ಸದನದಲ್ಲಿ ಮತ್ತೆ ಪ್ರದರ್ಶನಗೊಂಡ ‘ರೇಟ್ ಕಾರ್ಡ್’; ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

Update: 2023-07-13 16:46 GMT

ಬೆಂಗಳೂರು: 'ಎಚ್‌ಡಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಇರಲು ಆಗಲ್ಲ. ಅವರು ಬಿಡುಗಡೆ ಮಾಡಿರುವ ರೇಟ್‌ ಕಾರ್ಡ್‌ ಎಚ್‌ಡಿಕೆ ಅಧಿಕಾರದಲ್ಲಿದ್ದಾಗ ಆಗಿತ್ತೇನೋ ಗೊತ್ತಿಲ್ಲ. ಅವರು ಹಿಂದಿನ ಪಟ್ಟಿ ತಂದು ಬಿಡುಗಡೆ ಮಾಡಿರಬೇಕು' ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

'ಇವತ್ತಿನ ಪತ್ರಿಕೆಗಳಲ್ಲಿ ಬಂದಿರುವ ವರದಿಯಂತೆ ರೇಟ್ ಕಾರ್ಡ್ ಅನ್ನು ನಮ್ಮ ಇಲಾಖೆ ನಿಗದಿ ಮಾಡಿಲ್ಲ. ಆದರೆ, 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ರೇಟ್ ಕಾರ್ಡ್ ಬಂದಿತ್ತು' ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅದನ್ನು ಪ್ರದರ್ಶಿಸಿದರು.

ಐಎಂಎ ಹಗರಣದಲ್ಲಿ ವಿಜಯ ಶಂಕರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಕುಮಾರಸ್ವಾಮಿ ಸಿಎಂ ಆಗಿದ್ದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಿಗೆ ತಡೆಯೋಕ್ಕಾಗದೆ ಆರೋಪ ಮಾಡೋದು, ಸುಮ್ಮನೆ ತೇಜೋವಧೆ ಮಾಡುವುದು ಸರಿಯಲ್ಲ. ಒಬ್ಬ ಕೆಎಎಸ್ ಅಧಿಕಾರಿಯನ್ನು ಒಂದೇ ವರ್ಷದಲ್ಲಿ ಏಳು ಬಾರಿ ಇವರು ವರ್ಗಾವಣೆ ಮಾಡಿದ್ದಾರೆ ಎಂದು ಚಲುವರಾಯಸ್ವಾಮಿ ಟೀಕಿಸಿದರು.

ಯಾರ ಯಾರ ಕಾಲದಲ್ಲಿ ಎಷ್ಟು ವರ್ಗಾವಣೆ ಆಗಿದೆ ಎಂಬ ಪಟ್ಟಿ ಬಿಡುಗಡೆ ಮಾಡಲು ನಾವು ಸಿದ್ಧರಿದ್ದೇವೆ. ಕುಮಾರಸ್ವಾಮಿ ಇದನ್ನು ಮುಂದುವರಿಸುವುದು ಸರಿಯಲ್ಲ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಮಾಡುವ ಸ್ವತಂತ್ರ ನನಗ ಇರಲಿಲ್ಲ. ಮೈತ್ರಿ ಸರಕಾರದ ಅವಧಿಯಲ್ಲಿ ಪ್ರಮುಖ ಇಲಾಖೆಗಳನ್ನ ಕಾಂಗ್ರೆಸ್ ನವರು ಪಡೆದಿದ್ದರು. 14 ತಿಂಗಳ ಮೈತ್ರಿ ಸರಕಾರದಲ್ಲಿ ಎಲ್ಲೂ ದುಡ್ಡು ತೆಗೆದುಕೊಂಡಿಲ್ಲ ಎಂದರು.

ವರ್ಗಾವಣೆಗೆ ಹಣ ಪಡೆದಿರುವ ಮಾಹಿತಿ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್ ಸರಕಾರ ಬಂದಿರೋದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ನಮಗೆ ಅಧಿಕಾರ ಶಾಶ್ವತ ಅಲ್ಲ. ಎರಡು ಬಾರಿ ಸಿಎಂ ಆಗಿದ್ದೇನೆ. ದಿಲ್ಲಿಯಲ್ಲಿ ಅಧಿಕಾರ ನೋಡಿಕೊಂಡು ಬಂದ ಕುಟುಂಬ ನಮ್ಮದು. ದೇವರ ಆಶೀರ್ವಾದ ಇದ್ದರೆ ಮತ್ತೆ ಬಂದೇ ಬರುತ್ತೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News