ಹಿಜಾಬ್ ಪರ ಗೋಡೆ ಬರಹ: ಇಬ್ಬರು ಯುವಕರ ವಿರುದ್ಧದ ಪ್ರಕರಣ ಹೈಕೋರ್ಟ್‍ನಿಂದ ರದ್ದು

Update: 2023-08-28 23:54 IST
ಹಿಜಾಬ್ ಪರ ಗೋಡೆ ಬರಹ: ಇಬ್ಬರು ಯುವಕರ ವಿರುದ್ಧದ ಪ್ರಕರಣ ಹೈಕೋರ್ಟ್‍ನಿಂದ ರದ್ದು
  • whatsapp icon

ಬೆಂಗಳೂರು, ಆ.28: ‘ಹಿಜಾಬ್ ನಮ್ಮ ಘನತೆ’ ಎಂಬ ಗೋಡೆ ಮೇಲೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‍ನ ಧಾರವಾಡ ಪೀಠ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಿಎಂಸಿ ಸರಕಾರಿ ಪ್ರೌಢಶಾಲೆಯ ಆವರಣದ ಗೋಡೆಯ ಮೇಲೆ ‘ಹಿಜಾಬ್ ನಮ್ಮ ಘನತೆ’ ಎಂಬ ಬರಹ ಬರೆಯಲಾಗಿತ್ತು. ಈ ಸಂಬಂಧ ವಿಜಯನಗರದ ಮುಜಾಮಿಲ್ ಮತ್ತು ಮೊಹಮ್ಮದ್ ಜಮೌಲ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಪಡಿಸಿ ಆದೇಶಿಸಿದೆ.

ಶಾಲಾ ಗೋಡೆ ಮೇಲೆ ಬರೆದಿದ್ದರಿಂದ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಪ್ರಕಾರ, 2022ರ ಮಾ.16ರಂದು ಇಬ್ಬರ ವಿರುದ್ಧ ಕರ್ನಾಟಕ ಸಾರ್ವಜನಿಕ ಸ್ಥಳಗಳ(ವಿರೂಪ ನಿಷೇಧ) ಕಾಯಿದೆ ಸೆಕ್ಷನ್ 3ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ಕಾಯ್ದೆ ಹೊಸಪೇಟೆ ಪಟ್ಟಣಕ್ಕೆ ಅನ್ವಯವಾಗುವುದಿಲ್ಲ. ಕಾಯ್ದೆ ಹೊಸಪೇಟೆಗೆ ಅನ್ವಯಿಸಲು ಸರಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಆರೋಪಿಗಳ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದರು. ಇದನ್ನು ಆಲಿಸಿದ ಪೀಠ, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಗೊಳಿಸಿ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News