ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ: ಮಹಿಳೆಯ ಗ್ರಾಪಂ ಸದಸ್ಯತ್ವ ರದ್ದುಪಡಿಸಿದ ಹೈಕೋರ್ಟ್

Update: 2023-09-29 12:24 GMT

ಬೆಂಗಳೂರು, ಸೆ.29: ಹಿಂದುಳಿದ ವರ್ಗಗಳ ಅಡಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿ, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡವೆಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದ ಸದಸ್ಯರೊಬ್ಬರ ಸದಸ್ಯತ್ವವನ್ನು ಹೈಕೋರ್ಟ್ ರದ್ದುಪಡಿಸಿದೆ.

ಲಕ್ಷ್ಮೀ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ಸದಸ್ಯತ್ವವನ್ನು ರದ್ದುಪಡಿಸಿದೆ. ಅಲ್ಲದೆ, ಆಕೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ನೀಡಿರುವುದಲ್ಲದೆ ಆಕೆಯನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಆದೇಶ ನೀಡಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅರ್ಜಿದಾರರ ಆಯ್ಕೆ ಕಾನೂನು ಬಾಹಿರ ಮತ್ತು ಸಂವಿಧಾನದ ತತ್ವಗಳಿಗೆ ವಿರುದ್ಧವಾದುದು. ಹೀಗಾಗಿ, ಪ್ರತಿವಾದಿ ರಾಜ್ಯ ಚುನಾವಣಾ ಆಯೋಗವು ಎರಡು ವಾರಗಳಲ್ಲಿ ಸೊನ್ನ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಆದೇಶಿಸಿದೆ.

ಅರ್ಜಿದಾರರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಸಂವಿಧಾನಿಕ ಮಾರ್ಗಗಳ ಮೂಲಕ, ಹೀಗಾಗಿ, ಕಲಬುರಗಿ ಜಿಲ್ಲಾಧಿಕಾರಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜತೆಗೆ, ಅರ್ಜಿದಾರರು ಈವರೆಗೆ ಪಡೆದಿರುವ ಸೌಲಭ್ಯಗಳನ್ನು ವಾಪಸ್ ಪಡೆಯಬೇಕು ಎಂದೂ ಸಹ ನ್ಯಾಯಪೀಠ ನಿರ್ದೇಶನ ನೀಡಿದೆ.

ಪ್ರಕರಣವೇನು?: ಲಕ್ಷ್ಮೀ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮ ಪಂಚಾಯತಿಗೆ ಒಬಿಸಿ ಕೆಟಗರಿ ಅಡಿ ಆಯ್ಕೆಯಾಗಿದ್ದರು. ನಂತರ 2023ರ ಜು.24ರಂದು ರಾಜ್ಯ ಚುನಾವಣಾ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿತ್ತು. ಅದರಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿತ್ತು.

ಅರ್ಜಿದಾರರು ತಾವು ಮೂಲತಃ ತಳವಾರ ಜಾತಿಗೆ ಸೇರಿದ್ದು, ಆ ಜಾತಿ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರುತ್ತದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಲ್ಲದೆ, ತಮ್ಮ ಒಬಿಸಿ ಜಾತಿ ಪ್ರಮಾಣಪತ್ರವನ್ನು ಬದಲಿಸಿ ಎಸ್‍ಟಿ ಜಾತಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತಿರಸ್ಕರಿಸಿ ತಹಶೀಲ್ದಾರ್ ಹಿಂಬರಹ ನೀಡಿದ್ದರು. ಅದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News