ಸಿಎಂ ಪ್ರಚಾರ ವೇಳೆ ಭದ್ರತಾ ಲೋಪ : ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡ ಕಾಂಗ್ರೆಸ್ ಕಾರ್ಯಕರ್ತ
ಬೆಂಗಳೂರು: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದ ವೇಳೆ ಭದ್ರತಾ ಲೋಪ ಕಂಡುಬಂದಿದ್ದು, ಈ ವೇಳೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊರ್ವ ಸೊಂಟದಲ್ಲಿ ಗನ್ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಸೋಮವಾರ ಇಲ್ಲಿನ ಭೈರಸಂದ್ರ ಮುಖ್ಯ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಸೇರಿದಂತೆ ಪ್ರಮುಖರು ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸೊಂಟದಲ್ಲಿ ಗನ್ ಇಟ್ಟುಕೊಂಡು ಪ್ರಚಾರ ವಾಹನದ ಮೇಲೇರಿ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದದರು.
ಈ ದೃಶ್ಯ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಗನ್ ಸೊಂಟದಲ್ಲಿದ್ದುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಹಾರ ಹಾಕಿದ ವ್ಯಕ್ತಿ ರಿಯಾಝ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾಗಿದೆ.
ಘಟನೆ ಭದ್ರತಾ ಲೋಪ ಎಂದು ಬಿಂಬಿತವಾದ ಬಳಿಕ ಪೊಲೀಸ್ ಅಧಿಕಾರಿಗಳು ರಿಯಾಝ್ ಅವರನ್ನು ಸಿದ್ದಪುರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ, ಈ ಹಿಂದೆ ತನ್ನ ಮೇಲೆ ದಾಳಿಯಾದ ಕಾರಣಕ್ಕಾಗಿ ಪರವಾನಗಿ ಪಡೆದು ಗನ್ ಇಟ್ಟುಕೊಂಡಿದ್ದೇನೆ ಎಂದು ಆತ ಸ್ಪಷ್ಟನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಪಿಸ್ತೂಲ್ ಇಟ್ಟುಕೊಂಡಿರುವುದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಬಿಜೆಪಿ ಪ್ರಮುಖರು ಇದು ಭದ್ರತಾ ಲೋಪ ಮಾತ್ರವಲ್ಲದೆ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.