ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ವೈಜ್ಞಾನಿಕವಾದದ್ದು: ಎಚ್.ಕಾಂತರಾಜು
ಬೆಂಗಳೂರು: ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳನ್ನು ಸಮೀಕರಿಸಿ ಜಾರಿಗೊಳಿಸುವ ಅಗ್ಯವಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ಹೇಳಿದರು.
ಗುರುವಾರ ಹೈಕೋರ್ಟ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಯೋಗದ ವರದಿಯನ್ನು ಇನ್ನೂ ಯಾರೂ ನೋಡಿಲ್ಲ. ವರದಿಯಲ್ಲಿ ಏನಿದೆ ಎಂಬ ಅಂಕಿ-ಅಂಶಗಳು ಎಲ್ಲೂ ಬಿಡುಗಡೆಯಾಗಿಲ್ಲ. ಆದರೆ, ಬಿಡುಗಡೆಗೂ ಮುನ್ನವೇ ಅದು ಅವೈಜ್ಞಾನಿಕ, ಹಳೆಯದು ಎಂಬ ಅಭಿಪ್ರಾಯಗಳು ಅಪ್ರಸ್ತುತ’ ಎಂದು ಪ್ರತಿಕ್ರಿಯಿಸಿದರು
‘ಸಮೀಕ್ಷೆ ನಡೆಸಿ ಎಂಟು ವರ್ಷಗಳಾಗಿದ್ದು, ಅದನ್ನು ಜಾರಿಗೊಳಿಸುವುದು ಸಲ್ಲ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 10 ವರ್ಷಗಳಷ್ಟು ಹಿಂದಿನ ವರದಿಯನ್ನು ಜಾರಿ ಮಾಡಬಹುದು. ಈ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದಲ್ಲಿ ನಡೆದಿದ್ದಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೆ ಎಲ್ಲ ಅರ್ಹತೆಗಳನ್ನು ಹೊಂದಿದೆ. ಅವಕಾಶ ವಂಚಿತ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂಬ ಉದ್ದೇಶದಿಂದ 2013ರಲ್ಲಿ ಸರಕಾರ ಸಮೀಕ್ಷೆ ನಡೆಸಲು ನಿರ್ಧರಿಸಿತ್ತು. ಅದರಂತೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. 55 ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲಾಗಿದೆ. ಇದನ್ನು ಜಾತಿ ಜನಗಣತಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
‘ಜಾತಿ’ ಮಾಹಿತಿ ಕಲೆಹಾಕುವ ಕಾಲಂ ಇತ್ತು. ಆದರೆ, ಅದನ್ನು ಮೀರಿ ಬಹಳಷ್ಟು ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಮನೆ, ನಿವೇಶನ ಹೊಂದಿರುವವರು, ಪಡಿತರ ಚೀಟಿ, ಬ್ಯಾಂಕ್ ಖಾತೆ, ಉದ್ಯೋಗ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸಲಾಗಿದೆ. ಸಂವಿಧಾನದ ಪ್ರಕಾರ ಮೀಸಲಾತಿ ನೀಡಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳು ಅರ್ಹವಾಗಿವೆ. ಜಾತಿ ಆಧಾರಿತವಾಗಿ ಸಮೀಕ್ಷೆ ನಡೆದು ಅದನ್ನು ಪರಿಗಣಿಸಿ ಮೀಸಲಾತಿ ನೀಡಲಾಗುವುದಿಲ್ಲ ಮತ್ತು ಜಾತಿ ಆಧಾರಿತ ಸಮೀಕ್ಷೆಗಳು ಸಂವಿಧಾನ ಬಾಹಿರ ಎಂದು ಅವರು ವಿವರಿಸಿದರು.
ಆಯೋಗದ ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿಯಾಗಿದ್ದು, ಆಯೋಗದ ಮುಖ್ಯಸ್ಥರಾಗಿದ್ದರು. ಸಮೀಕ್ಷೆಯ ಕಾರ್ಯತಂಡದ ಸದಸ್ಯರೂ ಆಗಿದ್ದರು. ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿ ಅವರ ಸಹಿ ಇಲ್ಲ ಎಂಬುದು ಸತ್ಯ. ಆದರೆ, ಆಯೋಗದ ಕಾರ್ಯಕಾರಿ ಮಂಡಳಿ ಅಂತಿಮಗೊಂಡಿರುವ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂಬ ನಿರ್ಣಯ ಕೈಗೊಂಡಿತ್ತು. ಅದಕ್ಕೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿದ್ದರು ಎಂದು ಅವರು ಸ್ಪಷ್ಟಣೆ ನೀಡಿದರು.
‘ತಮ್ಮ ನೇತೃತ್ವದ ಆಯೋಗದ ಸಾಮಾಜಿಕ ಸಮೀಕ್ಷಾ ವರದಿ ಸದಸ್ಯ ಕಾರ್ಯದರ್ಶಿ ಬಳಿ ಇದೆ. ಅದನ್ನು ಸದಸ್ಯ ಕಾರ್ಯದರ್ಶಿಯಾದರೂ ಸರಕಾರಕ್ಕೆ ತಲುಪಿಸಬೇಕು ಅಥವಾ ಸರಕಾರವೇ ಪಡೆದುಕೊಳ್ಳಬೇಕು. ಮೂಲ ಪ್ರತಿ ನಾಪತ್ತೆಯಾದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾವು ಅವಧಿ ಮುಗಿಯುವ ಮುನ್ನವೇ ಸದಸ್ಯ ಕಾರ್ಯದರ್ಶಿಗೆ ವರದಿ ನೀಡಿ ಬಂದಿದ್ದೇವೆ. ಒಳಗಿನ ಮಾಹಿತಿಗಳು ತಮಗೆ ಗೊತ್ತಿಲ್ಲ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ವಿವರಿಸಿದರು.