ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: ಸುವರ್ಣಸೌಧದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಬೆಳಗಾವಿ ಸುವರ್ಣಸೌಧದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಸುನಿಲ್ ಕುಮಾರ್, ಅಶ್ವತ್ಥ ನಾರಾಯಣ, ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಮತ್ತಿತರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರ ಕುತಂತ್ರದಿಂದ ಲಾಠಿ ಚಾರ್ಜ್ ಮಾಡಲಾಗಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣ ವಚನ ಹೇಳುವ ಸಿದ್ದರಾಮಯ್ಯ ಬಸವಣ್ಣ ಅವರ ಅನುಯಾಯಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ವ್ಯವಸ್ಥಿತವಾಗಿ ಗಲಭೆ ಮಾಡಲು, ಶಾಂತಿ ಕದಡಲು ಕುತಂತ್ರ ಮಾಡಿ ಲಾಠಿ ಚಾರ್ಜ್ ಮಾಡಲಾಗಿದೆ. ಕೂಡಲೇ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯದ ಕ್ಷಮೆ ಕೇಳಬೇಕು. ಲಾಠಿ ಚಾರ್ಜ್ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕೈಯಲ್ಲಿ ಶರಣು ಕಂಕುಳಲ್ಲಿ ದೊಣ್ಣೆ ಇದು ಸಿಎಂ ಸಿದ್ದರಾಮಯ್ಯ ನೀತಿ. ನಿಜಲಿಂಗಪ್ಪ ಕಾಲದಿಂದ ಲಿಂಗಾಯತ ಸಮುದಾಯದ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಾ ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆ ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದರು. ನುಡಿದಂತೆ ಕಾಂಗ್ರೆಸ್ ನಡೆದಿಲ್ಲ, ಬದಲಾಗಿ ಜನರನ್ನು ಹತ್ತಿಕ್ಕುವಂತಹ ಕೆಲಸ ಮಾಡಲಾಗಿದೆ.
ಧರ್ಮ ಜಾತಿ ನಡುವೆ ವಿಷಬಿತ್ತಲಾಗುತ್ತಿದೆ. ಲಿಂಗಾಯತರ ವಿರುದ್ಧ ಹಿಂದಿಳಿದ ವರ್ಗಗಳ ಮುಖಂಡರನ್ನು ಎತ್ತಿಕಟ್ಟಲಾಗುತ್ತಿದೆ. ಸಿಎಂ ಆಗುವುದಕ್ಕೆ ಸಿದ್ದರಾಮಯ್ಯ ಯೋಗ್ಯರಾ? ಕೇಸ್ ಕೂಡಲೇ ವಾಪಸ್ ಪಡೆಯಬೇಕು. ಇಲ್ಲಾಂದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೇ ಲಾಠಿ ಚಾರ್ಜ್ ಮಾಡಲಾಗಿದೆ. ಒಡೆದಾಳುವ ನೀತಿಯನ್ನು ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚಲು ಹೊರಟಿದ್ದರು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇಲ್ಲವೇ? ಮೀಸಲಾತಿ ಹೋರಾಟ ನಡೆಸುತ್ತಿರುವ ಸ್ವಾಮೀಜಿ ಯನ್ನು ಭೇಟಿ ಮಾಡಿ ಅಹವಾಲನ್ನು ಸ್ವೀಕಾರ ಮಾಡಬಹುದಿತ್ತು. ಅಧಿಕಾರ ಶಾಶ್ವತ ಅಲ್ಲ, ಅಧಿಕಾರ ಇದ್ದಾಗ ಅದನ್ನು ಯಾವ ರೀತಿಯಲ್ಲಿ ಸದುಪಯೋಗ ಮಾಡಿಕೊಂಡಿದ್ದೀರಿ ಎಂಬುದು ಮುಖ್ಯ ಎಂದರು.
ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಅಪರಾಧ. ಸಿಎಂ ಸಿದ್ದರಾಮಯ್ಯ ಕೂಡಲೇ ಕ್ಷಮಾಪಣೆ ಕೇಳಬೇಕು. ಹಾಗೂ ಲಾಠಿ ಚಾರ್ಜ್ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಏನಿದು ಗಲಾಟೆ?
ಪಂಚಮಸಾಲಿ ಸಮುದಾಯದವನ್ನು 2 ಎ ಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
ಈ ವೇಳೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆದಿತ್ತು. ಕಲ್ಲು ತೂರಾಟ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಆದರೆ ಬಿಜೆಪಿ ನಾಯಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.