ಸಚಿವರ, ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ: ಬಿಜೆಪಿ ನಿಯೋಗದಿಂದ ಚುನಾವಣಾ ಆಯುಕ್ತರಿಗೆ ದೂರು
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವರ ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ ಮುಂದುವರೆದಿರುವ ಕುರಿತು ಬಿಜೆಪಿ ನಿಯೋಗವು ಇಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿಯೆಂದು ಭಾವಿಸಿರುವಂತೆ ಕಾಣುತ್ತಿದೆ. ದಿನಾಂಕ 30 ಮಾರ್ಚ್ ರಂದು ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧ ಕಚೇರಿಯಲ್ಲಿ ನಜ್ಮಾ ನಜೀರ್ ಚಿಕ್ಕನೇರಳೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ರಾಜ್ಯ ಜವಾಬ್ದಾರಿಯುತ ಸಚಿವರು ಅವರಿಗೆ ಸರ್ಕಾರಿ ಕಚೇರಿಯನ್ನು ಪಕ್ಷದ ಚಟುವಟಿಕೆ ಬಳಕೆ ಮಾಡಬಾರದು ಎಂಬುದು ತಿಳಿದಿದೆ, ಹಾಗಿದ್ದರು ನೀತಿ ಸಂಹಿತೆಯನ್ನು ಧಿಕ್ಕರಿಸಿ ರಾಜಕೀಯ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ರವರ ಮೂಗಿನಡಿಯಲ್ಲಿಯೇ ಇದು ನಡೆದರೂ ಯಾವುದೇ ಕ್ರಮ ಜರುಗಿಸಲು ತೋರಿರುವ ಅವರ ನಿಷ್ಕ್ರಿಯತೆಯ ಆತಂಕಕಾರಿಯಾಗಿದೆ ಎಂದು ಮನವಿ ತಿಳಿಸಿದೆ.
ಲೋಕಸಭಾ ಚುನಾವಣೆಗಳು ಘೋಷಣೆಯಾಗಿ ಈಗಾಗಲೇ ನಾಮಪತ್ರ ಸಲ್ಲಿಕೆಯು ಆರಂಭವಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟನ ಜಾರಿಯಾಗುವುದರಲ್ಲಿ ಸರಕಾರದ ಅಧಿಕಾರಿಗಳಿಂದ ಕೊರತೆ ಎದ್ದು ಕಾಣುತ್ತಿದೆ. ಹಲವಾರು ಆಡಳಿತ ಪಕ್ಷದ ಶಾಸಕರ ಕಚೇರಿಗಳಲ್ಲಿ ಪಕ್ಷದ ಚಟುವಟಿಕೆಗಳು ಇನ್ನೂ ಮುಂದುವರೆದಿದೆ ಎಂದು ತಿಳಿಸಲಾಗಿದೆ.
ಸಚಿವರು ವಿಕಾಸಸೌಧದಿಂದ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ. ಇದಕ್ಕೆ ಉದಾಹರಣೆಯು ಮಾರ್ಚ್ 25 ರಂದು ಕಂದಾಯ ಸಚಿವ ಕೃಷ್ಣಭೈರೆಗೌಡ ಅವರು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರಕಾರದ ವಿರುದ್ದ ಟೀಕೆ ಮಾಡಿದ್ದಾರೆ. ಚುನಾವಣಾ ಆಯೋಗವು ಕೂಡಲೇ ವಿಧಾನಸೌಧ ಸಚಿವರ ಕಚೇರಿಗಳನ್ನು ಕೂಡಲೇ ಮುಚ್ಚಿಸಬೇಕು. ಸರ್ಕಾರಿ ಕಟ್ಟಡಗಳಲ್ಲಿ ಸಚಿವರಿಗೆ ಮತ್ತು ಶಾಸಕರಿಗೆ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧ ಹೇರಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಲು ಕೋರುವುದಾಗಿ ಮನವಿ ತಿಳಿಸಿದೆ.
ನಿಯಮವನ್ನು ಮೀರಿ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು. ಶಾಸಕ ಸುರೇಶ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್, ಎಚ್.ಎನ್. ಚಂದ್ರಶೇಖರ್, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರ ಟಿ.ಎಸ್. ಸಂಕೀರ್ತ್ ಅವರು ಉಪಸ್ಥಿತರಿದ್ದರು.