ಕೆಎಸ್‍ಡಿಎಲ್: ಮಾರ್ಜಕಗಳ ಮಾರಾಟದಲ್ಲಿ 40 ವರ್ಷಗಳಲ್ಲೇ ದಾಖಲೆ ವಹಿವಾಟು

Update: 2024-01-02 13:48 GMT

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‍ಡಿಎಲ್) 2023ರ ಡಿಸೆಂಬರ್ ತಿಂಗಳೊಂದರಲ್ಲೇ 123.42ಕೋಟಿ ರೂ.ಮೊತ್ತದ 852 ಟನ್ ಮಾರ್ಜಕಗಳನ್ನು (ಡಿಟರ್ಜೆಂಟ್ಸ್ ) ಮಾರಾಟವಾಗಿದ್ದು, 40 ವರ್ಷಗಳ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ ಎಂದು ಸಂಸ್ಥೆ ಅಧ್ಯಕ್ಷರೂ ಆಗಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ‌ʼಕಳೆದ ತಿಂಗಳು ಕೆಎಸ್‍ಡಿಎಲ್ 852 ಟನ್ ಮಾರ್ಜಕಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಅದನ್ನೀಗ ಮುರಿದು, ವಹಿವಾಟಿನಲ್ಲೂ ವಿಕ್ರಮ ಸಾಧಿಸಲಾಗಿದೆ' ಎಂದು ಹೇಳಿದ್ದಾರೆ.

ಕೆಎಸ್‍ಡಿಎಲ್‍ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜೊತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರ ಮಾತ್ರವಿತ್ತು. ಸರಕಾರಿ ಉದ್ದಿಮೆಗಳು ಖಾಸಗಿ ವಲಯದಂತೆಯೇ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಈಗ ಈ ವಿಭಾಗದಲ್ಲಿ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿನಿ ನೀಡಿದ್ದಾರೆ.

ಸಂಸ್ಥೆಯು ಮೊದಲಿನಿಂದಲೂ ಸಾಬೂನು ತಯಾರಿಕೆಗೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ಅದರ ಸುತ್ತಲೇ ಕೇಂದ್ರೀಕೃತವಾಗಿತ್ತು. ಇತ್ತೀಚೆಗೆ ಮಾರ್ಜಕಗಳ ಮಾರಾಟಕ್ಕೂ ಹೆಚ್ಚಿನ ಗಮನ ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಫಲ ನೀಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಕಂಪೆನಿಗಳ ಮಾರ್ಜಕಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆ ಜಾಲವನ್ನು ಅಖಿಲ ಭಾರತ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 2023-24ನೆ ಹಣಕಾಸು ವರ್ಷದಲ್ಲಿ ಡಿಸೆಂಬರ್ ಅಂತ್ಯದ ವರೆಗೆ ಸಾಬೂನು, ಮಾರ್ಜಕ ಮತ್ತು ಕಾಸ್ಮೆಟಿಕ್ಸ್ ಉತ್ಪಾದನೆ ನಿಗದಿತ ಗುರಿಗಿಂತ ಹೆಚ್ಚಾಗಿದೆ. ಸಂಸ್ಥೆಯು ಕಳೆದ ಸಾಲಿನಲ್ಲಿ 118ಕೋಟಿ ರೂ.ಲಾಭ ಗಳಿಸಿತ್ತು. ಈ ಹಣಕಾಸು ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆಯು 1,171ಕೋಟಿ ರೂ. ಮೊತ್ತದಷ್ಟು ವಹಿವಾಟು ನಡೆಸಿದೆ. ಈ ವರ್ಷಕ್ಕೆ ಒಟ್ಟು 1,404 ಕೋಟಿ ರೂ.ವಹಿವಾಟು ನಿಗದಿ ಪಡಿಸಲಾಗಿದ್ದು, ಇದನ್ನು ಮೀರುವುದರಲ್ಲಿ ಅನುಮಾನವಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News