ರೈತರ ನೆರವಿಗೆ ತಕ್ಷಣ 10 ಸಾವಿರ ಕೋಟಿ ರೂ. ಬಿಡುಗಡೆಗೆ ಒತ್ತಾಯಿಸಿದ ಎಚ್.ಡಿ. ಕುಮಾರಸ್ವಾಮಿ

Update: 2023-12-07 18:09 GMT

ಬೆಳಗಾವಿ(ಸುವರ್ಣ ವಿಧಾನಸೌಧ): ತೀವ್ರ ಬರದಿಂದ ಕಂಗೆಟ್ಟಿರುವ ರೈತರ 2 ಲಕ್ಷ ರೂಪಾಯಿ ವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ರಾಜ್ಯ ಕೃಷಿ ವಲಯವನ್ನು ಬರದ ಸಂಕಷ್ಟದಿಂದ ಪಾರು ಮಾಡಲು ತಕ್ಷಣವೇ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಗುರುವಾರ ವಿಧಾನಸಭೆಯಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸರಕಾರಕ್ಕೆ ಪ್ರಚಾರದ ಮೇಲೆ ಇರುವ ಹುಚ್ಚು ರೈತರ ಬಗ್ಗೆ ಇಲ್ಲ ಎಂದು ಆರೋಪಿಸಿದರು.

ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸರಕಾರದ ಅಸಡ್ಡೆ, ನಿರ್ಲಕ್ಷ್ಯ ನನಗೆ ಅಚ್ಚರಿ, ಕಳವಳ ತಂದಿದೆ. ಕಳೆದ ಆರು ತಿಂಗಳಿನಿಂದ ಕೇವಲ ಗ್ಯಾರಂಟಿಗಳ ಬಗ್ಗೆಯೇ ಕೆಲಸ ಮಾಡುತ್ತಿರುವ ಈ ಸರಕಾರ, ಆರ್ಥಿಕ ಹೊರೆಯನ್ನು ತನ್ನ ಮೇಲೆ ಎಳೆದುಕೊಂಡು ರೈತರಿಗೆ ಪ್ರತಿಯೊಂದಕ್ಕೂ ಬರೆ ಎಳೆಯುತ್ತದೆ ಎಂದು ಅವರು ಟೀಕಿಸಿದರು.

ಗ್ಯಾರಂಟಿಗಳ ಜಾರಿಗೆ ಹೆಚ್ಚು ಸಮಯ ಕೊಟ್ಟು ಆರ್ಥಿಕ ಹೊರೆ ಅವರೇ ತಂದು ಕೊಂಡಿದ್ದಾರೆ. ಮುಂಗಾರು ಪ್ರಾರಂಭ ಆಗಿದೆ ಅಂತ ರೈತರು ಬಿತ್ತನೆ ಮಾಡಿದ್ದರು. ನಂತರ ಮಳೆ ಕೈ ಕೊಟ್ಟಿದೆ. ಆಗಸ್ಟ್ ತಿಂಗಳಿನಿಂದಲೇ ಈ ವರ್ಷ ಬರಗಾಲದ ಛಾಯೆ ಮೂಡಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ ನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 800 ಕೋಟಿ ರೂಪಾಯಿ ಇಡಲಾಗಿದೆ. ಕೇಂದ್ರ ಸರಕಾರಕ್ಕೆ ಬರಪೀಡಿತ 216 ತಾಲೂಕುಗಳ ನಷ್ಟದ ಬಗ್ಗೆ ಮಾಹಿತಿ ಕೊಟ್ಟಿದೆ ಸರಕಾರ. ಅಂದಾಜಿನ ಪ್ರಕಾರ ರೈತರು ಅನುಭವಿಸಿರುವ ಬೆಳೆ ನಷ್ಟದ ಶೇ.10ರಷ್ಟು ಬೆಳೆ ನಷ್ಟಕ್ಕೂ ಪರಿಹಾರ ಕೊಡಲು ಆಗುವುದಿಲ್ಲ. ಹೀಗಾಗಿ ರೈತರು ಸರಕಾರದಿಂದ ನೆರವು ಬಯಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಕೊಬ್ಬರಿ ಖರೀದಿ ಕೇಂದ್ರ ಪುನಾರಂಭ ಮಾಡಲು ಆಗ್ರಹ: ರೈತರನ್ನು ಉಳಿಸಲು ಕೂಡಲೇ ಕೊಬ್ಬರಿ ಖರೀದಿ ಕೇಂದ್ರಗಳನ್ನು ಮರು ಆರಂಭ ಮಾಡಬೇಕು.

ಕೊಬ್ಬರಿ ಬೆಲೆ ಹಿಂದೆ ಕ್ವಿಂಟಾಲ್ ಗೆ 18 ಸಾವಿರ ರೂಪಾಯಿ ಬೆಲೆ ಇತ್ತು, ಈಗ 7,500 ರೂಪಾಯಿಗೆ ಬಂದಿದೆ, ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ನಾಫೆಡ್ ಗೆ ಎಷ್ಟು ಪತ್ರ ಬರೆದರೂ ಉಪಯೋಗ ಇಲ್ಲದಾಗಿದೆ. ಕೇಂದ್ರದ ಅಧಿಕಾರಿಗಳ ಜತೆ ಕೂಡ ಮಾತನಾಡಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಪ್ರಚಾರಕ್ಕೆ ಕೊಡುವಷ್ಟು ಮಹತ್ವ ರೈತರ ಬಗ್ಗೆ ನೀಡುತ್ತಿಲ್ಲ. ಸಚಿವರೊಬ್ಬರು ಸಿಎಂಗೆ ಪತ್ರ ಬರೆದಿದ್ದಾರೆ, ಪ್ರಚಾರಕ್ಕೆ ಕೊಟ್ಟ ಜಾಹೀರಾತಿನ ಮೊತ್ತ 140 ಕೋಟಿ ರೂಪಾಯಿ ಕೂಡಲೇ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ. ಅವರು ರೈತರ ಬಗ್ಗೆ ಇಂಥ ಪತ್ರಗಳನ್ನು ಬರೆದಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ಕಲಬುರಗಿ, ರಾಯಚೂರು ಎಲ್ಲಾ ಕಡೆ ಕೈಗೆ ಬರಬೇಕಿದ್ದ ಬೆಳೆ ಹಾಳಾಗಿದೆ. ಪದೇ ಪದೇ ಕೇಂದ್ರದ ಕಡೆ ಬೆರಳು ತೋರಿಸಲಾಗುತ್ತಿದೆ. ಕೇಂದ್ರದಿಂದ ಮೊದಲನೆ ಕಂತಿನ ಹಣ ಬಂದಿರಬಹುದು. ಕೇಂದ್ರದ ತಂಡ ಬರ ಅಧ್ಯಯನ ಮಾಡುತ್ತಿದ್ದಾಗ ಗದಗ ಜಿಲ್ಲೆಯ ಅಧಿಕಾರಿಗಳು ನಿದ್ದೆ ಮಾಡ್ತಾ ಇದ್ದರು ಎನ್ನುವ ವಿಚಾರ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತ ಇಷ್ಟೊಂದು ಜಿಡ್ಡುಗಟ್ಟಿದೆಯೇ? ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News