ಸೂರಜ್ ರೇವಣ್ಣ ವಿರುದ್ಧ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ: ಜಿ.ಪರಮೇಶ್ವರ್

Update: 2024-06-22 10:00 GMT

ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ರೀತಿಯ ಪತ್ರ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.

ನ‌ಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿರುವುದನ್ನು ಗಮನಿಸಿದ್ದೇನೆ. ಈವರೆಗೆ ಯಾವುದೇ ರೀತಿಯ ಅಧಿಕೃತ ದೂರು ದಾಖಲಾಗಿಲ್ಲ. ನನಗೆ ಯಾವುದೇ ಪತ್ರ ಬಂದಿಲ್ಲ. ಶಿವಕುಮಾರ್ ಎನ್ನುವರು ದೂರು ಕೊಟ್ಟಿದ್ದಾರೆ ಎಂದರು.

ಪತ್ರ ಬರೆಯುವುದಕ್ಕೂ, ದೂರು ಕೊಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೈಜತೆಯನ್ನು ಪರಿಶೀಲಿಸಬೇಕಾಗುತ್ತದೆ. ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಬಿಜೆಪಿಯವರು ಆರ್ಥಿಕ ಸ್ಥಿತಿಯನ್ನು ದಿವಾಳಿ ಎಬ್ಬಿಸಿ ಹೋಗಿದ್ದರು :

ರಾಜ್ಯ ಸರಕಾರಕ್ಕೆ ಹಣಕಾಸು ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಏಜೆನ್ಸಿಗೆ ಕೊಟ್ಟಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಹಣಕಾಸಿನ ಸ್ಥಿತಿ ಯಾವ ರೀತಿ ಇಟ್ಟಿದ್ದರು‌ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಸಾಲ ಎಷ್ಟು ಮಾಡಿದ್ದರು, ಏನೆಲ್ಲ ದಿವಾಳಿ ಎಬ್ಬಿಸಿ ಹೋಗಿದ್ದರು ಎಂದು ಗೊತ್ತಿದೆ‌" ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ. ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಚುನಾವಣಾ ಪೂರ್ವದಲ್ಲಿ ಜನರಿಗೆ ಭರವಸೆ ನೀಡಿದ್ದೇವೆ. ಗ್ಯಾರಂಟಿ ಕಾರ್ಯಕ್ರಮ ಕೊಟ್ಟಿರುವುದೇ ಇವರಿಗೆ ಹೊಟ್ಟೆಹುರಿಯಾಗಿದೆ. ಬಿಜೆಪಿಯವರು ಯಾರು ಗ್ಯಾರಂಟಿ ಹಣ ತೆಗೆದುಕೊಳ್ಳುತ್ತಿಲ್ಲವೇ? ಕಾಂಗ್ರೆಸ್ ಪಕ್ಷದವರಿಗೆ ಮಾತ್ರ ಯೋಜನೆ ಕೊಟ್ಟಿದ್ದೇವೆಯೇ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News