ವಿಧಾನ ಪರಿಷತ್ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ಜೋರು !
ಬೆಂಗಳೂರು: ಲೋಕಸಭಾ ಚುನಾವಣಾ ಬೆನ್ನಲ್ಲೆ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜೂನ್ 13ರಂದು ನಡೆಯಲಿರುವ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ತೀವ್ರವಾಗಿದೆ. ಅಭ್ಯರ್ಥಿಗಳ ಆಯ್ಕೆಯ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ವಿಧಾನಪರಿಷತ್ತಿನ ಚುನಾವಣೆ ನಡೆಯಲಿರುವ ಒಟ್ಟು 11 ಸ್ಥಾನಗಳ ಪೈಕಿ ಗೆಲ್ಲಲು ಅವಕಾಶ ಇರುವ ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.
ಬಿಜೆಪಿ ತೊರೆದು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾದವರೂ ಸೇರಿದಂತೆ ಪಕ್ಷ ಸಂಘಟನೆಗಾಗಿ ದುಡಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂಬ ಒತ್ತಾಸೆಯನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಪರಾಭವಗೊಂಡಿರುವವರು, ಕ್ಷೇತ್ರವನ್ನು ಬೇರೆ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟಿರುವವರು, ಪಕ್ಷದಲ್ಲಿನ ಮುಂಚೂಣಿ ಘಟಕದ ಅಧ್ಯಕ್ಷರು ಹಾಗೂ ಈವರೆಗೆ ಪಕ್ಷದಲ್ಲಿ ಯಾವುದೆ ಅಧಿಕಾರವನ್ನು ಅನುಭವಿಸದವರು ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಾಗಿದ್ದಾರೆ. ವಲಯವಾರು, ಸಮುದಾಯವಾರು ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ 21, ಚಿಕ್ಕಮಗಳೂರು ಜಿಲ್ಲೆಯಿಂದ 9 ಮಂದಿ ಆಕಾಂಕ್ಷಿಗಳಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಿಂದಲೂ ಆಕಾಂಕ್ಷಿಗಳಿದ್ದಾರೆ.
ಆ ಹಿನ್ನೆಲೆಯಲ್ಲಿ ಸಮುದಾಯವಾರು ದಲಿತ, ಹಿಂದುಳಿದ, ಮುಸ್ಲಿಮ್, ಕ್ರೈಸ್ತ, ಮಹಿಳೆ ಸೇರಿದಂತೆ ವಿವಿಧ ಜನವರ್ಗಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳಿದ್ದು, ಜೂನ್ 2ರಂದು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಆಕಾಂಕ್ಷಿಗಳ ದಂಡು: ವಿಧಾನಸಭಾ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ಸಚಿವ ಎನ್.ಎಸ್. ಬೋಸರಾಜು, ಹಾಲಿ ಸದಸ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಕಾರ್ಯಾಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ವಿ.ಆರ್. ಸುದರ್ಶನ್, ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ ಎ ಬಾವಾ, ಇಸ್ಮಾಯಿಲ್ ತಮಟಗಾರ್ , ಬಿ.ವಿ.ಶ್ರೀನಿವಾಸ್, ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರ ಹೆಸರು ಮುಂಚೂಣಿಯಲ್ಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವಲ್ಲಿ ನಿರ್ಣಾಯಕ ಬೆಂಬಲ ನೀಡಿರುವ ಮುಸ್ಲಿಂ ಸಮುದಾಯ ಸರಕಾರ ಬಂದ ಮೇಲೆ ಅಧಿಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನದಲ್ಲಿದೆ. ಈ ಸರಕಾರ ಬಂದ ಮೇಲೆ ಆಗಿರುವ ಈವರೆಗಿನ ಆರು ಪರಿಷತ್ ನೇಮಕಾತಿಯಲ್ಲೂ ಮುಸ್ಲಿಮರಿಗೆ ಅವಕಾಶ ಸಿಕ್ಕಿಲ್ಲ. ಎಮ್ಮೆಲ್ಲೆ, ಎಂಪಿ ಟಿಕೇಟು ಕೊಟ್ಟರೆ ಮುಸ್ಲಿಮರು ಗೆಲ್ಲೋದು ಕಷ್ಟ , ನಾವು ಎಮ್ಮೆಲ್ಸಿ ಸ್ಥಾನ ಕೊಡ್ತೀವಿ ಅಂತ ಕಾಂಗ್ರೆಸ್ ಮುಖಂಡರೂ ಸಮುದಾಯಕ್ಕೆ ಭರವಸೆ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಈ ಬಾರಿ ದಕ್ಷಿಣ ಕರ್ನಾಟಕದ ಒಬ್ಬರು ಹಾಗು ಉತ್ತರ ಕರ್ನಾಟಕದ ಒಬ್ಬರು - ಹೀಗೆ ಇಬ್ಬರು ಮುಸ್ಲಿಮ್ ನಾಯಕರಿಗೆ ಎಮ್ಮೆಲ್ಸಿ ಸ್ಥಾನ ಸಿಗಬೇಕು ಎಂಬ ಆಗ್ರಹ ಸಮುದಾಯದಿಂದ ಬಲವಾಗಿ ಕೇಳಿ ಬಂದಿದೆ. ಆ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ ಇಸ್ಮಾಯಿಲ್ ತಮಟಗಾರ್ ಹಾಗು ಮಂಗಳೂರು / ಬೆಂಗಳೂರು ಕೋಟಾದಿಂದ ನಿವೃತ್ತ ಪೊಲೀಸ್ ಅಧಿಕಾರಿ, ಕಾಂಗ್ರೆಸ್ ಮುಖಂಡ ಜಿ ಎ ಬಾವಾ ಪರ ಪ್ರಬಲ ಲಾಬಿ ನಡೆಯುತ್ತಿದೆ. ಇವರಿಗೆ ಕಾಂಗ್ರೆಸ್ ಸಚಿವರ ಬೆಂಬಲವೂ ಇದೆಯೆಂದು ಹೇಳಲಾಗುತ್ತಿದೆ. ಈ ಆಗ್ರಹಕ್ಕೆ ಕಾಂಗ್ರೆಸ್ ಹೈಕಮಾಂಡ್ ಹೇಗೆ ಸ್ಪಂದಿಸಲಿದೆ ಎಂದು ಕಾದು ನೋಡಬೇಕಾಗಿದೆ.
ಕ್ರೈಸ್ತರಿಗೂ ಒಂದು ಸ್ಥಾನ ನೀಡಬೇಕು ಎಂಬ ಆಗ್ರಹವಿದೆ.
ಜೂನ್ 2ರಂದು ಸಿಎಲ್‌ಪಿ ಸಭೆ: ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಮ್ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜೂನ್ 2ರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಪರಿಷತ್ ಚುನಾವಣೆ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗಳ ಸಂಬಂಧ ಚರ್ಚಿಸಲಾಗುವುದು ಎಂದು ಪಕ್ಷ ಮೂಲಗಳು ತಿಳಿಸಿವೆ. ಜೂನ್ 2ರ ಪಕ್ಷದ ಶಾಸಕಾಂಗ ಪಕ್ಷದ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ನಾಮಪತ್ರ ಸಲ್ಲಿಸಲು ಜೂ. 3 ಕೊನೆಯ ದಿನ: ಈಗಾಗಲೇ ಚುನಾವಣಾ ಅಧಿಸೂಚನೆ ಹೊರಬಿದಿದ್ದು, ಜೂನ್ 3ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 4 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಜೂನ್ 6ರಂದು ಕೊನೆಯ ದಿನವಾಗಿದೆ. ಜೂನ್ 13ರ ಬೆಳಗ್ಗೆ 9 ರಿಂದ ಸಂಜೆ 4 ರ ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.
ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ . ಹಲವು ವರ್ಷಗಳಿಂದ ಪಕ್ಷಕ್ಕಾಗಿ ಪೂರ್ಣಾವಧಿ ಕಾರ್ಯಕರ್ತನಾಗಿ ದುಡಿದ್ದಿದ್ದೇನೆ. ಈ ಬಾರಿ ನನಗೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ.
ಜಿ.ಎ.ಬಾವ, ಕಾಂಗ್ರೆಸ್ ನಾಯಕ