ಬಿಜೆಪಿಯ ಭಗವಂತ್ ಖೂಬಾ ಅವರನ್ನು ಸೋಲಿಸಿದ ಸಾಗರ್ ಖಂಡ್ರೆ ಸಂಸತ್ ಪ್ರವೇಶಿಸಲಿರುವ ಕಿರಿಯ ಸಂಸದ
ಬೀದರ್: ಹ್ಯಾಟ್ರಿಕ್ ಗೆಲುವಿನ ನೀರಿಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ ಮುಖಭಂಗ ಅನುಭವಿಸಿದ್ದಾರೆ. ಕಿರಿಯ ವಯಸ್ಸಿನ ಸಾಗರ್ ಖಂಡ್ರೆ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಸಂಸತ್ತು ಪ್ರವೇಶಿಸಲಿರುವ ಅತಿ ಕಿರಿಯ ವಯಸ್ಸಿನ ಸಂಸದನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
1997ರ ಡಿಸೆಂಬರ್ 29ರಂದು ಜನಿಸಿರುವ ಸಚಿವ ಈಶ್ವರ್ ಖಂಡ್ರೆ ಪುತ್ರ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ತಾವು ಎದುರಿದ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವು ಸಾಧಿಸಿದ್ದಾರೆ. 1984ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದಲೇ ನರಸಿಂಗ್‌ರಾವ್ ಸೂರ್ಯವಂಶಿ ಅವರು ತನ್ನ 27ನೇ ವಯಸ್ಸಿನಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಈಗ ಆ ದಾಖಲೆಯನ್ನು ಸಾಗರ್ ಖಂಡ್ರೆ ಮುರಿದಿದ್ದಾರೆ.
5ನೆ ಬಾರಿಗೂ ಪಿ.ಸಿ.ಗದ್ದಿಗೌಡರ ಜಯ
ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ 5ನೆ ಬಾರಿ ವಿಜಯ ಪತಾಕೆ ಹಾರಿಸಿದ್ದು ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಸೋಲು ಅನುಭವಿಸಿದ್ದಾರೆ.
ಕಳೆದ ಚುನಾವಣೆಗಳಲ್ಲಿ ಅನಾಯಾಸದ ವಿಜಯ ಸಾಧಿಸಿರುವ ಗದ್ದಿಗೌಡರ್, ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 6,71,039 ಮತ ಪಡೆದರೆ, ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು 6,02,640 ಮತ ಪಡೆದಿದ್ದಾರೆ. ಈ ಪೈಕಿ ಒಟ್ಟಾರೆ 68,399 ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ ಸಿಕ್ಕಿದೆ.