ಬೆಂಗಳೂರು: ಬಿಜೆಪಿಗೆ ಸೇರಿದ ದಾಖಲೆಯಿಲ್ಲದ 2 ಕೋಟಿ ರೂ. ನಗದು ವಶ
ಬೆಂಗಳೂರು: ಸೂಕ್ತ ದಾಖಲೆಯಿಲ್ಲದ ಎರಡು ಕೋಟಿ ರೂ. ನಗದನ್ನು ಕಾರೊಂದರಲ್ಲಿ ಸಾಗಿಸುತ್ತಿದ್ದ ವೇಳೆ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಬಿನ್ನಿಮಿಲ್ ಹತ್ತಿರದ ಎ.ಪಿ.ಎಂ.ಸಿ ಬಳಿ ಇರುವ ಸ್ಥಿರ ಕಣ್ಗಾವಲು ಪಡೆಯ ಚೆಕ್ ಪೋಸ್ಟ್ ನಲ್ಲಿ ಈ ಹಣವನ್ನು ಅಧಿಕಾರಿಗಳು ಎಪ್ರಿಲ್ 20ರಂದು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ‘ಕಾರಿನಲ್ಲಿ ಸಾಗಿಸುತ್ತಿದ್ದ ಸೂಕ್ತ ದಾಖಲೆ ಇಲ್ಲದ 2 ಕೋಟಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಹಣವು ರಾಜ್ಯ ಬಿಜೆಪಿ ಪಕ್ಷದ ಕಚೇರಿಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದ್ದು, ಪಕ್ಷದ ಹಣ ಎನ್ನುವ ಹಿನ್ನೆಲೆಯಲ್ಲಿ ಈ ಕುರಿತು ಆದಾಯ ತೆರಿಗೆ ಇಲಾಖೆಯವರು ಆದಾಯ ತೆರಿಗೆ ಕಾಯ್ದೆಯನ್ವಯ ಸದರಿ ಹಣವನ್ನು ಸ್ವೀಕರಿಸಲು ಬರುವುದಿಲ್ಲ ಎಂದು ಹಿಂಬರಹ ನೀಡಿರುತ್ತಾರೆ ಎಂದು ಆಯೋಗವು ಮಾಹಿತಿ ನೀಡಿದೆ.
ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಾಹನ ಚಲಾಯಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಸಹ ಪ್ರಯಾಣಿಕ ಗಂಗಾಧರ್ ಎಂಬುವವರ ಮೇಲೆ ಐಪಿಸಿ ಸೆಕ್ಷನ್ 1860 (171ಇ, 171ಎಫ್, 171ಬಿ, 171ಸಿ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡು, ಹಣವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.