ತಿಂಗಳೊಳಗಾಗಿ ನಿಗಮ-ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆ : ಗೃಹ ಸಚಿವ ಜಿ.ಪರಮೇಶ್ವರ್

Update: 2024-06-25 10:33 GMT

ಬೆಂಗಳೂರು : ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರಗಳನ್ನು ಆಯ್ಕೆ ಮಾಡಲು ಮುಖ್ಯಮಂತ್ರಿಯವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟುವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಅನುಭವವಿದೆ. ಆದ್ದರಿಂದ ಯಾವ ತೊಂದರೆಯಾಗುವುದಿಲ್ಲ. ಒಂದು ತಿಂಗಳೊಳಗಾಗಿ ಆಯ್ಕೆ ಮಾಡಿ, ಪಟ್ಟಿ ನೀಡುತ್ತೇನೆ ಎಂದು ಹೇಳಿದರು.

ತುರ್ತುಪರಿಸ್ಥಿತಿಗೆ 49 ವರ್ಷ ಆದ ಹಿನ್ನೆಲೆಯಲ್ಲಿ ಬಿಜೆಪಿಯವರ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ದೇಶದಲ್ಲಿ ಬಡತನ ಇನ್ನೂ ಇದೆ. ಮತ್ತಷ್ಟು ಅಭಿವೃದ್ಧಿಯಾಗಬೇಕು, ಉದ್ಯೋಗ ಸಿಗಬೇಕಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನೆಲ್ಲ ಬಿಟ್ಟು 49 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿರುವುದನ್ನು ಮಾತನಾಡಲು ಹೊರಟಿರುವ ಬಿಜೆಪಿಯವರಿಗೆ ದೇಶದ ಅಭಿವೃದ್ಧಿ, ಭವಿಷ್ಯ, ಜನರ ಬಗ್ಗೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ" ಎಂದು ತಿರುಗೇಟು ನೀಡಿದರು.

ಯುವತಿ ಪ್ರಬುದ್ಧ ಕೊಲೆ‌ ಪ್ರಕರಣ ಸಿಐಡಿಗೆ ವಹಿಸಿರುವ ಕುರಿತು ಪ್ರತಿಕ್ರಿಯಿಸಿ, "ಈವರೆಗಿನ ತನಿಖೆ ಕೊಲೆಯಾದ ಯುವತಿಯ ಪಾಲಕರಿಗೆ ಸಮಾಧಾನ ತಂದಿಲ್ಲ. ಸಿಐಡಿಗೆ ವಹಿಸುವಂತೆ ಕೋರಿ ನನಗೂ ಮನವಿ ಮಾಡಿದ್ದರು. ಸಿಎಂ ಜೊತೆ ಚರ್ಚಿಸಿ, ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದೆ‌. ನಿನ್ನೆ ಮುಖ್ಯಮಂತ್ರಿಯವರು ಸಿಐಡಿಗೆ ವಹಿಸಿದ್ದಾರೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News