ಲೋಕಸಭಾ ಚುನಾವಣೆ : ನಾಳೆ(ಎ.26) ರಾಜ್ಯದ 14 ಕ್ಷೇತ್ರಗಳಿಗೆ ಮತದಾನ
ಬೆಂಗಳೂರು: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಶುಕ್ರವಾರ (ಎ.26) ಮತದಾನ ನಡೆಯಲಿದೆ. ಗುರುವಾರ ಸಂಜೆ 6 ಗಂಟೆಯ ವರೆಗೆ ಅಭ್ಯರ್ಥಿಗಳಿಗೆ ಮನೆ-ಮನೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಚುನಾವಣಾ ಆಯೋಗವು ಈ 14 ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 2.88 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ತುಮಕೂರು, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆನಂತರ ಬರುವವರಿಗೆ ಮತದಾನಕ್ಕೆ ಅವಕಾಶ ಇರುವುದಿಲ್ಲ. ಕೇವಲ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಅವಕಾಶ ಇರುತ್ತದೆ.
ಕೇಂದ್ರ ಚುನಾವಣಾ ಆಯೋಗವು ಈಗಾಗಲೆ ಮತದಾನಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಾಮಾನ್ಯ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಬಳಿ ಅಗತ್ಯವಿರುವ ಪೊಲೀಸ್ ಹಾಗೂ ಅರೆಸೇನಾ ಪಡೆಯ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಿದೆ.
ಈಗಾಗಲೆ ಮತಗಟ್ಟೆಗಳಿಗೆ ಬಿಗಿ ಬಂದೋಬಸ್ತ್ ನಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ, ಅಧಿಕಾರಿಗಳು ಮತಯಂತ್ರ ಸೇರಿದಂತೆ ಇತರ ಅಗತ್ಯ ಸಾಮಗ್ರಿ, ಸಲಕರಣೆಗಳನ್ನು ತಲುಪಿಸಿದ್ದಾರೆ. 30,602 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ರೀತಿ, 1,370 ಮತಗಟ್ಟೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ತೀವ್ರ ಸೂಕ್ಷ್ಮವಾಗಿರುವುದರಿಂದ ಎಲ್ಲ ಮತಗಟ್ಟೆಗಳ ವೆಬ್‍ಕಾಸ್ಟಿಂಗ್ ಮಾಡಲು ನಿರ್ಣಯಿಸಲಾಗಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಿಗೆ ಸೇರಿದಂತೆ 50 ಸಾವಿರ ಪೊಲೀಸ್ ಪಡೆ, 7 ಪ್ಯಾರಾ ಮಿಲಿಟರಿ ಪಡೆ, 65 ಕೇಂದ್ರೀಯ ಮೀಸಲು ಪಡೆಗಳನ್ನು ಚುನಾವಣೆಯ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಮತದಾರರು ತಮ್ಮ ಮತದಾನ ಮಾಡುವಾಗ ಭಾರತೀಯ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್) ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕ್ರಮ ಸಂಖ್ಯೆ ಹಾಗೂ ಮತಗಟ್ಟೆಯ ಮಾಹಿತಿ ಇರುವ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ.
ಮತದಾರರ ಬಳಿ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಪರ್ಯಾಯವಾಗಿ ಭಾವಚಿತ್ರವುಳ್ಳು ಇತರ ಗುರುತಿನ ದಾಖಲೆಗಳನ್ನು ತೋರಿಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.
ಮತದಾನ ಮಾಡಲು ಅಗತ್ಯವಿರುವ ಪರ್ಯಾಯ ದಾಖಲೆಗಳು: ಆಧಾರ್ ಕಾರ್ಡ್, ನರೇಗಾ ಯೋಜನೆಯ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ. ಪ್ಯಾನ್ ಕಾರ್ಡ್.
ಎನ್‍ಪಿಆರ್ ಅಡಿಯಲ್ಲಿ ಆರ್ ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ, ಕೇಂದ್ರ, ರಾಜ್ಯ ಸರಕಾರ, ಪಿಎಸ್‍ಯು, ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಂಸದ, ಶಾಸಕ, ವಿಧಾನಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು.
ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ವಿಶಿಷ್ಟ ಅಂಗವೈಕಲ್ಯ ವಿಶಿಷ್ಟ ಗುರುತಿನ ಕಾರ್ಡ್ ಈ ಪೈಕಿ ಯಾವುದಾದರೂ ಒಂದು ಗುರುತಿನ ದಾಖಲೆಯನ್ನು ತೋರಿಸಿ ಮತದಾರರು ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಜೂ.4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಎಡಗೈ ತೋರು ಬೆರಳಿಗೆ ಶಾಯಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಮತದಾನದ ವೇಳೆ ಮತದಾನ ಮಾಡಿದಂತಹ ಎಲ್ಲ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುವುದು.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಉಡುಪಿ-ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆ(ಕಾಂಗ್ರೆಸ್), ಕೋಟ ಶ್ರೀನಿವಾಸ ಪೂಜಾರಿ(ಬಿಜೆಪಿ), ಕೆ.ಟಿ. ರಾಧಾಕೃಷ್ಣ(ಬಿಎಸ್‍ಪಿ)
ಹಾಸನ: ಗಂಗಾಧರ್ ಬಹುಜನ್(ಬಿಎಸ್‍ಪಿ), ಪ್ರಜ್ವಲ್ ರೇವಣ್ಣ(ಬಿಜೆಪಿ), ಶ್ರೇಯಸ್ ಎಂ.ಪಟೇಲ್(ಕಾಂಗ್ರೆಸ್).
ದಕ್ಷಿಣ ಕನ್ನಡ: ಕಾಂತಪ್ಪ ಅಲಂಗಾರ್(ಬಿಎಸ್‍ಪಿ), ಪದ್ಮರಾಜ್ ಆರ್.ಪೂಜಾರಿ(ಕಾಂಗ್ರೆಸ್), ಕ್ಯಾಪ್ಟನ್ ಬ್ರಿಜೇಶ್ ಚೌಟ(ಬಿಜೆಪಿ).
ಚಿತ್ರದುರ್ಗ: ಅಶೋಕ ಚಕ್ರವರ್ತಿ(ಬಿಎಸ್‍ಪಿ), ಗೋವಿಂದ ಕಾರಜೋಳ(ಬಿಜೆಪಿ), ಬಿ.ಎನ್.ಚಂದ್ರಪ್ಪ(ಕಾಂಗ್ರೆಸ್).
ತುಮಕೂರು: ಎಸ್.ಪಿ.ಮುದ್ದಹನುಮೇಗೌಡ(ಕಾಂಗ್ರೆಸ್), ರಾಜಸಿಂಹ ಜೆ.ಎನ್.(ಬಿಎಸ್‍ಪಿ), ವಿ.ಸೋಮಣ್ಣ(ಬಿಜೆಪಿ).
ಮಂಡ್ಯ: ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್), ಸ್ಟಾರ್ ಚಂದ್ರು(ಕಾಂಗ್ರೆಸ್), ಶಿವಶಂಕರ ಎಸ್.(ಬಿಎಸ್‍ಪಿ).
ಮೈಸೂರು: ಯದುವೀರ್ ಒಡೆಯರ್(ಬಿಜೆಪಿ), ಎಂ.ಲಕ್ಷ್ಮಣ್(ಕಾಂಗ್ರೆಸ್),
ಚಾಮರಾಜನಗರ: ಎಂ.ಕೃಷ್ಣಮೂರ್ತಿ(ಬಿಎಸ್‍ಪಿ), ಬಾಲರಾಜ್ ಎಸ್.(ಬಿಜೆಪಿ), ಸುನೀಲ್ ಬೋಸ್(ಕಾಂಗ್ರೆಸ್).
ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್(ಬಿಜೆಪಿ), ಡಿ.ಕೆ.ಸುರೇಶ್(ಕಾಂಗ್ರೆಸ್).
ಬೆಂಗಳೂರು ಉತ್ತರ: ಗೋವಿಂದಯ್ಯ(ಬಿಎಸ್‍ಪಿ) ಪ್ರೊ.ಎಂ.ವಿ.ರಾಜೀವ್‍ಗೌಡ(ಕಾಂಗ್ರೆಸ್), ಶೋಭಾ ಕರಂದ್ಲಾಜೆ(ಬಿಜೆಪಿ).
ಬೆಂಗಳೂರು ಕೇಂದ್ರ: ಮನ್ಸೂರ್ ಅಲಿ ಖಾನ್(ಕಾಂಗ್ರೆಸ್), ಪಿ.ಸಿ.ಮೋಹನ್(ಬಿಜೆಪಿ) ಹಾಗೂ ಸತೀಶ್ ಚಂದ್ರ ಎಂ.(ಬಿಎಸ್‍ಪಿ).
ಬೆಂಗಳೂರು ದಕ್ಷಿಣ: ಅರುಣ್ ಪ್ರಸಾದ್ ಎ.(ಬಿಎಸ್‍ಪಿ), ತೇಜಸ್ವಿ ಸೂರ್ಯ(ಬಿಜೆಪಿ), ಸೌಮ್ಯಾ ರೆಡ್ಡಿ(ಕಾಂಗ್ರೆಸ್), ವಾಟಾಳ್ ನಾಗರಾಜ್(ಕನ್ನಡ ಚಳವಳಿ ಪಕ್ಷ),
ಚಿಕ್ಕಬಳ್ಳಾಪುರ: ಮಹಾದೇವ್ ಪಿ.(ಬಿಎಸ್‍ಪಿ), ಮುನಿವೆಂಕಟಪ್ಪ ಎಂ.ಪಿ.(ಸಿಪಿಎಂ), ಎಂ.ಎಸ್.ರಕ್ಷಾ ರಾಮಯ್ಯ(ಕಾಂಗ್ರೆಸ್), ಡಾ.ಕೆ.ಸುಧಾಕರ್(ಬಿಜೆಪಿ).
ಕೋಲಾರ: ಕೆ.ವಿ.ಗೌತಮ್(ಕಾಂಗ್ರೆಸ್), ಎಂ.ಮಲ್ಲೇಶ್ ಬಾಬು(ಜೆಡಿಎಸ್), ಎಸ್.ಬಿ.ಸುರೇಶ್(ಬಿಎಸ್‍ಪಿ).