ಸಹಾಯಕ ಪ್ರಧ್ಯಾಪಕರ ಹುದ್ದೆಗಳ ನೇಮಕ: ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರ
ಬೆಂಗಳೂರು: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧನೆ ಮಾಡಲು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸಂಬಂಧಿಸಿ ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಅಂತಿಮಗೊಂಡಿದ್ದು, ಅರ್ಹರಿಗೆ ಇನ್ನು ಆದೇಶ ಪ್ರತಿ ನೀಡುವಲ್ಲಿ ಸರಕಾರವು ಅನಗತ್ಯ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 2021ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಲು ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ, ಪರೀಕ್ಷೆ ನಡೆಸುವುದು, ಫಲಿತಾಂಶ ಪ್ರಕಟ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಅಭ್ಯರ್ಥಿಗಳ ಪಟ್ಟಿಯನ್ನು ಸರಕಾರವು ಸಿದ್ಧಪಡಿಸಿದ್ದರೂ, ಅರ್ಹರಿಗೆ ಅದೇಶ ಪ್ರತಿ ನೀಡುವಲ್ಲಿ ಸರಕಾರ ವಿಫಲವಾಗುತ್ತಿದೆ.
1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿ, 1,208 ಮಂದಿ ಇರುವ ಅಂತಿಮ ಆಯ್ಕೆ ಪಟ್ಟಿಯನ್ನು 2023, ಮಾ.3ರಂದು ಪ್ರಕಟಿಸಲಾಗಿದೆ. ಅಲ್ಲದೆ ವೈದ್ಯಕೀಯ, ಪೊಲೀಸ್ ವೆರಿಫಿಕೇಷನ್, ಅಂಕಪಟ್ಟಿಗಳ ನೈಜತೆ, ಸಿಂಧುತ್ವ, ನಡತೆ ಪ್ರಮಾಣ ಪತ್ರ ಮತ್ತು ಕನ್ನಡ ಹಾಗೂ ಗ್ರಾಮೀಣ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಆದರೂ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತ ರಾಜ್ಯಪತ್ರದಲ್ಲಿ ಇನ್ನು ಪ್ರಕಟಿಸದೆ ಸರಕಾರ ಕಾಲಹರಣ ಮಾಡುತ್ತಿದೆ.
ಪ್ರಸ್ತುತ 600ಕ್ಕೂ ಹೆಚ್ಚಿನ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರಗಳು ಇಲಾಖೆಗೆ ಸಲ್ಲಿಕೆಯಾಗಿವೆ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರನ್ನು ಸೇರಿಸಿದರೆ ಒಟ್ಟಾರೆ 800ಕ್ಕೂ ಅಧಿಕ ಅಭ್ಯರ್ಥಿಗಳು ಆದೇಶ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ಅಂತಿಮವಾಗಿದೆ.
ಅರ್ಹರ ಪಟ್ಟಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಿ, ಅವರಿಗೆ ಆದೇಶ ಪ್ರತಿಗಳನ್ನು ನೀಡಬೇಕು ಎಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಆಕಾಂಕ್ಷಿಗಳು ಸೇರಿದಂತೆ ವಿವಿಧ ಸಂಘಟನೆಗಳು ಸರಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸುತ್ತಿವೆ. ಆದರೂ ಸರಕಾರ ಕ್ರಮ ವಹಿಸದೆ ಇರುವುದು ಹುದ್ದೆಗಳ ಆಕಾಂಕ್ಷಿಗಳಲ್ಲಿ ಆತಂಕ ಸೃಷ್ಟಿಸಿದೆ.
ಸತತ ಮೂರು ವರ್ಷಗಳವರೆಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ವಿಳಂಬದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಸಕಾಲದಲ್ಲಿ ಪಾಠಗಳು ನಡೆಯದೆ ಇರುವ ಕಾರಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವವರು ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರನ್ನು ಅವಲಂಬಿಸುವಂತಾಗಿದೆ.
ಹುದ್ದೆಗಳನ್ನು ತುಂಬಲು ಅಧಿಸೂಚನೆಯನ್ನು ಹೊರಡಿಸಿದಾಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದು, ಎರಡು ವರ್ಷಗಳ ಕಾಲ ವಿಳಂಬ ಮಾಡಿದೆ. ನಂತರ ಚುನಾವಣಾ ನೀತಿ ಸಂಹಿತಿ ಅಡ್ಡಿಯಾಗಿತ್ತು. ಚುನಾವಣಾ ನಂತರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತ್ತು. ಇದರ ನಡುವೆ ಮೀಸಲಾತಿ ಹಂಚಿಕೆ ಸೇರಿ ಹಲವು ವಿಚಾರಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೆಟ್ಟಿಲೇರಿದ್ದವು. ನ್ಯಾಯ ಮಂಡಳಿಯೂ ಎಲ್ಲ ಗೊಂದಲ ಬಗೆಹರಿಸಿ ಆದೇಶ ಪತ್ರ ವಿತರಣೆಗೆ ಇದ್ದ ಅಡೆತಡೆಗಳನ್ನು ಬಗೆಹರಿಸಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ಫಲಿತಾಂಶದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆದೇಶ ಪ್ರತಿಯನ್ನು ನೀಡಲು ಕ್ರಮ ವಹಿಸಲಾಗುತ್ತದೆ.
-ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಮೂರು ವರ್ಷ ಗಳಿಂದ ಪೂರ್ಣವಾಗದೇ ಇರುವ 2021ನೇ ಸಾಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿ ಈ ತಿಂಗಳ ಅಂತ್ಯದೊಳಗಾದರೂ ನೇಮಕಾತಿ ಆದೇಶದ ಅಧಿಸೂಚನೆಯನ್ನು ಹೊರಡಿಸಬೇಕು. ಆಯ್ಕೆಯಾದವರಿಗೆ ಸ್ಥಳ ನಿಯುಕ್ತಿ ಮಾಡುವ ಮೂಲಕ ನೇಮಕಾತಿಯನ್ನು ಪೂರ್ಣಗೊಳಿಸಬೇಕು.
-ಕೆ.ಪಿ.ಮಧುಸೂದನ್, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗದ ಸಂಚಾಲಕ