ಈ ಬಾರಿಯ ದ್ವಿತೀಯ ಪಿಯುಸಿಗೆ 7 ಲಕ್ಷದ 13 ಸಾವಿರ, ಎಸೆಸೆಲ್ಸಿ ಪರೀಕ್ಷೆಗೆ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ 7,13,862 ವಿದ್ಯಾರ್ಥಿಗಳು ಹಾಗೂ ಎಸೆಸೆಲ್ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷೆಗಳನ್ನು ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ-1ನ್ನು ಮಾ.1 ರಿಂದ ಮಾ.20ರವರೆಗೆ ಎಸೆಸೆಲ್ಸಿ ಪರೀಕ್ಷೆ-1ನ್ನು ಮಾ.21 ರಿಂದ ಎ.4ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 5,050 ಕಾಲೇಜುಗಳು ನೋಂದಣಿ ಮಾಡಿಕೊಂಡಿದ್ದರೆ, ಎಸೆಸೆಲ್ಸಿ ಪರೀಕ್ಷೆಗೆ 15,881 ಶಾಲೆಗಳು ನೋಂದಾಯಿಸಿಕೊಂಡಿವೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡ 7,13,862 ವಿದ್ಯಾರ್ಥಿಗಳ ಪೈಕಿ 6,61,474 ವಿದ್ಯಾರ್ಥಿಗಳು ಹೊಸಬರಾಗಿದ್ದು, 34,071 ಪುನರಾವರ್ತಿತ, 18,317 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. 3,35,468 ಬಾಲಕರು, 3,78,389 ಬಾಲಕಿಯರು ಮತ್ತು 5 ಮಂದಿ ತೃತೀಯ ಲಿಂಗಿಗಳು ಇದ್ದಾರೆ. 2,91,959 ವಿಜ್ಞಾನ, 2,29,308 ವಾಣಿಜ್ಯ, 1,92,595 ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯು 1,171 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 2,342 ಸ್ಥಾನಿಕ ಜಾಗೃತ ದಳಗಳು, 504 ವಿಚಕ್ಷಣ ಜಾಗೃತ ದಳಗಳು, 365 ಪ್ರಶ್ನೆಪತ್ರಿಕಾ ವಿತರಣಾ ಮಾರ್ಗಗಳು, 1,171 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ/ಜಂಟಿ ಅಧೀಕ್ಷಕರು, ಉತ್ತರ ಪತ್ರಿಕೆಗಳ/ಪ್ರಶ್ನೆ ಪತ್ರಿಕೆಗಳ ಪಾಲಕರನ್ನು ನೇಮಿಸಲಾಗಿದೆ. ಹಾಗೆಯೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು 76 ಕೇಂದ್ರಗಳಲ್ಲಿ 31 ಸಾವಿರ ಮೌಲ್ಯಮಾಪಕರಿಂದ ನಡೆಯಲಿದೆ ಎಂದು ಅವರು ತಿಳಿಸಿದರು.
ಎಸೆಸೆಲ್ಸಿ ಪರೀಕ್ಷೆಗೆ ನೋಂದಯಿಸಿಕೊಂಡ 8,96,447 ವಿದ್ಯಾರ್ಥಿಗಳ ಪೈಕಿ 8,42,817 ಹೊಸಬರಾಗಿದ್ದು, 38,091 ಪುನರಾವರ್ತಿತ, 15,539 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. 4,61,563 ಬಾಲಕರು, 4,34,884 ಬಾಲಕಿಯರು ಪರೀಕ್ಷೆಗೆ ನೋಂದಯಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎಸೆಸೆಲ್ಸಿ ಪರೀಕ್ಷೆಯು 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1,662, ವಿಚಕ್ಷಣ ಜಾಗೃತ ದಳಗಳು ಇರಲಿವೆ. 1,117 ಪ್ರಶ್ನೆ ಪತ್ರಿಕಾ ವಿತರಣಾ ಮಾರ್ಗಗಳ ಸಂಖ್ಯೆ ಇದ್ದು, 958 ಉಪ/ಜಂಟಿ ಅಧೀಕ್ಷಕರನ್ನು ನೇಮಿಸಲಾಗಿದೆ. ಇನ್ನು 2,240 ಕೇಂದ್ರದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. 65 ಸಾವಿರ ಮೌಲ್ಯಮಾಪಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಚಿವರು ವಿವರಿಸಿದರು.
ದ್ವಿತೀಯ ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ವೆಬ್‍ಕಾಸ್ಟಿಂಗ್ ಮುಖಾಂತರ ವೀಕ್ಷಣೆ ಮಾಡಲಾಗುವುದು. ವಿದ್ಯಾರ್ಥಿಗಳು ಯಾವುದೇ ಭಯ, ಆತಂಕವಿಲ್ಲದೆ ಧೈರ್ಯದಿಂದ ಸಂತೋಷದಿಂದ ಪರೀಕ್ಷೆ ಬರೆಯಬಹುದು. ಹಿಂದಿನಂತೆ ಈ ಬಾರಿಯೂ 3 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಬಾರಿ ಯಾವುದೇ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ, ಕೋವಿಡ್ ಪೂರ್ವದಲ್ಲಿದ್ದ ನಿಯಮವನ್ನು ಮುಂದುವರೆಸಲಾಗುವುದು ಎಂದರು.
ಬಿಗಿ ಭದ್ರತೆಯಲ್ಲಿ ಪರೀಕ್ಷೆ: ಪರೀಕ್ಷಾ ದಿನದಂದು ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಪರಿಗಣಿಸಿ ಅಲ್ಲಿ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಿಸಲಾಗುತ್ತದೆ. ಹಾಗೆಯೇ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವ ವ್ಯಕ್ತಿಗಳ ವಿರುದ್ಧ ಶಿಕ್ಷಣ ಕಾಯ್ದೆ ನಿಯಮಗಳಡಿ ಅಗತ್ಯವಾದ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷೆ ನಡೆಸಲು ಸೂಕ್ತ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ರೂಪೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಬಸವರಾಜೇಂದ್ರ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.