ಗೋಮಾಂಸ ರಫ್ತಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ, ಬಿಜೆಪಿಗರು ಇದಕ್ಕೇನಂತೀರಿ? : ಸಂತೋಷ್ ಲಾಡ್

ಸಂತೋಷ್ ಲಾಡ್
ಬೆಂಗಳೂರು: ‘ನಮ್ಮ ಭಾರತ ದೇಶ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟು ಮಾತನಾಡುತ್ತಿರಲ್ಲಾ ಗೋವುಗಳ ಬಗ್ಗೆ ಬಿಜೆಪಿಗರು ಇದಕ್ಕೇನಂತೀರಿ?’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದಿಲ್ಲಿ ಬಿಜೆಪಿ ಸದಸ್ಯರನ್ನು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯ ವೇಳೆ ಗೋವುಗಳ ರಕ್ಷಣೆ ಹಾಗೂ ಗೋಮಾಂಸ ವಿಚಾರ ಪ್ರತಿಧ್ವನಿಸಿ, ಬಿಜೆಪಿ ಶಾಸಕ ಶರಣು ಸಲಗಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಡುವೆ ಜಟಾಪಟಿ ನಡೆಯಿತು.
ಆರಂಭದಲ್ಲಿ ಶರಣು ಸಲಗಾರ್ ಚಾಮರಾಜಪೇಟೆಯಲ್ಲಿ ನಡೆದ ಹಸು ಕೆಚ್ಚಲು ಕೊಯ್ದ ಪ್ರಕರಣ ಪ್ರಸ್ತಾಪಿಸಿ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗೋಮಾತೆ ಕೆಚ್ಚಲು ಕಡಿದು, ಗೋವುಗಳ ಕತ್ತು ಕಡಿದು ಸರಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಣು ಸಲಗಾರ್ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿ ಬಜೆಟ್ ಬಗ್ಗೆ ಭಾವುಕರಾಗಿ ಮಾತನಾಡುತ್ತಿದ್ದೀರಿ. ಹಾಲು, ಕೆಚ್ಚಲು, ತಾಯಿ ಎಂದೆಲ್ಲಾ ಭಾವನಾತ್ಮಕ ವಿಚಾರ ಸೇರಿಸುವುದು ಎಷ್ಟು ಸರಿ?.ಅದು ಅಲ್ಲದೆ, ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟು ಮಾತನಾಡುತ್ತಿರಲ್ಲಾ ಗೋವುಗಳ ಬಗ್ಗೆ ಇದಕ್ಕೇನಂತೀರಿ? ಎಂದು ತಿರುಗೇಟು ನೀಡಿದರು.
ಈ ವೇಳೆ ಪರಸ್ಪರ ಎರಡೂ ಕಡೆಯ ಸದಸ್ಯರ ನಡುವೆ ಜಟಾಪಟಿ, ಮಾತಿನ ಚಕಮಕಿ ನಡೆಯಿತು. ನಂತರ ಸ್ಪೀಕರ್ ಯುಟಿ ಖಾದರ್ ಅವರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.