ನಮ್ಮ ಪಕ್ಷದ ಐಡೆಂಟಿಟಿ ಉಳಿಸಿಕೊಂಡಿದ್ದೇವೆ: ಎಚ್.ಡಿ.ಕುಮಾರಸ್ವಾಮಿ

Update: 2023-11-12 15:15 GMT

ಬೆಂಗಳೂರು, ನ.12: ‘ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಿ ನಾನು ಪ್ರತಿಪಕ್ಷ ನಾಯಕನಾಗುವುದು ವದಂತಿ ಹಬ್ಬಿದೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ನಗರದ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳಿಸುವ ಪ್ರಶ್ನೆ ಇಲ್ಲ, ನಮ್ಮ ಪಕ್ಷದ ಐಡೆಂಟಿಟಿ ಉಳಿಸಿಕೊಂಡಿದ್ದೇವೆ. ಈಗ ಎನ್‍ಡಿಎನಲ್ಲಿದ್ದೇವೆ ಹಾಗೆಯೇ ಮುಂದುವರೆಯುತ್ತೇವೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ತಂದಿರುವ ಪಂಚ ಗ್ಯಾರಂಟಿಗಳನ್ನು ತೆಲಂಗಾಣ ಸೇರಿದಂತೆ ಪಂಚರಾಜ್ಯಗಳ ಜನತೆ ನಂಬಬಾರದು. ಈ ಗ್ಯಾರಂಟಿಗಳಿಗೆ ಯಾವ ಕಾರಣಕ್ಕೂ ಮರುಳಾಗಬೇಡಿ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಅವರು ದೂರಿದರು.

ತೆಲಂಗಾಣದಲ್ಲಿ ನಮ್ಮ ಟೆಂಪರರಿ ಚೀಫ್ ಮಿನಿಸ್ಟರ್(ಸಿದ್ದರಾಮಯ್ಯ), ಡೂಪ್ಲಿಕೇಟ್ ಚೀಫ್ ಮಿನಿಸ್ಟರ್(ಡಿ.ಕೆ.ಶಿವಕುಮಾರ್) ಹಾಗೂ ಮಂತ್ರಿಗಳು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ. ಈ ಗ್ಯಾರಂಟಿಗಳ ಬೆನ್ನು ತಟ್ಟಿಕೊಳ್ಳಲು ಹೋಗಿ ಮುಖಭಂಗವನ್ನೂ ಅನುಭವಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ತೆಲಂಗಾಣಕ್ಕೆ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ಲಕ್ಷ ಉದ್ಯೋಗ ಭರ್ತಿ ಮಾಡುವ ಬಗ್ಗೆ ಮಾತನಾಡಿದ್ದಾರೆ. 2013ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ, ಆ ಐದು ವರ್ಷಗಳಲ್ಲಿ 2.45 ಲಕ್ಷ ಉದ್ಯೋಗ ನೇಮಕಾತಿಯನ್ನೇ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಎರಡೂವರೆ ಲಕ್ಷ ಖಾಲಿ ಸರಕಾರಿ ಹುದ್ದೆಗಳಿದ್ದರೂ ತೆಲಂಗಾಣಕ್ಕೆ ಹೋಗಿ ಭಾಷಣ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಮಹದೇವಪ್ಪನಿಗೂ ಕತ್ತಲು, ಕಾಕಾಪಾಟೀಲಗೂ ಕತ್ತಲು: ತೆಲಂಗಾಣದಲ್ಲಿ ಡಿ.ಕೆ.ಶಿವಕುಮಾರ್ ದಿನಕ್ಕೆ 5 ಗಂಟೆ ತ್ರೀಫೇಸ್ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅಲ್ಲಿ 24 ಗಂಟೆ ಈಗಾಗಲೇ ಕರೆಂಟ್ ಕೊಡುತ್ತಿದ್ದಾರೆ. ಅಲ್ಲಿ ಹೋಗಿ ನಿರಂತರ ವಿದ್ಯುತ್ ಕೊಡುವ ಭರವಸೆ ನೀಡುವ ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ನಮ್ಮ ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಫ್ರೀ ಎಂದರು ಯಾರಿಗೆ ಎಷ್ಟು ಕೊಡುತ್ತಿದ್ದಾರೆ. ಮಹದೇವಪ್ಪ ನಿನಗೂ ಫ್ರೀ, ಕಾಕಾ ಪಾಟೀಲ ನಿನಗೂ 200 ಯೂನಿಟ್ ಕರೆಂಟ್ ಫ್ರೀ ಅಂದಿದ್ದರು. ಆದರೆ ಈಗ ಮಹದೇವಪ್ಪನಿಗೂ ಕತ್ತಲು, ಕಾಕಾಪಾಟೀಲಗೂ ಕತ್ತಲು, ಇಬ್ಬರೂ ನನಗೂ ಕತ್ತಲೂ, ನಿನಗೂ ಕತ್ತಲೂ ಎಂದು ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News