪ್ರಕರಣದ ನಂತರ ಶಾಲೆ ಬಿಟ್ಟ ನಂತರ ನನ್ನ ಮಗಳಿಗೆ ಉಚಿತವಾಗಿ ಶಿಕ್ಷಣ ಕೊಡಿಸಲು ದೇಶ ವಿದೇಶಗಳಿಂದ ಆಹ್ವಾನ ಬಂದಿತ್ತು. ಆದರೆ, ನನ್ನ ಮಗಳಿಗೆ ಅವಳು ಓದಿದ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ನಿರಾಕರಿಸಿದ್ದೆವು. ಇದೀಗ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸುತ್ತೇನೆ ಎಂದು ಅವರು ತಿಳಿಸಿದರು.