ಮುಡಾ ಹಗರಣ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಮುಂದೂಡಿಕೆ

Update: 2024-12-10 15:30 GMT

ಬೆಂಗಳೂರು: ಮುಡಾದಿಂದ ತಮ್ಮ ಪತ್ನಿ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 19ಕ್ಕೆ ಮುಂದೂಡಿದೆ. ಸ್ನೇಹಮಹಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಜಮೀನಿನ ಮೂಲ ಮಾಲಕ ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ಕ್ರಮವನ್ನು ಎತ್ತಿಹಿಡಿದಿರುವ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಆದೇಶದಿಂದ ಪ್ರಕರಣಕ್ಕೂ ನಮಗೂ ಸಂಬಂಧವೇ ಇಲ್ಲದಿದ್ದರೂ ವಿಚಾರಣೆ ಎದುರಿಸಬೇಕಾಗಿದೆ. ಆದ್ದರಿಂದ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, "ಪ್ರಕರಣ ಸಂಬಂಧ ಈವರೆಗೂ ಕೆಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಸರ್ಕಾರದ ಪರ ವಾದಿಸಿದ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್, "ಅರ್ಜಿದಾರರ ಮನವಿಯಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೂ ಮುನ್ನ ಪ್ರತಿವಾದಿಗಳ ವಾದ ಕೇಳಬೇಕು. ಹೀಗಾಗಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗದಿರುವುದರಿಂದ ಕಾಲಾವಕಾಶ ನೀಡಬೇಕು. ಈ ಪ್ರಕರಣ ಸಂಬಂಧದ ಮೇಲ್ಮನವಿ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿರುವುದರಿಂದ ವಿಚಾರಣೆ ಮುಂದೂಡಿದಲ್ಲಿ ಯಾವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ ಎಂದರು.

ದೂರುದಾರ ಸ್ನೇಹಮಯಿ ಕೃಷ್ಣ ವಿನಾಕಾರಣ ಅಡ್ವೋಕೇಟ್ ಜನರಲ್ ವಿರುದ್ದ ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠ, ಸ್ನೇಹಮಯಿ ಕೃಷ್ಣ ಸ್ವನಿಯಂತ್ರಣ ವಿಧಿಸಿಕೊಳ್ಳಲು ಅವರ ಪರ ವಕೀಲರಿಗೆ ಸೂಚನೆ ನೀಡಿತು. ಸ್ನೇಹಮಯಿ ಕೃಷ್ಣ ಪರ ವಕೀಲ ವಾದ ಮಂಡಿಸಿ, "ಮುಡಾ ಹಗರಣದ ಆರೋಪಿ ಸಿಎಂ ಆಗಿದ್ದಾರೆ. ಅವರೇ ರಾಜ್ಯದ ಮುಖ್ಯಸ್ಥರಾಗಿದ್ದು, ರಾಜ್ಯ ಸರ್ಕಾರದ ಹಿಡಿತದಲ್ಲಿಲ್ಲದ ಸಿಬಿಐ ಅಥವಾ ಬೇರೆ ಸ್ವತಂತ್ರ ಸಂಸ್ಥೆಗೆ ತನಿಖೆ ವಹಿಸಲು‌ ಕೋರಿದರು. ಅಲ್ಲದೆ, ಪ್ರಕರಣದ ಎಲ್ಲ ಮಾಹಿತಿ ನ್ಯಾಯಪೀಠಕ್ಕೆ ಗೊತ್ತಿದೆ.‌ ಹೀಗಾಗಿ ತನಿಖೆ ವಿಶ್ವಾಸಾರ್ಹವಾಗಲು ಸ್ವತಂತ್ರ ತನಿಖೆ ಅಗತ್ಯವೆಂದು ತಿಳಿಸಿದರು.

ಪ್ರಕರಣದ ತನಿಖೆ ಸಿಬಿಐಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿಯಿದೆ. ಈ ಹಿನ್ನೆಲೆಯಲ್ಲಿ. ಲೋಕಾಯುಕ್ತ ಪೊಲೀಸರು ಅಂತಿಮ‌ ವರದಿ ಸಲ್ಲಿಸದಂತೆ ಸೂಚನೆ ನೀಡಬೇಕು" ಎಂದು ಕೋರಿದರು. ಅಲ್ಲದೆ, ಜಾರಿ ನಿರ್ದೇಶನಾಲಯ (ಈಡಿ)ವನ್ನು ಪ್ರತಿವಾದಿಯನ್ನಾಗಿಸಲು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News