ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

Update: 2024-01-05 13:41 GMT

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಸೇಡು ತೀರಿಸಿಕೊಳ್ಳುವ ಹಾಗೂ ಅವರನ್ನು ಲೋಕಸಭೆ ಚುನಾವಣೆ ಕಣದಿಂದ ತಪ್ಪಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಷಡ್ಯಂತ್ರ ರೂಪಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಹಾಗೂ ಪ್ರತಾಪ್ ಸಿಂಹಗೆ ಸರಕಾರ ಕಿರುಕುಳ ನೀಡುತ್ತಿರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಷಡ್ಯಂತ್ರದ ಭಾಗವಾಗಿದೆ ಎಂದು ದೂರಿದರು.

ಹುಬ್ಬಳ್ಳಿಯಲ್ಲಿ 30 ವರ್ಷ ಹಳೆಯ ಕೇಸ್ ನಲ್ಲಿ ಕರ ಸೇವಕನ ಬಂಧನ ಆಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯ ನಮ್ಮ ಸ್ನೇಹಿತರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಅವರು ಹೇಳಿದರು.

ಬೇಲೂರು ತಾಲೂಕಿನ ಒಂದು ಗ್ರಾಮದಲ್ಲಿ ಪೂರ್ವ ಅನುಮತಿ ಇಲ್ಲದೆ ಮರ ಕಡಿದಿರೋ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಅವರ ಪಾತ್ರವಿಲ್ಲ. ಆದರೂ, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಲ್ಲಿರುವ ಸರಕಾರಿ ಭೂಮಿಯಲ್ಲಿ ಕಟ್ಟಿರುವ ಮನೆಗಳ ಸಕ್ರಮೀಕರಣ ಮಾಡೊ ಬಗ್ಗೆ ತಹಶೀಲ್ದಾರ್‍ಗೆ ವರದಿ ಹೋಗಿದೆ ಎಂದು ಅವರು ಹೇಳಿದರು.

40 ಎಕರೆ ಭೂಮಿಯನ್ನು 16 ಜನಕ್ಕೆ ಹಕ್ಕುಪತ್ರಗಳನ್ನ ಕೊಟ್ಟಿದ್ದಾರೆ. 4 ಎಕರೆ 12 ಗುಂಟೆ ಗೋಮಾಳ ಆಗಿದೆ. 16ನೆ ವ್ಯಕ್ತಿ ರಾಕೇಶ್ ಶೆಟ್ಟಿಗೆ 4 ಎಕರೆ ಭೂಮಿ ಕೊಟ್ಟಿದ್ದಾರೆ ಸರಕಾರದಿಂದ. ಅವರ ಮಗಳು ಜಯಮ್ಮ ವಿಕ್ರಮ್ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ. ಲೀಸ್ ಪ್ರಾರಂಭ ಆಗೋದು 2024ರ ಜನವರಿಯಿಂದ. ಜಯಮ್ಮ ಮತ್ತು ಇತರರು ಈ ಮಧ್ಯೆ ಮರ ಕಡಿದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಮರ ಕಡಿದ ಪ್ರಕರಣದಲ್ಲಿ ಎ1, ಎ2 ಎಂದು ಜಯಮ್ಮ, ರಾಕೇಶ್ ಶೆಟ್ಟಿ ಹೆಸರು ಉಲ್ಲೇಖ ಮಾಡಿದ್ದಾರೆ. ಪ್ರಕರಣದಲ್ಲಿ ಎ3 ಇರಲಿಲ್ಲ. ಅಲ್ಲಿ ಸ್ಥಳೀಯ ಒಬ್ಬ ಪುಢಾರಿ ಪ್ರತಾಪ್ ಸಿಂಹಗೆ ಪಾಠ ಕಲಿಸಬೇಕೆಂದು ಸಿಎಂ ತಲೆ ತಿಂದ. ವಿವೇಚನೆ ಕಳೆದುಕೊಂಡ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಆ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಅನಗತ್ಯವಾಗಿ ಪ್ರತಾಪ್ ಸಿಂಹ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ ಎಂಬುದು ಹೊರಗೆ ಬರಲಿ. ಕಾಂಗ್ರೆಸ್‍ನವರು ವಿರೋಧಿಗಳ ದನಿ ಅಡಗಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಪರಿಷತ್ ಸದಸ್ಯರೊಬ್ಬರು ಸರಕಾರಿ ಜಮೀನಿನಲ್ಲಿ ಮರ ಕಡಿದರು. ಅವರ ಮೇಲೆ ಏಕೆ ಕ್ರಮ ಆಗಿಲ್ಲ. ಇದಕ್ಕೆ ಸಿಎಂ, ಗೃಹ ಸಚಿವರೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News