ಒಳಮೀಸಲಾತಿ ಜಾರಿಗೆ ಸರಕಾರ ಬದ್ಧ : ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು : ಪರಿಶಿಷ್ಟರ ಒಳಮೀಸಲಾತಿ ಜಾರಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ದತ್ತಾಂಶವನ್ನು ಆಧರಿಸಿ ಯಾರಿಗೂ ಅನ್ಯಾಯ ಆಗದಂತೆ ಕ್ರಮ ವಹಿಸಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಆಕ್ಷೇಪಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಚಿವರು, ಶಾಸಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ 2024ರ ಆ.1ರಂದು ತೀರ್ಪು ನೀಡಿದ್ದು, ಆಯಾ ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರ ನೀಡಿದೆ. ಈ ತೀರ್ಪಿನಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಆ ಹಿನ್ನೆಲೆಯ್ಲಲಿ ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ಒಪ್ಪಿಗೆಯನ್ನು ನೀಡಿದ್ದು, ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗಿದೆ. ಈ ಆಯೋಗ 3 ತಿಂಗಳೊಳಗೆ ಸರಕಾರಕ್ಕೆ ತನ್ನ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಲ್ಲದೆ, ಒಳಮೀಸಲಾತಿ ಜಾರಿಗೆ ಬರುವವರೆಗೂ ಸರಕಾರದ ಎಲ್ಲ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸದಿರಲು ತೀರ್ಮಾನಿಸಿದೆ ಎಂದು ಅವರು ವಿವರಣೆ ನೀಡಿದರು.
ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಒಳಮೀಸಲಾತಿ ಜಾರಿಗೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವರ ಕಚೇರಿಯಲ್ಲಿ ಪರಿಶಿಷ್ಟ ಜಾತಿ(ಎಸ್‍ಸಿ) ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಆರ್.ಬಿ. ತಿಮ್ಮಾಪೂರ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶಾಸಕರಾದ ಅಭಯ್ಯ ಪ್ರಸಾದ್, ನರೇಂದ್ರಸ್ವಾಮಿ, ರೂಪಕಲಾ ಎಂ., ಎ.ಆರ್.ಕೃಷ್ಣಮೂರ್ತಿ, ನಯಾನ ಮೋಟಮ್ಮ, ಕೆ.ಎಸ್.ಬಸವಂತಪ್ಪ, ಎ.ಸಿ.ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ, ಡಾ.ತಿಮ್ಮಯ್ಯ, ಸುಧಾಮ ದಾಸ್ ಸಭೆ ಸೇರಿ ಒಳಮೀಸಲಾತಿ ಜಾರಿಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಆದರೆ, ಕೆಲ ಹೋರಾಟಗಾರರು ಹಾಗೂ ವಿಪಕ್ಷಗಳ ರಾಜಕೀಯ ಲಾಭಕ್ಕಾಗಿ ಸರಕಾರದ ವಿರುದ್ಧ ಅಪಪ್ರಚಾರ ಹಾಗೂ ತಪ್ಪು ಮಾಹಿತಿ ಹರಡುವ ಕೆಲಸ ಮಾಡುತ್ತಿರುವುದು ವಿಷಾದಕರ. ಕೆಲ ನಾಯಕರ ವಿರುದ್ಧ ಅಪಮಾನಕಾರಕ ಶಬ್ದಗಳನ್ನು ಬಳಸುತ್ತಿರುವುದು ಸೂಕ್ತವಲ್ಲ. ಸಮುದಾಯದ ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಯಾವುದೇ ರೀತಿಯ ಅಶಾಂತಿ ಮೂಡಿಸುವ ದೂರವಿರಬೇಕೆಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
‘ಒಳಮೀಸಲಾತಿ ಜಾರಿಗೆ ಇನ್ನೂ 3 ತಿಂಗಳ ವರೆಗೂ ಶಾಂತಿಯಿಂದ ಇರಬೇಕು ಪರಿಶಿಷ್ಟ ಜಾತಿ (ಎಸ್‍ಸಿ)ಯಲ್ಲಿನ ಆದಿ ಕರ್ನಾಟಕ(ಎಕೆ) ಮತ್ತು ಆದಿದ್ರಾವಿಡ(ಎಡಿ) ಜಾತಿ ದೃಢೀಕರಣ ಪತ್ರದ ಗೊಂದಲವಿದ್ದು, ಅದನ್ನು ನಿವಾರಣೆ ಮಾಡಿದ ಬಳಿಕ ಸೂಕ್ತ ದತ್ತಾಂಶವನ್ನು ಆಧರಿಸಿ ಒಳಮೀಸಲಾತಿ ಜಾರಿ ನಿಶ್ಚಿತವಾಗಿಯೂ ಆಗಲಿದೆ. ಈ ಬಗ್ಗೆ ಸಮುದಾಯದ ಯಾರಿಗೂ ಸಂಶಯಬೇಡ’ ಎಂದು ಮುನಿಯಪ್ಪ ಭರವಸೆ ನೀಡಿದರು.
ದುರ್ಬಳಕೆ ಸರಿಯಲ್ಲ: ಒಳಮೀಸಲಾತಿ ಅನುಷ್ಠಾನಕ್ಕೆ ಎಸ್‍ಸಿ ಸಮುದಾಯದ ಯಾವ ಸಚಿವರು, ಶಾಸಕರು ವಿರೋಧ ವ್ಯಕ್ತಪಡಿಸಿಲ್ಲ. ಹೋರಾಟಗಾರರು ಆವೇಶದಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಸರಕಾರದ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುವುದು ಬೇಡ. ಸೂಕ್ತ ದತ್ತಾಂಶ ಆಧರಿಸದೆ ಮೀಸಲಾತಿ ಜಾರಿಗೆ ಸರಕಾರ ಬದ್ಧ. ಆದರೆ, ವಿಪಕ್ಷಗಳ ರಾಜಕೀಯ ದಾಳಕ್ಕೆ ಯಾರೂ ಬಲಿಯಾಗಬಾರದು ಎಂದು ಸುದ್ದಿಗೋಷ್ಠಿಯಲ್ಲಿದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ ಕೆ.ಎಸ್.ವಸವಂತಪ್ಪ, ಡಾ.ತಿಮ್ಮಯ್ಯ, ಕೆಪಿಸಿಸಿ ಎಸ್‍ಸಿ ಘಟಕದ ಅಧ್ಯಕ್ಷ ಧರ್ಮಸೇನಾ, ವಸಂತಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
‘ರಾಜ್ಯದಲ್ಲಿನ 1.04ಕೋಟಿ ಪರಿಶಿಷ್ಟ ಜಾತಿ(ಎಸ್‍ಸಿ)ಯ ಜನಸಂಖ್ಯೆಯಲ್ಲಿನ ಆದಿ ಕರ್ನಾಟಕ (ಎಕೆ) ಮತ್ತು ಆದಿ ದ್ರಾವಿಡ (ಎಡಿ) ಸಮುದಾಯದ ಪೈಕಿ 7 ಲಕ್ಷಕ್ಕೂ ಅಧಿಕ ಮಂದಿಯ ಉಪಜಾತಿಯ ಗೊಂದಲವಿದೆ. ಅಲ್ಲದೆ, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಾತಿ ದೃಢೀಕರಣ ಪತ್ರದ ಗೊಂದಲವಿದೆ. ಹೀಗಾಗಿ ನ್ಯಾ. ನಾಗಮೋಹನ್ ದಾಸ್ ಸಮಿತಿ ಸೂಕ್ತ ಗಣತಿ ನಡೆಸಿ ಒಳಮೀಸಲಾತಿ ಜಾರಿಗೆ ಕ್ರಮ ವಹಿಸಲಿದೆ’
-ಡಾ.ಎಲ್.ಹನುಮಂತಯ್ಯ ರಾಜ್ಯಸಭೆ ಮಾಜಿ ಸದಸ್ಯ
ತಪ್ಪು ಸಂದೇಶ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಯಾರಿಗೂ ಅನ್ಯಾಯ ಆಗದಂತೆ ಅನ್ಯಾಯವನ್ನು ಒಳಮೀಸಲಾತಿ ಜಾರಿಗೊಳಿಸಲಿದೆ. ಅಲ್ಲಿಯ ವರೆಗೆ ಬ್ಯಾಕ್‍ಲಾಗ್ ಸೇರಿ ಯಾವುದೇ ಹೊಸ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಹೋರಾಟಗಾರರು ತಾಳ್ಮೆಯಿಂದ ಇರಬೇಕು. ಅನಗತ್ಯ ಟೀಕೆ ಮಾಡುವ ಮೂಲಕ ಸಮುದಾಯಕ್ಕೆ ತಪ್ಪು ಸಂದೇಶ ನೀಡುವುದು ಸರಿಯಲ್ಲ’
-ಎಚ್.ಆಂಜನೇಯ ಮಾಜಿ ಸಚಿವ