ದಂಡ ಕಟ್ಟಿದ್ದೇನೆ, ‘ಕರೆಂಟ್ ಕಳ್ಳ’ ಎನ್ನುವುದು ನಿಲ್ಲಿಸಿ: ಎಚ್.ಡಿ.ಕುಮಾರಸ್ವಾಮಿ

Update: 2023-11-17 17:21 GMT

ಬೆಂಗಳೂರು, ನ.17: ದೀಪಾವಳಿ ಸಂದರ್ಭದಲ್ಲಿ ಮನೆಯಲ್ಲಿ ನಡೆದ ಅಚಾತುರ್ಯದ ನಂತರ ಬೆಸ್ಕಾಂಗೆ ದಂಡ ಪಾವತಿಸಿದ್ದು, ಕರೆಂಟ್ ಕಳ್ಳ ಎಂದು ಟೀಕಿಸುವುದನ್ನು ನಿಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನನಗೆ ಕರೆಂಟ್ ಕಳ್ಳ ಎನ್ನುವ ಹಣೆಪಟ್ಟಿ ಅನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಅವರ ಪಟಾಲಂ ನಾಮಕಾರಣ ಮಾಡಿದೆ. ಆದರೆ, ಇಂತಹ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು ಎಂದರು.

ನನ್ನ ಮನೆಗೆ ನಾನು 33 ಕೆವಿ ಅನುಮತಿ ಪಡೆದಿದ್ದೇನೆ. ವಿದ್ಯುತ್ ಕಳವು ಆರೋಪದಲ್ಲಿ 2.5 ಕೆವಿ ವಿದ್ಯುತ್ ಪಡೆಯಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಅಸಲಿಗೆ 1 ಕೆವಿ ವಿದ್ಯುತ್ ಮಾತ್ರ ನಮ್ಮ ಮನೆಯ ಲೈಟಿಂಗ್‍ಗೆ ಬಳಕೆ ಮಾಡಲಾಗಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು 2.5 ಕೆವಿ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾನು ಬಳಕೆ ಮಾಡಿರುವುದು 71 ಯುನಿಟ್. ಅದಕ್ಕೆ 3 ಪಟ್ಟು ದಂಡ ಅಂದರೂ 2,526 ರೂ. ಆಗುತ್ತದೆ. ಆದರೆ ಬೆಸ್ಕಾಂನವರು 68 ಸಾವಿರ ದಂಡ ಪಾವತಿ ಮಾಡಲು ಹೇಳಿದೆ. ನನ್ನ ಮನೆಗೆ ಅನುಮತಿ ಪಡೆದಿರೋ 33 ಕೆವಿಗೂ 66 ಸಾವಿರ ಬಿಲ್ ಹಾಕಿ.ಒಟ್ಟಾರೆ 68,526 ಬಿಲ್ ಹಾಕಿದೆ. ನಿಯಮದ ಪ್ರಕಾರ ಬಿಲ್ ಹಾಕದೇ ಹೆಚ್ಚುವರಿ ಬಿಲ್ ಹಾಕಿದೆ. ಮಾಜಿ ಮುಖ್ಯಮಂತ್ರಿ ಒಬ್ಬರಿಗೇ ಹೀಗಾದರೆ ಸಾಮಾನ್ಯ ಜನರ ಕತೆ ಏನು? ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ಬೆಸ್ಕಾಂ ನವೆರಿಗೆ ಮರು ಪರಿಶೀಲನಾ ಪತ್ರ ಬರೆದಿದ್ದೇನೆ ಹಾಗೂ ದಂಡವನ್ನೂ ಕಟ್ಟಿದ್ದೇನೆ. ಆದರೆ ಇಷ್ಟು ಬಿಲ್ ಯಾಕೆಂದು ವಿವರಣೆ ಕೊಡಿ ಎಂದು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರ ಬರೆದಿದ್ದೇನೆ. ಬೆಸ್ಕಾಂ ವಿಜಿಲೆನ್ಸ್ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಲುಲು ಮಾಲ್‍ಗೆ ಬಳಸಿದ್ದ ಬಿಲ್‍ಗೆ ದಂಡ ಕಟ್ಟಿದ್ದಾರಾ?: ‘ಬೆಂಗಳೂರಿನಲ್ಲಿ ಆಕಾಶದ ಎತ್ತರಕ್ಕೆ ಕಟ್ಟಿರುವ ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂ ವಿಚಕ್ಷಣ ದಳ ಮಾಹಿತಿ ನೀಡುತ್ತಾ? ಅದರ ಬಗ್ಗೆ ಇರುವ ಮಾಹಿತಿಯನ್ನು ಅವರು ಬಹಿರಂಗ ಮಾಡುತ್ತಾರಾ?’ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಲುಲು ಮಾಲ್ ಆರಂಭಕ್ಕೆ ಮೊದಲು 6 ತಿಂಗಳು ವಿದ್ಯುತ್ ಬಿಲ್ ಕಟ್ಟಲು ಬಿಟ್ಟಿಲ್ಲ. ಹಾಗಾದರೆ, ಅವರು ಎಲ್ಲಿಂದ ವಿದ್ಯುತ್ ಬಳಿಸಿದರು. ಆಕಾಶದಿಂದ ವಿದ್ಯುತ್ ಉತ್ಪಾದನೆ ಮಾಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಇವರ ಯೋಗ್ಯತೆಗೆ ನನ್ನನ್ನು ಕಳ್ಳ ಕಳ್ಳ ಎನ್ನುತ್ತಾರೆಂದು ಲುಲು ಮಾಲ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News