ಲೋಕಸಭಾ ಚುನಾವಣೆ | ರಾಜ್ಯದ ವಿವಿಧೆಡೆಯಿಂದ 5.63 ಕೋಟಿ ರೂ.ನಗದು ವಶ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಹಾಗೂ ಅಬಕಾರಿ ಇಲಾಖೆಯವರು 5.63 ಕೋಟಿ ರೂ.ನಗದು ಸೇರಿದಂತೆ ಕೋಟ್ಯಂತರ ರೂ.ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆನೇಕಲ್ ನಲ್ಲಿ 2.45 ಕೋಟಿ ರೂ., ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2.02 ಕೋಟಿ ರೂ., ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿನ ಕಡೂರಿನಲ್ಲಿ 13.10 ಲಕ್ಷ ರೂ., ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರಿನಲ್ಲಿ 11.68 ಲಕ್ಷ ರೂ., ಹಾವೇರಿ ಲೋಕಸಭಾ ಕ್ಷೇತ್ರದ ಬ್ಯಾಡಗಿಯಲ್ಲಿ 75 ಲಕ್ಷ ರೂ. ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಗವಾಡದಲ್ಲಿ 16.05 ಲಕ್ಷ ರೂ.ನಗದು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ ತಂಡದವರು 10 ಲಕ್ಷ ರೂ.ಮೌಲ್ಯದ 5.31072 ಕೆಜಿ ತೂಕದ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ 27.46 ಲಕ್ಷ ರೂ.ಮೌಲ್ಯದ 8970 ಲೀಟರ್ ಬಿಯರ್, ವೈಟ್‍ಫೀಲ್ಡ್ ಕಂಟೈನರ್ ಕಾರ್ಪೋರೇಷನ್‍ನ ಗೋದಾಮಿನಲ್ಲಿ 29.33 ಲಕ್ಷ ರೂ.ಮೌಲ್ಯದ 8970 ಲೀಟರ್ ಬಿಯರ್, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ 53.15 ಲಕ್ಷ ರೂ.ಮೌಲ್ಯದ 7344 ಲೀಟರ್ ಮದ್ಯ, ಚಿಕ್ಕಬಳ್ಳಾಪುರದಲ್ಲಿ 44.04 ಲಕ್ಷ ರೂ.ಮೌಲ್ಯದ 7344 ಲೀಟರ್ ಮದ್ಯ, ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ 29.50 ಲಕ್ಷ ರೂ.ಮೌಲ್ಯದ 7344 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 59 ಲಕ್ಷ ರೂ.ಮೌಲ್ಯದ 14688 ಲೀಟರ್ ಮದ್ಯ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ 46.39 ಲಕ್ಷ ರೂ.ಮೌಲ್ಯದ 7344 ಲೀಟರ್ ಮದ್ಯ, ಬೆಂಗಳೂರಿನ ಬಾಗಲಕುಂಟೆಯಲ್ಲಿ 49.88 ಲಕ್ಷ ರೂ.ಮೌಲ್ಯದ 9108 ಲೀಟರ್ ಮದ್ಯ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 49.88 ಲಕ್ಷ ರೂ.ಮೌಲ್ಯದ 9108 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
49 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಎರಡನೆ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲು ಮಂಗಳವಾರ ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 49 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ಪೈಕಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 2, ಬೆಳಗಾವಿ-2, ಬಾಗಲಕೋಟೆ-2, ಬಿಜಾಪುರ-7, ಕಲಬುರಗಿ-1, ರಾಯಚೂರು-2, ಬೀದರ್-7, ಕೊಪ್ಪಳ-5, ಹಾವೇರಿ-2, ಧಾರವಾಡ-9, ಉತ್ತರ ಕನ್ನಡ-4, ದಾವಣಗೆರೆ-3 ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮನೆಯಿಂದ ಮತದಾನ: ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದಿರುವ 48,609 ಮತದಾರರ ಪೈಕಿ 85 ವರ್ಷಕ್ಕಿಂತ ಮೇಲ್ಪಟ್ಟ 27,505 ಹಾಗೂ ಶೇ.40ಕ್ಕಿಂತ ಹೆಚ್ಚಿನ ದಿವ್ಯಾಂಗರಾಗಿರುವ 9,060 ಮತದಾರರು ಈವರೆಗೆ ಮತದಾನ ಮಾಡಿದ್ದಾರೆ.
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 1,789 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ.
ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 2,361 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 3,100 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 134 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 17,217 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1,457 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.