ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರಿಗೊಂದು ಬಹಿರಂಗ ಪತ್ರ...ಮತ್ತು ಕೆಲವು ಗಂಭೀರ ಪ್ರಶ್ನೆಗಳು

Update: 2024-07-18 04:44 GMT
Editor : Musaveer | Byline : ಶಿವಸುಂದರ್

4) 1980ರಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ಆ ನಂತರ 1991 ರಲ್ಲಿ ನರಸಿಂಹರಾವ್ ನೇತೃತ್ವದಲ್ಲಿ ಜಾರಿಯಾದ ಉದಾರೀಕರಣ , ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳು ಸಂವಿಧಾನದ Welfare State ಪರಿಕಲ್ಪನೆಯ ಮೇಲೆ ಕಾಂಗ್ರೆಸ್ ನಡೆಸಿದ ನೇರಾನೇರಾ ದಾಳಿಯಲ್ಲವೇ?

ಕಾಂಗ್ರೆಸ್‌ನ ಬಂಡವಾಳಶಾಹಿ ಪರ ಮತ್ತು ಜಾತಿ ವ್ಯವಸ್ಥೆಯ ಪರ ಬ್ರಾಹ್ಮಣವಾದಿ ಧೋರಣೆ ಆ ಕಾಲದ ಕಥೆಯಲ್ಲ. ಅದು ಇಂದಿಗೂ ಮುಂದುವರಿಯುತ್ತಿರುವ ಕಾಂಗ್ರೆಸ್ ನೀತಿ. ಖಾಸಗೀಕರಣವನ್ನು ಮುಂದುವರಿಸುತ್ತಾ, ಹೊರಗುತ್ತಿಗೆ ಮಾಡುತ್ತಾ, ಸರಕಾರದ ಗಾತ್ರವನ್ನು ಕಡಿಮೆ ಮಾಡುತ್ತಾ ಜಾತಿ ಜನ ಗಣತಿ ಮಾಡುವುದರಿಂದ ಅದರ ಯಥಾಸ್ಥಿತಿ ವಾದಿ ನಿಲುವು ಬದಲಾಗುವುದಿಲ್ಲ ಅಲ್ಲವೇ?

ಮತ್ತೊಂದು ಕಡೆ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಂಪತ್ತಿನ ಹಂಚಿಕೆಯ ಬಗ್ಗೆ ಭಾಷಣ ಮಾಡುತ್ತಿರುವ ಹೊತ್ತಿನಲ್ಲೇ ಅತಿ ಶ್ರೀಮಂತರ ಮೇಲೆ inheritance tax ಹಾಕಬೇಕೆಂದ ಸ್ಯಾಮ್ ಪಿತ್ರೋಡ ಅವರಿಗೆ ರಾಹುಲ್ ಗಾಂಧಿಯಾದಿಯಾಗಿ ಯಾರೂ ಬೆಂಬಲಿಸಲಿಲ್ಲ. ಹೀಗಾಗಿ ಅವರು ತಮ್ಮ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ. ಚಿದಂಬರಂ ಅಂತೂ ಒಂದು ಸಂದರ್ಶನದಲ್ಲಿ ತಮ್ಮ ಪಕ್ಷವು ಸಂಪತ್ತಿನ ಹಂಚಿಕೆಯ ಯಾವ ಕಾರ್ಯಕ್ರಮವನ್ನು ಹೊಂದಿಲ್ಲವೆಂದೂ, ಇಂದಿರಾಗಾಂಧಿ ಕಾಲದ ಗರೀಬಿ ಹಠಾವೋ ಕಾಲ ಮುಗಿದೆಯೆಂದೂ, ಖಾಸಗಿ ಬಂಡವಾಳ ನೇತೃತ್ವದ ಅಭಿವೃದ್ಧಿಯೇ ತಮ್ಮ ಪರಿಕಲ್ಪನೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಬಜೆಟ್ ಹಾಗೂ ಅಭಿವೃದ್ಧಿ ಮಾದರಿ, ಬಿಜೆಪಿಯ ಬೊಮ್ಮಾಯಿ ಮತ್ತು ಕಾರ್ಪೊರೇಟ್ ನಾಯಕ ಮೋಹನ್ ದಾಸ್ ಪೈ ನೇತೃತ್ವದಲ್ಲಿ ಸಿದ್ಧಪಡಿಸಲಾದ ಜನವಿರೋಧಿ ಕಾರ್ಪೊರೇಟ್ ಅಭಿವೃದ್ಧಿ ಮಾದರಿಯ ನಕಲಾಗಿದೆ.

ಇನ್ನು ಗ್ಯಾರಂಟಿಗೆ ಹಣ ಹೊಂದಿಸಲಾಗದೆ ಜನಸಾಮಾನ್ಯರ ಸರಕು ಸೇವೆಗಳ ಬೆಲೆ ಏರಿಕೆ ಮಾಡಲಾಗುತ್ತಿದೆ, SC-TSP ಯಿಂದ 14 ಸಾವಿರ ಕೋಟಿ ರೂ. ಕಿತ್ತುಕೊಳ್ಳಲಾಗುತ್ತಿದೆ. ಮೋದಿ ಮಾದರಿಯಂತೆ Asset Monetisation, ಬಡಜನರನ್ನು ನಗರದಿಂದ ಹೊರಗಟ್ಟುವ ಉಳ್ಳವರಿಗಾಗಿ ಮಾತ್ರ ನಿರ್ಮಿಸುವ ಗುಜರಾತ್ ಮೋದಿ ಮಾದರಿ GIFT ಸಿಟಿ ಯೋಜನೆ, ಹಾಗೆ ನೋಡಿದರೆ ಈ ಜಿಎಸ್‌ಟಿ ಎಂಬ ಅತ್ಯಂತ ಪ್ರತಿಗಾಮಿ ತೆರಿಗೆ ಪದ್ಧತಿಯೇ ಕಾಂಗ್ರೆಸ್‌ನ ಕೂಸಲ್ಲವೇ?

ಹೀಗೆ ಸಂವಿಧಾನದಲ್ಲಿರುವ ಕಲ್ಯಾಣ ರಾಜ್ಯದ ಆರ್ಥಿಕತೆಯ ಪರಿಕಲ್ಪನೆಯ ಮೇಲೆ ದಾಳಿ ಮಾಡಿ ಫ್ಯಾಶಿಸ್ಟ್ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಆರ್ಥಿಕತೆಗೆ ಕುಮ್ಮಕ್ಕು ಕೊಟ್ಟಿದ್ದು, ಕೊಡುತ್ತಿರುವುದು ಕಾಂಗ್ರೆಸೇ ಅಲ್ಲವೇ? ಅಸಲು ಫ್ಯಾಶಿಸಂ ಸಮಾಜದಲ್ಲಿ ಮಾನ್ಯವಾಗುವುದೇ ಈ ಬಗೆಯ ಜನವಿರೋಧಿ ಆರ್ಥಿಕತೆಯು ತಂದೊಡ್ಡುವ ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳಿಂದ ಅಲ್ಲವೇ?

ಕಾಂಗ್ರೆಸ್‌ನ ಈ ಆರ್ಥಿಕ ಪ್ರಣಾಲಿಕೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲೂ ಬದಲಾಗಲಿಲ್ಲ. ನ್ಯಾಯ ಎಂಬ ಹೆಸರಿದ್ದರೂ ಒಂದೆಡೆ ವ್ಯವಸ್ಥಿತ ಅನ್ಯಾಯವನ್ನು ಮುಂದುವರಿಸುವ ದೊಡ್ಡ ಕಾರ್ಪೊರೇಟ್ ಖಾಸಗಿ ಬಂಡವಾಳವನ್ನೇ ಈಗಲೂ ಅಭಿವೃದ್ಧಿಯ ಹರಿಕಾರ ಎನ್ನುತ್ತಾ ಮತ್ತೊಂದೆಡೆ ಅಂಬಾನಿ-ಅದಾನಿಗಳ ಅತಿರೇಕಗಳ ಬಗ್ಗೆ ಮಾತ್ರ ಧ್ವನಿ ಎತ್ತುವುದರಿಂದ ಫ್ಯಾಶಿಸ್ಟ್ ಆರ್ಥಿಕತೆಗೆ ಹಿನ್ನೆಡೆಯಾಗುವುದೇ?

5) 1984ರಲ್ಲಿ ಸಂಸತ್ತಿನಲ್ಲಿ 414 ಸೀಟುಗಳ ದೈತ್ಯ ಬಲವಿದ್ದರೂ ಅಯೋಧ್ಯೆಯಲ್ಲಿ ರಾಮಮಂದಿರದ ಕೀಲಿ ತೆಗೆದು ಈ ದೇಶದಲ್ಲಿ ಬಿಜೆಪಿಯ ಕೋಮುವಾದಿ ರಕ್ತಸಿಕ್ತ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸೇ ಅಲ್ಲವೇ? ಆ ನಂತರದಲ್ಲಿ 1992ರಲ್ಲಿ ಬಾಬರಿ ಮಸೀದಿ ಕೆಡವಿದಾಗ ಸಂಘಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದೆ ಅವರು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸೇ ಅಲ್ಲವೇ?

ಈಗಲೂ ನಿಮ್ಮೆಲ್ಲರ ಸೇರ್ಪಡೆಯ ನಂತರವೂ, ರಾಹುಲ್ ಗಾಂಧಿ ನೇತೃತ್ವದಲ್ಲೂ ಕಾಂಗ್ರೆಸ್ ಪಕ್ಷ, ಅದೇ ಬಗೆಯ ಪರೋಕ್ಷ ಹಿಂದುತ್ವವಾದಿ ನೀತಿಗಳನ್ನೇ ಮುಂದುವರಿಸುತ್ತಿಲ್ಲವೇ?

ಇದು ಹಳೆಯ ಆಗಿಹೋದ ಕಥೆಯಲ್ಲ. ನಿಮ್ಮಂಥ ಸಜ್ಜನರು ಸೇರ್ಪಡೆಯಾದ ಮೇಲೂ ಮುಂದುವರಿಯುತ್ತಿರುವ ಕಥೆ.

ರಾಮಮಂದಿರದ ವಿಷಯಕ್ಕೆ ಬಂದರೆ ಕೋರ್ಟು ತೀರ್ಪೇ ಅನ್ಯಾಯದ್ದು. ಆ ಅನ್ಯಾಯದ ತೀರ್ಪಿನಲ್ಲೂ ಬಾಬರಿ ಮಸೀದಿ ಕೆಳಗೆ ಮಂದಿರವಿರಲಿಲ್ಲ ಎಂದು ಸ್ಪಷ್ಟವಾಗಿತ್ತು. ಹಾಗಿದ್ದಮೇಲೆ ಮಸೀದಿ ಕೆಡವಿ ಕಟ್ಟುತ್ತಿರುವ ಮಂದಿರ ಅಧಾರ್ಮಿಕ ಹಾಗೂ ಅನೈತಿಕ ಎಂದು ಹೇಳುವ ಬದ್ಧತೆ ಕಾಂಗ್ರೆಸ್‌ಗೂ ಇರಲಿಲ್ಲ. ಇತರ ಯಾವುದೇ ಪಕ್ಷಗಳಿಗೂ ಇರಲಿಲ್ಲ. ಬದಲಿಗೆ ಯುವ ಕಾಂಗ್ರೆಸ್‌ಮಂದಿರ ಕಟ್ಟಲು ರಾಜಸ್ಥಾನದಲ್ಲಿ ಹಣ ಸಂಗ್ರಹಣೆ ಮಾಡಿತು. ಕರ್ನಾಟಕದ ಡಿಕೆಶಿ , ಮ.ಪ್ರ.ದ ಕಮಲ್‌ನಾಥ್‌ರಂಥ ಕಾಂಗ್ರೆಸ್ ನಾಯಕರು ತಾವೇ ನಿಜವಾದ ಹಿಂದೂಗಳು ತಮ್ಮಿಂದಲೇ ರಾಮಮಂದಿರ ಕಟ್ಟಲು ಸಾಧ್ಯವಾಯಿತು ಎಂದು ಪ್ರತಿಪಾದಿಸುತ್ತಾ ಇದ್ದಾರೆ.

ಇದು ಇಂದಿನ ಕಥೆ. ನಿಮ್ಮಂತಹವರು ಕಾಂಗ್ರೆಸ್ ಸೇರಿದ ಮೇಲೂ ಮುಂದುವರಿಯುತ್ತಿರುವ ಕಥೆ. ಆದರೆ ತಾವಾಗಲೀ, ತಮ್ಮಂತಹ ಕಾಂಗ್ರೆಸ್ ನಾಯಕರಾಗಲೀ ಕಾಂಗ್ರೆಸ್‌ನ ಈ ಫ್ಯಾಶಿಸ್ಟ್ ಪರ ನೀತಿಗಳ ಬಗ್ಗೆ ಏಕೆ ಬಹಿರಂಗವಾಗಿ ಮಾತಾಡುತ್ತಿಲ್ಲ. ಒಳಗಿನ ವೇದಿಕೆಗಳಲ್ಲಿ ಮಾತಾಡಿರುತ್ತೀರಿ. ಆದರೆ ಅದು ಕಾಂಗ್ರೆಸ್‌ನ ಅಸಲಿ ಧೋರಣೆಯನ್ನೇನೂ ಬದಲಿಸುತ್ತಿಲ್ಲ. ಹೀಗಿರುವಾಗ ಒಳಗೆ ಮಾತಾಡಲು ಸಾಧ್ಯವಿರುವುದನ್ನೇ ಆಂತರಿಕ ಪ್ರಜಾತಂತ್ರ ಎಂದು ಸಂಭ್ರಮಿಸಬಹುದೇ?

6) ಕಾಂಗ್ರೆಸನ್ನು ಸೇರಿ ಒಳಗಿಂದ ಬದಲಾಯಿಸಬಹುದೆಂಬುದು ಭ್ರಾಂತಿ ಎಂದು ಅಂಬೇಡ್ಕರ್ ಅನುಭವವೇ ಹೇಳುವುದಿಲ್ಲವೇ?

ಕರ್ನಾಟಕದಲ್ಲಂತೂ ನಾಗರಿಕ ಸಮಾಜದ ಬೆಂಬಲ, ತಮ್ಮಂಥ ಆದರ್ಶವಾದಿ ನಾಯಕರ ಸೇರ್ಪಡೆ ಆದಮೇಲೂ ಕಾಂಗ್ರೆಸ್ ಸರಕಾರ ತೋರುತ್ತಿರುವ ಕಾರ್ಪೊರೇಟ್‌ವಾದಿ ಆರ್ಥಿಕತೆ, ಮೃದು ಹಿಂದುತ್ವ ಮತ್ತು ಆರೆಸ್ಸೆಸನ್ನು ಅನುನಯಿಸುವ ಗುಪ್ತ ಹಿಂದುತ್ವ ಧೋರಣೆ, ಭ್ರಷ್ಟಾಚಾರ, ಫ್ಯೂಡಲ್ ಮತ್ತು ಸರ್ವಾಧಿಕಾರಿ ಧೋರಣೆಗಳು ಕಿಂಚಿತ್ತೂ ಕಡಿಮೆಯಾಗಿಲ್ಲ.

ಕಾಂಗ್ರೆಸನ್ನು ಸೇರಿ ಒಳಗಿಂದ ಬದಲಾಯಿಸಬಹುದು ಎಂಬುದು ಸುಂದರವಾದ ಆತ್ಮವಂಚನೆಯಾಗಿಬಿಡಬಹುದು.

ಹಾಗೆ ನೋಡಿದರೆ ಕಾಂಗ್ರೆಸನ್ನು ಮತ್ತು ಹಿಂದೂ ಧರ್ಮವನ್ನು ಒಳಗಿನಿಂದ ಸುಧಾರಿಸಲು ಸಾಧ್ಯವಿಲ್ಲ ಎಂದು ತಮ್ಮ ಯಾತನಾಮಯ ಅನುಭವದಿಂದ ದೇಶಕ್ಕೆ ತಿಳಿಸಿಕೊಟ್ಟು ಅದರಿಂದ ಹೊರಬಂದವರು ಡಾ. ಅಂಬೇಡ್ಕರ್.

ಅದು ನೆಹರೂ-ಗಾಂಧಿ ಕಾಂಗ್ರೆಸ್. ಈಗಿನದ್ದು ಗುಣಮಟ್ಟದಲ್ಲಿ ಅದಕ್ಕಿಂತ ತಳಮಟ್ಟದಲ್ಲಿರುವ ಕಾಂಗ್ರೆಸ್.

ಹೀಗಾಗಿ ಒಳಗಿಂದ ಕಾಂಗ್ರೆಸ್ ಬದಲಾವಣೆ ಸಾಧ್ಯ ಎಂಬ ನಿಮ್ಮ ಅನಿಸಿಕೆ ಐತಿಹಾಸಿಕವಾಗಿಯೂ, ಇಂದಿನ ಎಲ್ಲಾ ತಾಜಾ ಉದಾಹರಣೆಗಳ ಹಿನ್ನೆಲೆಯಲ್ಲೋ ಒಪ್ಪಿಕೊಳ್ಳಲು ಆಗುವುದಿಲ್ಲ.

ಆದರೆ ನಿಮ್ಮ ವೈಯಕ್ತಿಕ ಆಯ್ಕೆ ನಿಮ್ಮದು. ಅದು ವಿಮೋಚನೆಯ ಸಾರ್ವತ್ರಿಕ ಮಾದರಿ ಎಂದಾಗ ಈ ಪತ್ರ ಬರೆಯಲೇ ಬೇಕೆನ್ನಿಸಿತು.

ಫ್ಯಾಶಿಸಂ ಅನ್ನು ಸೋಲಿಸಲು ಕಟ್ಟಬೇಕಿರುವುದು ಬಲಿಷ್ಠವಾದ ದಮನಿತ ಹಾಗೂ ದುಡಿಯುವ ಜನರ ಜನಚಳವಳಿಯನ್ನು. ಕಾಂಗ್ರೆಸ್‌ನ ಸಬಲೀಕರಣವಲ್ಲ. ಹೊರಗಡೆ ಸಮಾಜದಲ್ಲಿ ಬಲಿಷ್ಠ ದುಡಿಯುವ ಹಾಗೂ ದಮನಿತರ ಎಚ್ಚೆತ್ತ ಪ್ರಜ್ಞೆಯ ಜನಚಳವಳಿ ಇಲ್ಲದೆ ಪಕ್ಷದೊಳಗೆ ನಡೆಯುವ ಪ್ರಯತ್ನಗಳಿಗೂ ಬಲ ಬರುವುದಿಲ್ಲ.

7) ಇದರ ಅರ್ಥ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಗೆ ವೋಟು ಹಾಕಬಾರದು ಎಂದಲ್ಲ. ಕಾಂಗ್ರೆಸ್ ಚುನಾವಣೆಯ ರಂಗದಲ್ಲಿ ತಾತ್ಕಾಲಿಕವಾಗಿ ಕೇವಲ ತಾತ್ಕಾಲಿಕವಾಗಿ ಅದರ ಓಟದ ವೇಗವನ್ನು ತಗ್ಗಿಸಬಹುದು. ಅದೂ ಕೂಡ ಕಷ್ಟ ಎಂದು ಕಾಣುತ್ತಿದೆ.

ಅದನ್ನು ಮೀರಿ ಕಾಂಗ್ರೆಸ್ ಸಂವಿಧಾನವನ್ನು ಮರಳಿ ಪಡೆಯುವ ಸಾಧನ ಎಂದು ನೀವು ಹೇಳುತ್ತಿರುವುದು ಉತ್ಪ್ರೇಕ್ಷೆ ಮಾತ್ರ ಅಲ್ಲ ಸುಳ್ಳು ಕೂಡ ಆಗಿಬಿಡುತ್ತದೆ.

ಏಕೆಂದರೆ ಈ ದೇಶದ ವೆಲ್ಫೇರ್ ಸ್ಟೇಟ್ ರಚನೆ ಮತ್ತು ಸೆಕ್ಯುಲರ್ ಸಮಾಜದ ಆಶಯವನ್ನು ಒಳಗಿನಿಂದಲೇ ಟೊಳ್ಳು ಮಾಡುತ್ತಾ ಬಂದಿದ್ದು ಕಾಂಗ್ರೆಸೇ. ಹೀಗಾಗಿ ಆ ನೀತಿಗಳ ಬಗ್ಗೆ ಆತ್ಮಾವಲೋಕನ ಮತ್ತು Radical rupture ಸಾಧ್ಯವಾಗದೆ ಕಾಂಗ್ರೆಸ್ ಸಂವಿಧಾನ ಉಳಿಸಿಕೊಳ್ಳುವ ಸಾಧನವಾಗದು. ಸಂಸತ್ತಿನಲ್ಲಿ ಹೆಚ್ಚೆಂದರೆ ಸಂಘಿ ವೇಗವನ್ನು ತಾತ್ಕಾಲಿಕ ವಾಗಿ ತಡೆಯುವ ಕ್ರಮವಾಗಬಹುದು. ಅಷ್ಟೇ. ಅದೂ ಕೂಡ ಬರಲಿರುವ ದಿನಗಳಲ್ಲಿ ಇನ್ನೂ ಕಷ್ಟ. ಆದರೆ ಅಂಥಾ ಯಾವುದೇ Radical rupture ಕಾಂಗ್ರೆಸ್‌ನ ಐಡಿಯಾಲಜಿಯಲ್ಲಾಗಲೀ, ಸಂಘಟನೆಯಲ್ಲಾಗಲೀ, ನಾಯಕತ್ವದಲ್ಲಾಗಲೀ ಕಾಣುತ್ತಿಲ್ಲ.

ಹೀಗಿರುವಾಗ ಸಂವಿಧಾನವನ್ನು ಅರ್ಥಾತ್ ಸೆಕ್ಯುಲರ್ ಸಮಾಜವಾದ ವನ್ನು ಉಳಿಸುವ ಹೊಣೆಗಾರಿಕೆ ಮತ್ತು ಸಂಗ್ರಾಮ ಕಾಂಗ್ರೆಸ್‌ನಾಚೆಗೆ ನಡೆಯಬೇಕು. ಅಲ್ಲವೇ?

ತಾವು ಈ ಅಂಶಗಳನ್ನು ಪರಿಶೀಲಿಸುತ್ತೀರಾ ಎಂಬ ವಿಶ್ವಾಸದೊಂದಿಗೆ

ನಿಮ್ಮ

ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಶಿವಸುಂದರ್

contributor

Similar News