ಬಿಜೆಪಿ ಜತೆ ಹೋಗುವ ದಾರಿದ್ರ್ಯ ಬಂದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಆ.5: ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಜತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶನಿವಾರ ಶೇಷಾದ್ರಿಪುರಂನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮಗೂ ಬಿಜೆಪಿ ಜತೆ ಹೋಗುವ ದಾರಿದ್ರ್ಯ ಬಂದಿಲ್ಲ. ಸದನದಲ್ಲಿ ಸರಕಾರದ ವಿರುದ್ದ ಹೋರಾಟ ಮಾಡುತ್ತಿದ್ದೇನೆ. ಅಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷ, ಕೆಲವೊಮ್ಮೆ ಅವರ ಜತೆ ಸೇರಿ ಹೋರಾಟ ಮಾಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಯಾರ ಬಳಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ ಎಂದರು.
ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ. ನಮ್ಮ ರಾಜ್ಯಕ್ಕೆ ಕಾಂಗ್ರೆಸ್ ಎಷ್ಟು ದ್ರೋಹ ಮಾಡಿದೆಯೋ ಅಷ್ಟೇ ದ್ರೋಹವನ್ನು ಬಿಜೆಪಿ ಕೂಡ ಮಾಡಿದೆ ಎಂದ ಅವರು, ನಾನು ಹಿಟ್ ಅಂಡ್ ರನ್ ಮಾಡುವ ವ್ಯಕ್ತಿ ಅಲ್ಲ. ನಡೆದಿರುವುದನ್ನು ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಅವರಂತೆ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರಕಾರ ಇದ್ದಾಗ ಪ್ರತಿಯೊಂದನ್ನೂ ಪ್ರಶ್ನೆ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈಗೆಲ್ಲಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ಲುಗಳನ್ನು ಯಾಕೆ ತಡೆ ಹಿಡಿದ್ದಾರೆ?. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 710 ಕೋಟಿ ಹಣ ಬಿಡುಗಡೆ ಮಾಡಿಲ್ಲ. ಇದರ ಹಿಂದಿರುವ ಅಸಲಿ ಕಾರಣವನ್ನು ಜನರಿಗೆ ಕೊಂಚ ಹೇಳಬೇಕಲ್ಲವೇ ಎಂದು ಅವರು ಒತ್ತಾಯಿಸಿದರು.
ಇನ್ನೂ, ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಕಮೀಷನ್ ದಂಧೆ ಶುರುವಾಗಿದೆ. ಅದಕ್ಕಾಗಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದಾರೆ. ಅಷ್ಟೇ ಮಾತ್ರವಲ್ಲದೆ, 20 ವರ್ಷ ಕೆಲಸ ಮಾಡಿರುವ ಒಬ್ಬ ಮುಖ್ಯ ಇಂಜಿನಿಯರ್ ಒಬ್ಬರನ್ನು ಇಟ್ಟುಕೊಂಡಿದ್ದಾರೆ. ಅಲ್ಲಿಂದ ಕಡಿತ ಮುಂದೆ ಹೊಗಲು ಶೇ.15ರಷ್ಟು ಕೊಡಬೇಕಿದೆ ಎಂದು ಅವರು ಆರೋಪಿಸಿದರು.
ಪ್ರತಿಯೊಂದಕ್ಕೂ ಕೈ ಚಾಚುವ, ಜನರ ರಕ್ತ ಹೀರುವ ಈ ರೀತಿಯ ದರಿದ್ರ ಸರಕಾರ, ಇಂತಹ ಕೆಟ್ಟ ಸರಕಾರವನ್ನು ನಾನು ಎಲ್ಲಿಯೂ ನೋಡಿಲ್ಲ. ಅದು ಗೊತ್ತಿದ್ದರೂ ನನ್ನ ಕೆಣಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಣಕಲಿ, ಕಾಯುತ್ತಾ ಇದ್ದೇನೆ. ಸೂಟ್ ಕೇಸ್ ಗಟ್ಟಲೇ ದಾಖಲೆಗಳು ನನ್ನ ಬಳಿ ಇವೆ ಎಂದು ಅವರು ಎಚ್ಚರಿಕೆ ನೀಡಿದರು.