ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣದಲ್ಲಿ ಸಂಸದ ರಾಘವೇಂದ್ರರ ಪಾತ್ರ: ಬೇಳೂರು ಗೋಪಾಲಕೃಷ್ಣ ಆರೋಪ

Update: 2023-11-08 08:01 GMT

ಶಿವಮೊಗ್ಗ, ನ.8: ಪಿಎಸ್ಸೈ ಹಗರಣದಲ್ಲಿ ಕಿಂಗ್ ಪಿನ್ ಶಾಸಕ ವಿಜಯೇಂದ್ರ ಹಾಗೂ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಹಗರಣದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ಪಾತ್ರವಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಸೈ ಹಗರಣದ ಕಿಂಗ್ ಪಿನ್ ವಿಜಯೇಂದ್ರ. ಆ ಸಮಯದಲ್ಲಿ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಿಲ್ಲ. ಈಗ ಎಫ್ ಡಿಎ, ಎಸ್ ಡಿಎ ಹಗರಣದ ಬಗ್ಗೆ ಮಾತನಾಡ್ತೀರಾ? ಪಿಎಸ್ಸೈ ಹಗರಣದ ತನಿಖೆಯನ್ನು ಚುರುಕುಗೊಳಿಸುವಂತೆ ಒತ್ತಾಯಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು 40 ಲಕ್ಷ ರೂ. ಲಂಚ ಪಡೆದಿದ್ದಾರೆ. ಲಂಚ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್ ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರ ಪಾತ್ರ ಇದೆ. ಈಗ ನಮ್ಮದೇ ಸರಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಸಂಸದ ರಾಘವೇಂದ್ರ ಚುನಾವಣೆ ಸಮಯದಲ್ಲಿ ಮಾತ್ರ ಓಡಾಡ್ತಾರೆ. ನಾನು ಅದು ತಂದೆ, ಇದು ತಂದೆ ಅಂತಾರೆ ಏರ್ಪೋರ್ಟ್ ತಂದೆ ಅಂತಾರೆ. ಏರ್ ಪೋರ್ಟ್ ತಂದಿದ್ದು ಯಡಿಯೂರಪ್ಪ. ಚುನಾವಣೆ ಬಂದಾಗ ಹಳ್ಳಿಗಳು ಕಾಣುತ್ತವೆ. ನಾನು 'ಬಸ್ ಸ್ಟ್ಯಾಂಡ್ ರಾಘು' ಅಂತಿದೆ. ಈಗ ಅವನೇ 'ಏರ್ ಪೋರ್ಟ್ ರಾಘು' ಅಂತಾ ಕರೀರಿ ಅಂತಾನಂತೆ ಎಂದು ವ್ಯಂಗ್ಯವಾಡಿದರು.

ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಹಾಗೂ ಕಿಯೋನಿಕ್ಸ್ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಷಡಾಕ್ಷರಿ ವರ್ಗಾವಣೆ ವಿಚಾರ ಏನು ದೊಡ್ಡ ವಿಚಾರವಲ್ಲ. ಆತ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾನೆ ಆತನ ವಿರುದ್ಧ ತನಿಖೆಯಾಗಬೇಕು ಯಾರು ಯಾರದ್ದೋ ತನಿಖೆ ಮಾಡುತ್ತಾರೆ ಈತನ ವಿರುದ್ದವು ತನಿಖೆ ನಡೆಸಲಿ. ಕಿಯೋನಿಕ್ಸ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ತನಿಖೆ ಮಾಡಲಿ ಎಂದರು.

ಲೋಕಸಭೆ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ. ನಾನು ಈ ಬಾರಿ ಲೋಕಸಭೆಗೆ ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದೇನೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಎದುರಿಸಲು ನಾನೇ ಪ್ರಬಲ ಸ್ಪರ್ಧಿ ಎಂದರು.

ಡಿಕೆಶಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ. ನಾನು ಹೇಳೋದು ಎಲ್ಲಾ ಶಾಸಕರಿಗು 20:20 ತಿಂಗಳು ಸಚಿವರನ್ನು ಮಾಡಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ 20:20 ತಿಂಗಳು ಎಲ್ಲರನ್ನು ಸಚಿವರನ್ನಾಗಿ ಮಾಡಿ ಅಭಿವೃದ್ಧಿ ಆಗಬೇಕು ಅಂದ್ರೆ ಹೇಗೆ ಬೇಕಾದರೂ ಆಗುತ್ತದೆ ಎಂದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನಾನು ಕೇವಲ ಶಾಸಕ ಅಷ್ಟೇ. ಮೊದಲು ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದರಂತೆ. ಈಗ ಉಸ್ತುವಾರಿ ಸಚಿವರು ಯಾರು ಅಂತಾ ನನಗೆ ಗೊತ್ತಿಲ್ಲ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ ಇದೆಯಂತೆ ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ ಎಂದರು.

ಬಿಜೆಪಿಯ ನಾಯಕರು ಬರ ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯದ ವಿಪಕ್ಷ ಮುಖಂಡರು ಬರ ವೀಕ್ಷಣೆಗೆ ಹೊರಟ್ಟಿದ್ದಾರೆ. ಆದರೆ ರಾಜಕೀಯ ಮಾಡುವುದು ಖಂಡನೆ. ಬರಕ್ಕೆ ಹಣ ಮುಖ್ಯಮಂತ್ರಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ನಾಯಕನೇ ಇಲ್ಲ. ನಿಮ್ಮ ಕಾಲದಲ್ಲಿ ನೆರೆ ಬಂತು ಏನಾದರೂ ಪರಿಹಾರ ಕೊಟ್ರಾ? ಕೇವಲ ಸಮೀಕ್ಷೆ ಮಾಡಿಕೊಂಡು ಹೋದ್ರಿ ನಿಮ್ಮ ಪ್ರಧಾನಿ, ನಿಮ್ಮ ಸರಕಾರ ಏನಾದರೂ ಪರಿಹಾರ ಕೊಟ್ರಾ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ ಬರ ಅಧ್ಯಯನ ಮಾಡ್ತೀವಿ ಅಂತೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರಕಾರವನ್ನು ನಾನು ಒತ್ತಾಯ ಮಾಡುತ್ತೇನೆ. ಜಿಲ್ಲಾ ಸಚಿವರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು. ಬರದ ಬಗ್ಗೆ ಸಮೀಕ್ಷೆ ನಡೆಸಬೇಕು. ಬರ ಪರಿಹಾರ ಸಮರ್ಪಕವಾಗಿ ಕೊಡಲು ಶ್ರಮಿಸಬೇಕು ಎಂದರು.

ಈಶ್ವರಪ್ಪ ಅವರಿಗೆ ನೆಲೆ ಇಲ್ಲ, ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಯಾವ ಯೋಗ್ಯತೆ ಇದೆ. ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್ ಕಟ್ಟಿಕೊಂಡು ಹೋದ್ರೆ ರಾಜ್ಯದಲ್ಲಿ ಬಿಜೆಪಿ 65 ಸೀಟ್ ಬಂದಿದೆ. ಮುಂದೆ 42 ಬರುತ್ತದೆ. ಯಡಿಯೂರಪ್ಪ ಅವರಿಗೆ ಬದ್ದತೆ ಇದ್ದರೆ ಕೇಂದ್ರದಿಂದ ಪರಿಹಾರ ಕೊಡಿಸಿ. ಕೇಂದ್ರ ಸರಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News