ʼINDIAʼ ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿ ಕೊಟ್ಟ ಕಾಂಗ್ರೆಸ್‌: ಕುಮಾರಸ್ವಾಮಿ ಆರೋಪ

Update: 2023-08-17 06:58 GMT

ಬೆಂಗಳೂರು: ʼʼಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು, ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್‌ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆʼʼ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. 

ಈ ಸಂಬಂಧ ಗುರುವಾರ ಟ್ವೀಟ್‌ ಮಾಡಿರುವ ಅವರು, ʼʼಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ?ʼʼ ಎಂದು ಕಿಡಿಕಾರಿದ್ದಾರೆ. 

ʼʼ2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರಕಾರ! ತಮಿಳುನಾಡಿಗೆ ಬೆದರಿ ಶರಣಾಗಿದೆ!!ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು,ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟುʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ʼʼ1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ಮಾಜಿ ಪ್ರಧಾನಿ ಎಚ್.‌ಡಿ ದೇವೇಗೌಡ ಅವರು ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತೀ ಸರಕಾರವೂ ಕೇಂದ್ರಕ್ಕೆ ಸಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರಕಾರವು, ನೆರೆರಾಜ್ಯ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈ ಚೆಲ್ಲಿದೆʼʼ ಎಂದು ಟೀಕಿಸಿದ್ದಾರೆ. 

ʼʼ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು?ʼʼ

ʼʼಸಂಕಷ್ಟ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಸರಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಿಲ್ಲ, ಯಾಕೆ? ಕಾನೂನು ತಜ್ಞರ ಜತೆ, ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ.ʼʼ ಎಂದು ಅವರು ಆಗ್ರಹಿಸಿದ್ದಾರೆ.

ʼʼಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿವರ್ಯರು, ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋʼʼ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. 

ʼʼತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ?ʼʼ ಎಂದು ಕಿಡಿಕಾರಿದ್ದಾರೆ. 

ʼʼಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ.. ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ?ʼʼ ಎಂದು ತರಾಟೆಗೆ ತೆಗದುಕೊಂಡಿದ್ದಾರೆ. 

ʼʼಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ! ಕಾವೇರಿ ಪಾಲಿಗೆ ಆ ಪಕ್ಷ ನಯವಂಚನೆ,ನಂಬಿಕೆ ದ್ರೋಹದ ಪ್ರತೀಕ.ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕೊಳ್ಳಿ ಇಡುವ ಕೆಲಸ ಮಾಡಿಬಿಟ್ಟಿದೆ.ಈ ಅನ್ಯಾಯ ಸಹಿಸುವ ಪ್ರಶ್ನೆಯೇ ಇಲ್ಲ.ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟಸೂತ್ರದ ಪಾಲನೆಗೆ ಒತ್ತಡ ಹೇರಬೇಕುʼʼ ಎಂದು ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News