ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ: ಮಾಜಿ ಆಪ್ತನಿಂದ ಗಂಭೀರ ಆರೋಪ
ಬೆಂಗಳೂರು: 'ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ' ಎಂದು ಅವರ ಬೆಂಬಲಿಗರಾಗಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ರವಿವಾರ ವೇಲು ನಾಯ್ಕರ್ ಸೇರಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ವೇಲು ನಾಯ್ಕರ್, 'ಇನ್ನೂ ಮುನಿರತ್ನ ಕರೆಯಿಸುವುದು ಹನಿಟ್ರ್ಯಾಪ್ ಮಾಡುವುದು ಹೆದರಿಸುವುದು. ಜೆ.ಪಿ.ಪಾರ್ಕ್, ಡಾಲರ್ಸ್ ಕಾಲೋನಿಯಲ್ಲಿ ಇದಕ್ಕಾಗಿ ಒಂದು ಸ್ಟುಡಿಯೋ ಇಟ್ಟುಕೊಂಡಿದ್ದಾರೆ . ಅವರು ಸಿನೆಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ' ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ, 'ಈಗ ರಾಜ್ಯದಲ್ಲಿ ನಮ್ಮ ಸರಕಾರ ಇಲ್ಲ. ಹೀಗಾಗಿ ಇಂಥ ಆರೋಪಗಳೆಲ್ಲ ಸಹಜ. ಅವರು ಬೇರೆ ಪಕ್ಷಕ್ಕೆ ಹೋದಾಗ ಅಲ್ಲಿ ಅವರನ್ನು ಮೆಚ್ಚಿಸಲು ಇಂಥ ಹೇಳಿಕೆಗಳನ್ನು ಕೊಡುತ್ತಿದ್ದಾರೆ' ಎಂದು ಹೇಳಿದ್ದಾರೆ.