ಅತ್ಯಾಚಾರದ ಆರೋಪದಲ್ಲಿ ಸಿಕ್ಕಿಸಿ ನನ್ನ ಬದುಕನ್ನೇ ಹಾಳು ಮಾಡಿದರು: ಮುನಿರತ್ನ

Update: 2025-03-20 20:36 IST
ಅತ್ಯಾಚಾರದ ಆರೋಪದಲ್ಲಿ ಸಿಕ್ಕಿಸಿ ನನ್ನ ಬದುಕನ್ನೇ ಹಾಳು ಮಾಡಿದರು: ಮುನಿರತ್ನ
  • whatsapp icon

ಬೆಂಗಳೂರು : ‘ಸುಳ್ಳು ಅತ್ಯಾಚಾರದ ಆರೋಪದಲ್ಲಿ ಸಿಕ್ಕಿಸಿ ನನ್ನ ಬದುಕನ್ನೇ ಹಾಳು ಮಾಡಲಾಯಿತು. ಡಿ.ಕೆ.ಶಿವಕುಮಾರ್ ಅವರಿಂದ ನನಗೆ ಅನ್ಯಾಯವಾಗಿದೆ. ಈ ಬಗ್ಗೆ ವಿಶೇಷ ತನಿಖೆಗೆ ನಡೆಸಿ ಆರೋಪ ಸಾಬೀತಾದರೆ ನನ್ನನ್ನು ಗಲ್ಲಿಗೆ ಹಾಕಿ’ ಎಂದು ಬಿಜೆಪಿ ಸದಸ್ಯ ಮುನಿರತ್ನ ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಗುರುವಾರ ವಿಧಾನಸಭೆಯಲ್ಲಿ ‘ಹನಿಟ್ರ್ಯಾಪ್’ ವಿಚಾರದ ಬಗ್ಗೆ ಚರ್ಚೆಯ ವೇಳೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧ ಸುಳ್ಳು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿ ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆಸಲಾಯಿತು ಎಂದು ದೂರಿದರು.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ ಮೇಲೂ ಇದೇ ಕುತಂತ್ರ ಮಾಡಿದ್ದರು. ಇದೀಗ ಸಚಿವ ಕೆ.ಎನ್.ರಾಜಣ್ಣರ ಮೇಲೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‍ಗೆ ಒಂದು ಕಿವಿಮಾತು ಹೇಳುತ್ತೇನೆ. ನಿಮ್ಮ ಹನಿಟ್ರ್ಯಾಪ್ ಟೀಂ ನನಗೆ ಗೊತ್ತಿದೆ. ನೀವು ರಾತ್ರಿ ವೇಳೆಯಲ್ಲಿ ಸಭೆ ಮಾಡಿದ್ದು ಗೊತ್ತಿದೆ ಎಂದು ಮುನಿರತ್ನ ಉಲ್ಲೇಖಿಸಿದರು.

ಈ ಹಿಂದೆ ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಹನಿಟ್ರ್ಯಾಪ್ ಮಾಡಿದ್ದರು. ನಾನು ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋದಾಗಲೇ ಪ್ರಯತ್ನ ಪಟ್ಟಿದ್ದಾರೆ. ಈಗ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಗೃಹ ಸಚಿವರು ಈಗ ತನಿಖೆಗೆ ಆದೇಶಿಸಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಸಬೇಕು. ಇಲ್ಲದಿದ್ದರೆ ಎಲ್ಲ ಶಾಸಕರ ಜೀವನವನ್ನು ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ದೇವರ ಫೊಟೋ ತೋರಿಸಿ ಮುನಿರತ್ನ ಭಾವುಕರಾದರು.

ಪೊಲೀಸ್ ಆಯುಕ್ತರಿಗೆ ಹೇಳಿ ಡಿ.ಕೆ.ಶಿವಕುಮಾರ್ ನನ್ನ ಮೇಲೆ ಅತ್ಯಾಚಾರ ಪ್ರಕರಣ ಹಾಕಿಸಿದ್ದರು. ಜಾತಿನಿಂದನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದಾಗ ರಾಜೀನಾಮೆ ಕೊಟ್ಟರೆ ಅತ್ಯಾಚಾರ ಪ್ರಕರಣ ಹಾಕುವುದಿಲ್ಲ ಎಂದು ಡಿವೈಎಸ್‍ಪಿಯೊಬ್ಬರು ನೇರವಾಗಿ ಈ ಮಾತನ್ನು ಹೇಳಿದ್ದಾರೆ ಎಂದು ಮುನಿರತ್ನ ವಾಗ್ದಾಳಿ ನಡೆಸಿದರು.

ಸರ್ವನಾಶ ಆಗುತ್ತೇನೆ: ‘ನನಗೆ ಮೊಟ್ಟೆ ಹೊಡೆಯಲು, ಮಸಿ ಬಳಿಯಲು ಹೀಗೆ ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಈ ರೀತಿ ಟಾರ್ಗೆಟ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ, ಸೂರಜ್ ರೇವಣ್ಣ ಎಲ್ಲ ಆಯಿತು. ಈಗ ಕೆ.ಎನ್.ರಾಜಣ್ಣ ಮೇಲೆ ಡಿ.ಕೆ.ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮಹಾ ಪಾಪದ ಕೆಲಸ ಮಾಡಿದ್ದಾರೆ. ನೀವು ಮಾಡಿದ ಪಾಪ ನಿಮ್ಮನ್ನು ಬಿಡುವುದಿಲ್ಲ. ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ಅತ್ಯಾಚಾರ ಮಾಡಿದ್ದರೆ ಸರ್ವನಾಶ ಆಗುತ್ತೇನೆ, ನಾನು ಹುಳ ಬಿದ್ದು ಸಾಯಬೇಕು. ಇಲ್ಲ ಅಂದರೆ ನೀವು ಹುಳ ಬಿದ್ದು ಸಾಯುತ್ತೀರಾ?’ ಎಂದು ಮುನಿರತ್ನ ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News