ಪ್ರಜ್ವಲ್ ರೇವಣ್ಣ ಲಂಪಟ, ಆತನ ಕೃತ್ಯಗಳು ನೀಚತನದ್ದು ಎಂದ ಹೈಕೋರ್ಟ್
ಬೆಂಗಳೂರು : ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಇನ್ನೊಂದು ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟ ಮಾತ್ರ ಬಾಕಿ ಉಳಿದಿದೆ
ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಸಂಬಂಧ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ವಜಾ ಮಾಡಿದೆ.
ಹೈಕೋರ್ಟ್‌ನ ಏಕ ಸದಸ್ಯ ಪೀಠ ಹೇಳಿದ್ದೇನು? :
ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್, ‘ಮೇಲ್ನೋಟಕ್ಕೆ ಪ್ರಜ್ವಲ್ ಒಬ್ಬ ಲಂಪಟ ಹಾಗೂ ತನ್ನ ಇಂದ್ರಿಯಗಳ ಮೇಲಿನ ನಿಯಂತ್ರಣ ಕಳೆದುಕೊಂಡು, ಕಾಮಾತುರನಾಗಿ ವರ್ತಿಸಿದ್ದು, ಈ ನೀಚತನದ ಕೃತ್ಯಗಳು ಸ್ವಸ್ಥ ಸಮಾಜದ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುವಂತಿದೆ, ಹಾಗಾಗಿ ಪ್ರಜ್ವಲ್ ಜಾಮೀನಿಗೆ ಅರ್ಹನಲ್ಲ ಎಂದು’ ಎಂದು ಆಘಾತ ವ್ಯಕ್ತಪಡಿಸಿದೆ.
ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಒಂದು ನಿಯಮಿತ ಜಾಮೀನು ಮತ್ತು ಎರಡು ನಿರೀಕ್ಷಣಾ ಅರ್ಜಿಗಳ ಮೇಲಿನ ಸುದೀರ್ಘ ವಿಚಾರಣೆ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು. ಮೇಲ್ನೋಟಕ್ಕೆ, ಅರ್ಜಿದಾರರು ಅಪರಾಧ ಮಾಡಿದ್ದಾರೆ ಎಂದು ನಂಬಲು ಕಾರಣಗಳಿವೆ. ಆರೋಪಿಯು ತಲೆಮರೆಸಿಕೊಳ್ಳುವ ಅಥವಾ ಜಾಮೀನಿನ ಮೇಲೆ ಪಲಾಯನ ಮಾಡುವ ಅಪಾಯವು ಹೆಚ್ಚಿದೆ ಎಂದಿದೆ.
ಏಕೆಂದರೆ ಅರ್ಜಿದಾರ ಈ ಹಿಂದೆ ತನಿಖೆಗೆ ಸಹಕರಿಸಲಿಲ್ಲ. ಅಪರಾಧದ ನೋಂದಣಿಯ ನಂತರ 32 ದಿನಗಳಿಗಿಂತ ಹೆಚ್ಚು ಕಾಲ ಜರ್ಮನಿಯಲ್ಲಿ ಕುಳಿತುಕೊಂಡಿದ್ದ. ಆದ್ದರಿಂದ, ಆತ ದೇಶದಿಂದ ಪಲಾಯನ ಮಾಡುವ ಅಪಾಯ ದೊಡ್ಡದಾಗಿದೆ. ಅಪರಾಧದ ಈ ಇಡೀ ಸರಣಿಯಲ್ಲಿ ಹೆಚ್ಚಿನ ಆರೋಪಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುವಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆಯಾದರೆ, ಅರ್ಜಿದಾರನ ಪ್ರಕರಣದಲ್ಲಿ ಈ ರೀತಿ ಬೆದರಿಕೆಗಳ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮನೆಕೆಲಸದಾಕೆ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ಜಾಮೀನು ಕೋರಿದ್ದರು. ಈ ಪ್ರಕರಣದಲ್ಲಿ ಪ್ರಜ್ವಲ್ ಎರಡನೇ ಆರೋಪಿಯಾಗಿದ್ದಾರೆ. ಮೊದಲನೇ ಆರೋಪಿಯಾಗಿರುವ ಜೆಡಿಎಸ್ ಶಾಸಕ ಹಾಗು ಪ್ರಜ್ವಲ್ ತಂದೆ ಎಚ್.ಡಿ.ರೇವಣ್ಣಗೆ ಈಗಾಗಲೇ ಜಾಮೀನು ಮಂಜೂರಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿನ ಕೆಲಸದಾಕೆಯ ದೂರಿನ ಅನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣ ಮತ್ತು ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕಲ್ಪಿಸುವ ನೆಪದಲ್ಲಿ ಹಾಸನದ ಮಹಿಳೆಯ ನಗ್ನ ಚಿತ್ರ/ವಿಡಿಯೊ ಸೆರೆ ಹಿಡಿದ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಪ್ರಜ್ವಲ್ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಎರಡೂ ಪ್ರಕರಣಗಳು ಬೆಂಗಳೂರಿನ ಸಿಐಡಿ ಸೈಬರ್ ಠಾಣೆಯಲ್ಲಿ ದಾಖಲಾಗಿವೆ.
ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಇನ್ನೆರಡು ದಿನದಲ್ಲಿ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
ಪ್ರಜ್ವಲ್ ಹಾಗೂ ಪ್ರಾಸಿಕ್ಯೂಷನ್ ಪರ ವಕೀಲರ ವಾದ-ಪ್ರತಿವಾದ ಹೇಗಿತ್ತು :
ತಮ್ಮ ವಿರುದ್ಧ ದಾಖಲಾದ ಮೊದಲ ಪ್ರಕರಣದಲ್ಲಿ ಜಾಮೀನು ಕೋರಿ ರೇವಣ್ಣ ಅವರು ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಅವರ ಮೂಲಕ ವಾದ ಮಂಡಿಸಿ, ಕೃತ್ಯಗಳು ನಡೆದಿದ್ದರೆ 376ನೇ ಕಲಂ ಅಡಿಯಲ್ಲಿ ಯಾವುದೇ ಅಪರಾಧ ನಡೆದಿಲ್ಲ, ಏಕೆಂದರೆ ಅವು ಸರ್ವಸಮ್ಮತವಾಗಿ ನಡೆದಿವೆ ಎಂದು ಹೇಳಿದ್ದರು.
ದೂರು ಸಲ್ಲಿಸುವಲ್ಲಿ ನಾಲ್ಕು ವರ್ಷಗಳ ವಿಳಂಬವಾಗಿದೆ ಮತ್ತು ಈ ವಿಳಂಬಕ್ಕೆ ಯಾವುದೇ ತೃಪ್ತಿಕರ ವಿವರಣೆಯನ್ನು ನೀಡಲಾಗಿಲ್ಲ ಎಂದು ನಾವಡಗಿ ಒತ್ತಿ ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್, ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ಜಾಮೀನಿಗೆ ವಿರೋಧ ವ್ಯಕ್ತಪಡಿಸಿ, ಪ್ರಜ್ವಲ್ ಫೋನ್ ತಡೆಹಿಡಿದು ತನಿಖೆಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ ಎಂದು ವಾದಿಸಿದರು. ಈ ಹಿಂದೆ ಪ್ರಜ್ವಲ್ ಪ್ರಭಾವೀ ಹುದ್ದೆಯಲ್ಲಿದ್ದು ಸಂತ್ರಸ್ತೆ ಅವರ ವಿರುದ್ಧ ದೂರು ಸಲ್ಲಿಸುವ ಸ್ಥಿತಿಯಿರಲಿಲ್ಲ. ಆಕೆ ಆಗ ದೂರು ಸಲ್ಲಿಸಿದ್ದರೆ ಆಕೆಗೆ ಬೆದರಿಕೆ ಹಾಗು ಕಿರುಕುಳ ಎದುರಿಸುವ ಸ್ಥಿತಿ ಬರುತ್ತಿತ್ತು.
ಅಪರಾಧದ ದೃಶ್ಯವು ವೀಡಿಯೊದಲ್ಲಿನ ಹಿನ್ನೆಲೆಗೆ ಹೊಂದಿಕೆಯಾಗುತ್ತಿದೆ ಎಂದು ವರದಿ ಮಾಡಿದ ವಿಧಿವಿಜ್ಞಾನ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ಇಂತಹ ಪ್ರಭಾವೀ ಆರೋಪಿಗಳನ್ನು ಜಾಮೀನಿನಮೇಲೆ ಬಿಡುಗಡೆ ಮಾಡಿದರೆ ಸಾಕ್ಷಿಗಳನ್ನು ಬೆದರಿಸುವ ಹಾಗು ಇಂತಹ ಅಪರಾಧಗಳನ್ನು ಮತ್ತೆ ಎಸಗುವ ಅಪಾಯವಿದೆ ಎಂದು ಪ್ರೊ ರವಿವರ್ಮ ಕುಮಾರ್ ವಾದಿಸಿದ್ದರು.
ಈ ವರ್ಷದ ಆಗಸ್ಟ್ 24 ರಂದು, ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ನಾಲ್ಕು ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ಸಂಸದರು/ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ನಾಲ್ಕು ಪ್ರಕರಣಗಳಲ್ಲಿ ಮೊದಲನೆಯ 2,144 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ.