ನಾನು ಐಟಿ ಪ್ರತಿನಿಧಿಯೂ ಅಲ್ಲ, ಈಡಿ ಉದ್ಯೋಗಿಯೂ ಅಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2023-10-15 12:44 GMT

ಬೆಂಗಳೂರು, ಅ. 15: ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ...ಕಳ್ಳನ ಮನಸ್ಸು ಹುಳ್ಳುಳ್ಳಗೆ...ಈ ಗಾದೆ ಮಾತುಗಳು ಯಾರಿಗೆ ಅನ್ವಯ ಆಗುತ್ತವೋ ಇಲ್ಲವೋ ಗೊತ್ತಿಲ್ಲ. ಡಿ.ಕೆ. ಸಹೋದರರಿಗಂತೂ ಕರಾರುವಕ್ಕಾಗಿ ಅನ್ವಯಿಸುತ್ತವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಕುಮಾರಸ್ವಾಮಿ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಯೇನೂ ಅಲ್ಲ’ ಎಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಹತಾಶೆಯ ಹಳಹಳಿಕೆಯಷ್ಟೇ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಇಡುಗಂಟು ಡಿಕೆಶಿ ಅವರದ್ದು ಎಂದು ನಾನು ಹೇಳಿದ್ದೇನೆಯೇ?’ ಎಂದು ಪ್ರಶ್ನಿಸಿದ್ದಾರೆ.

‘ನಗದು ಅಭಿವೃದ್ಧಿ ಇಲಾಖೆ ಎಂದರೆ ಅವರದ್ದೇನಾ? ಅವರು ತಿಹಾರ್ ಜೈಲಿನ ವಿಷಯವನ್ನೂ ಪ್ರಸ್ತಾಪ ಮಾಡಿದ್ದಾರೆ, ಸರಿ. ಆದರೆ, ತಿಹಾರಿಗೆ ಹೋಗುವ ಭಯ ಅಥವಾ ಗ್ಯಾರಂಟಿ ಸ್ವತಃ ಅವರಿಗೇ ಇದೆ ಎನ್ನುವುದು ನನ್ನ ಸ್ಪಷ್ಟ ಅನುಮಾನ. ಇಲ್ಲದಿದ್ದರೆ ಅವರು ಇಷ್ಟು ತೀವ್ರವಾಗಿ ನನ್ನ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ. ಅಂದಹಾಗೆ, ನಾನು ಐಟಿ ಪ್ರತಿನಿಧಿಯೂ ಅಲ್ಲ, ಈಡಿ ಉದ್ಯೋಗಿಯೂ ಅಲ್ಲ. ಒಬ್ಬ ಹುಲು ಮಾನವನಷ್ಟೇ.. ಕೆಲವರ ಭ್ರಮೆಗಳಿಗೆ ನಾನೇನು ಮಾಡಲಿ?’ ಎಂದು ಅವರು ಕೇಳಿದ್ದಾರೆ.

‘ಶೇ.40ರಷ್ಟು ಕಮೀಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇವರಲ್ಲವೇ? ಆದರೆ, ಇವರ ಪಸರ್ಂಟೇಜ್ ಬಗ್ಗೆಯೇ ಹೇಳಿದರೆ ಕೋಪ ಬರುತ್ತದೆ. ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ ಆ ಕಪ್ಪು ಹಣ ಯಾರದ್ದು? ಆ ಗುತ್ತಿಗೆದಾರ ಯಾರ ಪರಮಾಪ್ತ ಎನ್ನುವುದು ಜಗಜ್ಜಾಹೀರು. ಹೀಗಿದ್ದ ಮೇಲೆ ಸತ್ಯ ಮುಚ್ಚಿಟ್ಟರೆ ಶಿವ ಮೆಚ್ಟುತ್ತಾನೆಯೇ?’ ಎಂದು ಟೀಕಿಸಿದ್ದಾರೆ.

‘ಮಾತೆತ್ತಿದರೆ ತನಿಖೆ, ಆಯೋಗ ಎಂದು ಜಪಿಸುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ಗುತ್ತಿಗೆದಾರರ ಮನೆಗಳಲ್ಲಿ ಕಂತೆಕಂತೆಯಾಗಿ ಸಿಕ್ಕಿಬಿದ್ದಿರುವ ಕನಕ ಮಹಾಲಕ್ಷ್ಮಿ ಬಗ್ಗೆ ಸತ್ಯ ಹೇಳಬೇಕಲ್ಲವೇ? ಎಷ್ಟೇ ಆಗಲಿ, ಒಬ್ಬರು ಸಿದ್ದಪುರುಷರು! ಇನ್ನೊಬ್ಬರು ಸತ್ಯಪುರುಷರು!! ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ. ಅದು ಯಾವ ತನಿಖೆ ಎಂದು ಅವರೇ ಬಾಯಿ ಬಿಟ್ಟು ಹೇಳಲಿ’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News