ಕಾಪಿರೈಟ್ ಉಲ್ಲಂಘನೆ ಆರೋಪ : ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‍ಐಆರ್ ದಾಖಲು

Update: 2024-07-15 15:51 GMT

Photo : Facebook.com/therakshitshetty

ಬೆಂಗಳೂರು : ಕಾಪಿರೈಟ್ ಉಲ್ಲಂಘನೆ ಆರೋಪದಡಿ ಚಿತ್ರನಟ ರಕ್ಷಿತ್ ಶೆಟ್ಟಿ ವಿರುದ್ಧ ಇಲ್ಲಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಎಂಆರ್‌ ಟಿ ಮ್ಯೂಸಿಕ್‍ನ ಪಾಲುದಾರಿಕೆ ಹೊಂದಿರುವ ನವೀನ್ ಕುಮಾರ್ ಎಂಬುವರು ನೀಡಿದ ದೂರಿನನ್ವಯ ಎರಡು ಸಿನಿಮಾದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಯಶವಂತಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.

‘ನ್ಯಾಯ ಎಲ್ಲಿದೆ’ ಹಾಗೂ ‘ಗಾಳಿಮಾತು’ ಎಂಬ ಎರಡು ಹಾಡುಗಳನ್ನು ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂಆರ್‌ ಟಿ ಮ್ಯೂಸಿಕ್‍ನ ಪಾಲುದಾರ ನವೀನ್ ಕುಮಾರ್ ದೂರು ನೀಡಿದ್ದಾರೆ.

2024ರ ಜನವರಿಯಲ್ಲಿ ಸಿನಿಮಾದ ಹಾಡು ಬಳಕೆ ಬಗ್ಗೆ ರಕ್ಷಿತ್ ಶೆಟ್ಟಿ ಅವರ ಜೊತೆ ಮಾತುಕತೆ ಆಗಿತ್ತು. ಆದರೆ, ಸಿನಿಮಾದ ಹಾಡು ಬಳಕೆ ಬಗ್ಗೆ ಮಾತುಕತೆ ಸರಿ ಹೊಂದಿರಲಿಲ್ಲ. ಹೀಗಾಗಿ, ಮಾತುಕತೆ ಮುಂದುವರಿಯಲಿಲ್ಲ. ಮಾರ್ಚ್‍ನಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್ ಆಗಿತ್ತು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಗಮನಿಸಿದಾಗ 2 ಚಿತ್ರಗಳ ಹಾಡು ಬಳಕೆ ಆಗಿತ್ತು. ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಲಾಗಿದೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ಪರಮ್ವಾ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ನಟ ರಕ್ಷಿತ್ ಶೆಟ್ಟಿಗೆ ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News