ವಿಧಾನಸಭೆಯಲ್ಲಿ ‘ಹನಿಟ್ರ್ಯಾಪ್’ ಪ್ರತಿಧ್ವನಿ ; ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ಭರವಸೆ ನೀಡಿದ ಸರಕಾರ

ಕೆ.ಎನ್.ರಾಜಣ್ಣ/ಜಿ.ಪರಮೇಶ್ವರ್
ಬೆಂಗಳೂರು : ಸಚಿವರೊಬ್ಬರನ್ನು ‘ಹನಿಟ್ರ್ಯಾಪ್’ ಖೆಡ್ಡಾಕ್ಕೆ ಬೀಳಿಸಲು ಪ್ರಯತ್ನ ನಡೆದಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆಯೇ ‘ಹನಿಟ್ರ್ಯಾಪ್’ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಪಕ್ಷಬೇಧ ಮರೆತು ಈ ಇದರ ವಿರುದ್ದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಧ್ವನಿ ಎತ್ತಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು ಎಂದು ಸರಕಾರ ಪ್ರಕಟಿಸಿದೆ.
ಗುರುವಾರ ವಿಧಾನಸಭೆಯಲ್ಲಿ ‘ಹನಿಟ್ರ್ಯಾಪ್’ ವಿಚಾರಕ್ಕೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಯಿತು. ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ತಮ್ಮ ಮೇಲೆಯೇ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಯತ್ನಾಳ್ ಈ ವಿಷಯ ಪ್ರಸ್ತಾಪಿಸಿದ್ದು, ಹೀಗಾಗಿ ನಾನು ವಾಸ್ತವವನ್ನು ಹೇಳುತ್ತೇನೆ. ಸಾರ್ವಜನಿಕವಾಗಿ ತಪ್ಪು ಮಾಹಿತಿ ಹೋಗಬಾರದು ಎಂದು ಹೇಳುತ್ತಿದ್ದೇನೆ’ ಎಂದರು.
48ಕ್ಕೂ ಹೆಚ್ಚು: ‘ಕೆಲ ಮಾಧ್ಯಮಗಳಲ್ಲಿ ತುಮಕೂರು ಭಾಗದ ಪ್ರಭಾವಿ ಸಚಿವರು ಎಂದು ಹೇಳುತ್ತಿದ್ದು, ನಾನು ಮತ್ತು ಡಾ.ಪರಮೇಶ್ವರ್ ಇಬ್ಬರೇ ಆ ಜಿಲ್ಲೆಯಲ್ಲಿ ಇರುವುದು. ಕರ್ನಾಟಕ ರಾಜ್ಯವನ್ನು ‘ಸಿಡಿ’ ಕಾರ್ಖಾನೆ ಎಂದು ಜನ ಹೇಳುತ್ತಾರೆ. ಇದು ಕೇವಲ ಇಲ್ಲಿಗೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ನಾಯಕರೂ ‘ಹನಿಟ್ರ್ಯಾಪ್’ಗೆ ಒಳಗಾಗಿದ್ದು, 48ಕ್ಕೂ ಹೆಚ್ಚು ಮಂದಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಹನಿಟ್ರ್ಯಾಪ್ ವಿಡಿಯೋಗಳಿವೆ ಎಂದು ಹೇಳಲಾಗುತ್ತಿದೆ’ ಎಂದು ರಾಜಣ್ಣ ಉಲ್ಲೇಖಿಸಿದರು.
‘ಇದೊಂದು ಪಿಡುಗು, ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಗೌರವ ಇಲ್ಲದ ಸ್ಥಿತಿ ಒಳ್ಳೆಯದಲ್ಲ. ಈ ಹನಿಟ್ರ್ಯಾಪ್‍ನ ಹಿಂದಿನ ನಿರ್ದೇಶಕರು ಮತ್ತು ನಿರ್ಮಾಪಕರು ಯಾರು ಎಂದು ರಾಜ್ಯದ ಜನರಿಗೆ ಗೊತ್ತಾಗಬೇಕು. ಹೀಗಾಗಿ ಖುದ್ದು ಗೃಹ ಸಚಿವರಿಗೆ ನಾನು ಲಿಖಿತ ದೂರನ್ನು ನೀಡುತ್ತಿದ್ದೇನೆ. ಅದನ್ನು ಆಧರಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ರಾಜಣ್ಣ ಆಗ್ರಹಿಸಿದರು.
ಉನ್ನತ ಮಟ್ಟದ ತನಿಖೆ: ಆ ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ‘ಸಚಿವ ರಾಜಣ್ಣ ಅವರು ಈ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದರ ಹಿಂದಿರುವವರನ್ನು ತನಿಖೆ ಮಾಡಿ ಬಯಲಿಗೆಳೆಯಬೇಕೆಂದು ಆಗ್ರಹಿಸಿದರು. ಅವರು ಲಿಖಿತ ದೂರು ನೀಡುವುದಾಗಿ ಹೇಳಿದ್ದು, ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
‘ಹನಿಟ್ರ್ಯಾಪ್‍ನಲ್ಲಿ ಸಿಲುಕಿ ರಾಜಕಾರಣಿಗಳ ಬದುಕು ಹಾನಿಗೀಡಾಬಾರದು. ತತ್ವ, ಸಿದ್ಧಾಂತಗಳನ್ನು ಆಧರಿಸಿ ರಾಜಕಾರಣ ಮಾಡಬೇಕೇ ಹೊರತು ಹನಿಟ್ರ್ಯಾಪ್ ಮೂಲಕ ತಮ್ಮ ಪ್ರತಿಸ್ಪರ್ಧಿಗಳನ್ನು ಕಟ್ಟುಹಾಕುವ ಯತ್ನ ನಿಜಕ್ಕೂ ರಾಜ್ಯಕ್ಕೆ ಗೌರವ ತರುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ರಾಜ್ಯದ ಜನರಿಗೆ ತಿಳಿಸಬೇಕು’
-ವಿ.ಸುನೀಲ್, ಕುಮಾರ್ ಬಿಜೆಪಿ ಸದಸ್ಯ