ಜನರ ಸಮಸ್ಯೆ ಆಲಿಸಲು ಜೊತೆಯಾಗಿ ಹೋಗೋಣ ಬನ್ನಿ: ಡಿಕೆಶಿಗೆ ಯಡಿಯೂರಪ್ಪ ಆಹ್ವಾನ
ಬೆಂಗಳೂರು, ನ.11: ಜನರ ಸಮಸ್ಯೆಗಳನ್ನು ಆಲಿಸಲು ಜೊತೆಯಾಗಿ ಹೋಗೋಣ, ನೀವೂ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.
ಶುಕ್ರವಾರ ದಾಸರಹಳ್ಳಿ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಾಣಾವರ ಕೆರೆ ಯಾವ ಸ್ಥಿತಿಯಲ್ಲಿದೆ ಎಂದು ನೋಡಿದ್ದೇನೆ. ಉಪಮುಖ್ಯಮಂತ್ರಿ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೆಂಗಳೂರು ನೋಡುತ್ತಿರುತ್ತಾರೆ. ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಯಾವುದೆ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಅಭಿವೃದ್ಧಿ ಅಡಿಯಲ್ಲಿ 110 ಹಳ್ಳಿಗೆ ಬಿಡುಗಡೆ ಆಗಿದ್ದ ಹಣ ವಾಪಸ್ ಪಡೆದಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೆ ಅತಿ ಹೆಚ್ಚು ತೆರಿಗೆ ನೀಡುತ್ತದೆ. ಆ ಪ್ರದೇಶವನ್ನೆ ಸರಕಾರ ಕಡೆಗಣನೆ ಮಾಡಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ಸರಬರಾಜು ಸರಿಯಾಗಿ ನಡೆದಿಲ್ಲ. ಒಳಚರಂಡಿ ಸಂಪೂರ್ಣ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಚಿಕ್ಕಬಾಣಾವರ ಕೆರೆ ಒಳಚರಂಡಿ, ತಾಜ್ಯದಿಂದ ತುಂಬಿದೆ. ಇದರ ಪುನರುಜ್ಜೀವನ ಮಾಡುವ ನಿಟ್ಟಿಗೆ ಮುಂದಾಗಬೇಕಿದೆ. ಕೆಆರ್‍ಐಡಿಎಲ್ ಮೂಲಕ ಅಭಿವೃದ್ದಿ ಮಾಡಬೇಕಿದೆ. ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡಲು ಸಾಧ್ಯವಿಲ್ಲದ್ದಷ್ಟು ಈ ಸರಕಾರ ದಿವಾಳಿ ಆಗಿದೆಯೆ ಎಂದು ಅವರು ಪ್ರಶ್ನಿಸಿದರು.
ಸರಕಾರ ಸುಮ್ಮನೆ ದಿನ ದೂಡುತ್ತಿದೆ. ಒಂದೆ ಒಂದು ಕಡೆ ಒಂದು ಕಿ.ಮೀ ರಸ್ತೆ ಮಾಡಿಲ್ಲ. ಸರಕಾರವು ಜನವಿರೋಧಿ ಕೆಲಸ ಮಾಡುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿದೆ. ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವ ಕೆಲಸ ಮಾಡುತ್ತಿಲ್ಲ. ವಿಪಕ್ಷ ಅನ್ನೊ ಕಾರಣಕ್ಕೆ ಕೊಟ್ಟಿರುವ ಅನುದಾನ ವಾಪಸ್ ಪಡೆಯಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹೋರಾಟ ಮಾಡುವ ಮೊದಲು ಸಮಸ್ಯೆ ಬಗೆಹರಿಸಿ ಎಂದು ಅವರು ಎಚ್ಚರಿಕೆ ನೀಡಿದರು.
ಬ್ರ್ಯಾಂಡ್ ಬೆಂಗಳೂರು ಬಗ್ಗೆ ಸುಮ್ಮನೆ ಬೊಗಳೆ ಬಿಡೋದಲ್ಲ. ವಾಸ್ತವ ವಿಚಾರ ಮಾತಾಡಬೇಕು. ಬನ್ನಿ ಜನರ ಮಧ್ಯದಲ್ಲಿ ಕುಳಿತು ಉಪ ಮುಖ್ಯಮಂತ್ರಿ ಮಾತನಾಡಲಿ.ಬರ ಅಧ್ಯಯನ ವರದಿ ತಯಾರಿ ಮಾಡಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಒಂದು ವರದಿ ಕೊಡುತ್ತೇವೆ ಎಂದು ಅವರು ತಿಳಿಸಿದರು.