ಕಾಂಗ್ರೆಸ್ ನ ಸಂಘಾನುಸಂಧಾನ ಮತ್ತು ಸಂವಿಧಾನ

Update: 2023-06-28 07:13 GMT
Editor : Safwan | Byline : ಶಿವಸುಂದರ್

ಸಂವಿಧಾನದ ನಡಾವಳಿಗಳನ್ನು ಕಲಿಸಲು ಸಂವಿಧಾನದಿಂದ ಪ್ರೇರಣೆಯನ್ನು ಪಡೆಯದೆ ನಿರ್ದಿಷ್ಟ ಮತಧರ್ಮಗಳಿಂದ ನೈತಿಕತೆ ಪಡೆದುಕೊಳ್ಳುವ, ಅದರಲ್ಲೂ ಘೋಷಿತ ಹಿಂದುತ್ವವಾದಿಗಳಿಂದ ಪ್ರೇರಣೆ ಪಡೆದುಕೊಳ್ಳುವ ಯೋಜನೆ ಸಾಂವಿಧಾನಿಕ ನೈತಿಕತೆಗೆ ತದ್ವಿರುದ್ಧ ವಾದದ್ದು. ಈ ಬಾರಿ ಕಾಂಗ್ರೆಸ್ ಪಡೆದುಕೊಂಡಿರುವ ಜನಾದೇಶಕ್ಕೂ ತದ್ವಿರುದ್ಧವಾದದ್ದು.

ಆದರೆ ಇದು ಕೇವಲ ಸ್ಪೀಕರ್ ಖಾದರ್ ಸಮಸ್ಯೆ ಮಾತ್ರವಲ್ಲ. ಗ್ಯಾರಂಟಿಗಳ ಜೊತೆಗೆ ಸಂವಿಧಾನ ವಿರೋಧಿ ಹಿಂದುತ್ವದ ಸರಕಾರ ಕಳೆದ ಐದು ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ಸಂವಿಧಾನ ಬಾಹಿರ ಕ್ರಮಗಳನ್ನು ರದ್ದು ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ಮಾತ್ರ ಹಲವಾರು ರಾಜಿಗಳನ್ನು ಮಾಡಿಕೊಳ್ಳುತ್ತಿದೆ. ಈ ತರಬೇತಿ ಕಾರ್ಯಕ್ರಮದ ಹಿಂದುತ್ವವಾದಿ ಆಹ್ವಾನಿತರು ಅದಕ್ಕೆ ಒಂದು ಉದಾಹರಣೆಯಷ್ಟೆ.

ಸ್ಪೀಕರ್ ಯು.ಟಿ. ಖಾದರ್ ಅವರು ಹೊಸದಾಗಿ ಅಯ್ಕೆಯಾದ ೭೦ ಶಾಸಕರಿಗೆ ಶಾಸನ ಸಭೆಯ ನಡಾವಳಿ, ನೀತಿ ಮತ್ತು ನಿಯಮಗಳ ಬಗ್ಗೆ ತರಬೇತಿ ನೀಡುವ ಶ್ಲಾಘನೀಯ ಉದ್ದೇಶಕ್ಕಾಗಿ ಮೂರು ದಿನಗಳ ಶಿಬಿರವನ್ನು ಏರ್ಪಡಿಸಿದ್ದು ಸೂಕ್ತವಾಗಿಯೇ ಇದೆ. ಆದರೂ ಅವರ ನಿರ್ಧಾರ ಬಿಜೆಪಿಯ ಆಳ್ವಿಕೆಯಿಂದ ಬೇಸತ್ತು ಬದಲಾವಣೆಯ ಆಶಯ ಹೊತ್ತು ಕಾಂಗ್ರೆಸನ್ನು ಬೆಂಬಲಿಸಿದ ಬಹುಪಾಲು ಜನರಿಗೆ ಆತಂಕ ಹಾಗೂ ಬೇಸರ ತಂದಿರುವುದಕ್ಕೆ ಕಾರಣ ಅವರು ಆ ಅಧಿಕೃತ ಸರಕಾರಿ ತರಬೇತಿ ಕಾರ್ಯಕ್ರಮದಲ್ಲಿ ಶಾಸಕರಿಗೆ ನೈತಿಕ ಪ್ರೇರಣೆ ಎಂಬ ವಿಷಯವನ್ನು ಸೇರಿಸಿ, ಅಂಥಾ ಪ್ರೇರಣೆ ನೀಡಲು ಅತ್ಯಂತ ವಿವಾದಾಸ್ಪದವಾದ ಹಾಗೂ ಧರ್ಮದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತುತ್ತಿರುವ ಅಥವಾ ಅದಕ್ಕೆ ಪೋಷಣೆ ನೀಡುತ್ತಿರುವ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ, ಗುರುರಾಜ್ ಕರ್ಜಗಿ ಮತ್ತು ಬ್ರಹ್ಮಕುಮಾರಿ ಆಶ್ರಮದವರನ್ನು ಆಹ್ವಾನಿಸಿದ್ದು.

ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದ ಹಾಗೂ ಪ್ರತಿರೋಧಗಳನ್ನು ಹುಟ್ಟುಹಾಕಿದ ನಂತರ ಈಗ ರವಿಶಂಕರ್ ಗುರೂಜಿ ಹಾಗೂ ಕರ್ಜಗಿಯವರ ಹೆಸರು ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಕಾಣುತ್ತಿಲ್ಲ. ಆದರೆ ವೀರೇಂದ್ರ ಹೆಗ್ಗಡೆಯವರ ಸಂಸ್ಥೆಯಲ್ಲೇ ಇದು ನಡೆಯುತ್ತಿದ್ದು ಅದರಲ್ಲಿ ಅವರು ಅಧಿಕೃತವಾಗಿ ಭಾಗವಹಿಸಿ ಅಶೀರ್ವಚನ ನೀಡುತ್ತಿದ್ದಾರೆ.

ವಿವಾದ ಭುಗಿಲೆದ್ದ ನಂತರ ವಿವಾದ ಹುಟ್ಟುಹಾಕಿದವರ ವಿರುದ್ಧ ಅಸಹನೆಯಿಂದ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಅವರು ‘‘ಶಾಸಕರಲ್ಲಿ ಬೇರೆ ಬೇರೆ ಐಡಿಯಾಲಜಿಗೆ ಸೇರಿದವರಿದ್ದಾರೆ. ಹೀಗಿರುವಾಗ ನಾನು ಸ್ಪೀಕರ್ ಆಗಿ ಒಂದೇ ಐಡಿಯಾಲಜಿಗೆ ಸೇರಿದವರನ್ನು ಕರೆಯಲಾಗುತ್ತದೆಯೇ?’’ ಎಂದು ಸಿಡಿಮಿಡಿಗೊಂಡು ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಅಸಹನೆ ಖಾದರ್ ಅವರ ವೈಯಕ್ತಿಕ ಅಸಹನೆ ಮಾತ್ರವಲ್ಲದೆ ನೈಜ ಸೆಕ್ಯುಲರಿಸಂನ ಗ್ರಹಿಕೆ ಮತ್ತು ಅದರ ಅನುಷ್ಠಾನದ ಬಗ್ಗೆ ಕಾಂಗ್ರೆಸ್ನ ಬಹುಪಾಲು ಹಿರಿಯ ನಾಯಕರಿಗಿರುವ ಅಸಹನೆಯ ಸಂಕೇತವೂ ಆಗಿದೆ. ಏಕೆಂದರೆ ಖಾದರ್ ಅವರ ಈ ಗ್ರಹಿಕೆ ಮತ್ತು ನಡೆ ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ದೇಶದಲ್ಲಿ ಸಂಘಪರಿವಾರ ಎಬ್ಬಿಸಿರುವ ಧರ್ಮದ ಹೆಸರಿನ ಕೋಮುವಾದವನ್ನು ಗ್ರಹಿಸುವಲ್ಲಿ ಮತ್ತು ಅದನ್ನು ಎದುರಿಸುವಲ್ಲಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅನುಸರಿಸಿಕೊಂಡು ಬಂದಿರುವ ಅನುಸಂಧಾನ ನೀತಿಯ ಮುಂದುವರಿಕೆಯೂ ಆಗಿದೆ. ಹೀಗಾಗಿ ಖಾದರ್ ಅವರ ಈ ನಡೆಯನ್ನು ಅವರ ವೈಯಕ್ತಿಕ ನಿರ್ಧಾರವೆಂದು ಭಾವಿಸಿದರೆ ತಪ್ಪಾದೀತು.

ಇದು ಕಾಂಗ್ರೆಸ್ನ ಮೃದು ಹಿಂದುತ್ವ ನೀತಿಯ ಮುಂದುವರಿಕೆಯೇ ಆಗಿದೆ.

ಹೀಗಾಗಿ ತಿದ್ದಿಕೊಳ್ಳಬೇಕಿರುವುದು ಕೇವಲ ಖಾದರ್ ಅವರಲ್ಲ. ಬದಲಿಗೆ ಕಾಂಗ್ರೆಸ್ನ ಗ್ರಹಿಕೆಯ ಆಳದಲ್ಲಿರುವ ಈ ಮೃದು ಹಿಂದುತ್ವದ ನೀತಿಗಳು ಬದಲಾಗದೆ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸನ್ನು ಗೆಲ್ಲಿಸಿದ ಜನರು ಮತ್ತೊಮ್ಮೆ ಮೋಸಹೋಗುವಂತಾಗುತ್ತದೆ.

ಸಂವಿಧಾನವೇ ಎಲ್ಲಾ ಶಾಸಕರ ಐಡಿಯಾಲಜಿಯಾಗಬೇಕಲ್ಲವೇ?

ಮೊದಲನೆಯದಾಗಿ ಸ್ಪೀಕರ್ ಅವರು ಆಹ್ವಾನಿಸಿದ ವ್ಯಕ್ತಿಗಳು ಧಾರ್ಮಿಕ ವ್ಯಕ್ತಿಗಳಲ್ಲ. ಬದಲಿಗೆ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಪಾಶವೀ ರಾಜಕಾರಣ ಮಾಡುತ್ತಿರುವ ಸಂಘಪರಿವಾರದ ಮಹಾನ್ ಪೋಷಕರು. ಅವರ ಮೌಲ್ಯಗಳು ಮತ್ತು ಉಪದೇಶಗಳು ಸಂವಿಧಾನದ ಮೌಲ್ಯಗಳಿಗೆ ಬಾಹಿರವಾದವು. ಹೀಗಾಗಿ ಸಂವಿಧಾನವನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಹೊಂದಿರುವ ಶಾಸಕರ ತರಬೇತಿಗೆ ಮೌಲಿಕ ಪ್ರೇರಣೆಯನ್ನು ಈ ವ್ಯಕ್ತಿಗಳು ಹೇಗೆ ನೀಡಲು ಸಾಧ್ಯ? ಶಾಸಕರು ಬೇರೆಬೇರೆ ಐಡಿಯಾಲಜಿಗೆ ಸೇರಿದವರಾಗಿರಬಹುದು. ಆದರೆ ಅವರು ಒಮ್ಮೆ ಶಾಸಕರಾಗಿ ಸಂವಿಧಾನವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದ ಮೇಲೆ ಹೊಸ ಶಾಸಕರಿಗೆ ಕೊಡಬೇಕಿರುವ ಮೊದಲ ತರಬೇತಿ ಎಲ್ಲಾ ಶಾಸಕರ ಐಡಿಯಾಲಜಿ ಸಂವಿಧಾನವೇ ಆಗಿರಬೇಕೆಂಬುದಲ್ಲವೇ? ಹೀಗಾಗಿ ಸಂವಿಧಾನದ ಅನುಷ್ಠಾನದ ತರಬೇತಿಗೆ ಸಂವಿಧಾನವನ್ನು ಪ್ರತಿನಿತ್ಯ ಉಲ್ಲಂಘಿಸುವವರನ್ನು ಕರೆಯಬಾರದೆಂಬ ಔಚಿತ್ಯ ಪ್ರಜ್ಞೆ ಸ್ಪೀಕರ್ ಸಾಹೇಬರಿಗೆ ಇರಬೇಕಿತ್ತು.

ಶಾಸಕರಂತೆ ನಡೆದುಕೊಳ್ಳಲು ಯಾವ ಪ್ರೇರಣೆ ಬೇಕು?

ಅಷ್ಟು ಮಾತ್ರವಲ್ಲ. ಸ್ಪೀಕರ್ ಅವರ ಮತ್ತು ಅವರಲ್ಲಿರುವ ಕಾಂಗ್ರೆಸ್ ತಿಳವಳಿಕೆಯಲ್ಲಿರುವ ಲೋಪ ಕೇವಲ ಈ ಘೋಷಿತ ಹಿಂದುತ್ವವಾದಿಗಳನ್ನು ಕರೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಕಾರ್ಯಕ್ರಮ ಆಯೋಜನೆಲ್ಲೇ ಶಾಸಕರಿಗೆ ಪ್ರೇರಣೆ ನೀಡುವ ಒಂದು ವಿಭಾಗವಿದೆ. ಆದರೆ ಅದಕ್ಕೆ ಧಾರ್ಮಿಕ ಪ್ರೇರಣೆ ಎಂಬ ಅರ್ಥವನ್ನು ನೀಡಿಯೇ ಈ ವಿಭಾಗವನ್ನು ತರಬೇತಿಯಲ್ಲಿ ಸೇರಿಸಲಾಗಿದೆ.

ಹೀಗಾಗಿ ಸಮಸ್ಯೆ ಇದ್ದದ್ದು ಈ ಪ್ರೇರಣೆ ನೀಡಲು ಆಹ್ವಾನಿಸಿದ್ದ ವ್ಯಕ್ತಿಗಳದ್ದು ಮಾತ್ರವಲ್ಲ. ಇವರ ಬದಲಿಗೆ ಇನ್ನಿತರ ಯಾವುದೇ ‘ಧಾರ್ಮಿಕ’ ವ್ಯಕ್ತಿಗಳನ್ನು ಕರೆದಿದ್ದರೂ ಅದು ಒಂದು ಅಧಿಕೃತ ಸಾಂವಿಧಾನಿಕ ಕಾರ್ಯಕ್ರಮವಾಗಿ ಸಮ್ಮತವಾಗಬಾರದಿತ್ತು. ಆದರೆ ದುರದೃಷ್ಟವಶಾತ್ ಈ ಬಗ್ಗೆ ಸಮಾಜದಲ್ಲಿ ಎದ್ದಿರುವ ಬಹುಪಾಲು ಪ್ರತಿರೋಧಗಳು ಮತ್ತು ಈ ಕಾರಣದಿಂದ ಕಾಂಗ್ರೆಸ್ನೊಳಗೇ ಕಂಡುಬಂದಿರುವ ಆಕ್ಷೇಪಗಳು ಕೇವಲ ಆ ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಮಾತ್ರ ಸೀಮಿತವಾಗಿಬಿಟ್ಟಿದೆ.

ಅಸಲು ಆಕ್ಷೇಪ ಇರಬೇಕಿದ್ದು ‘‘ಸೆಕ್ಯುಲರ್-ಸಮಾಜವಾದಿ ಪ್ರಜಾತಂತ್ರಿಕ ಗಣರಾಜ್ಯದ ಸಂವಿಧಾನವನ್ನು ಅನುಷ್ಠಾನಕ್ಕೆ ತರುವ ಶಾಸಕರಿಗೆ ಪ್ರೇರಣೆ ನೀಡಬೇಕಿರುವುದು ನಮ್ಮ ಸಂವಿಧಾನ ಹಾಗೂ ನಮ್ಮ ಸ್ವಾತಂತ್ರ್ಯ ಹೋರಾಟದ ಆಶಯಗಳೇ ವಿನಾ ಮತಧರ್ಮಗಳೇ?’’ ಎಂಬ ನೆಲೆಯಲ್ಲಿ.

ಧಾರ್ಮಿಕ ನೈತಿಕತೆ, ಸಾಂವಿಧಾನಿಕ ನೈತಿಕತೆ ಮತ್ತು ಅಂಬೇಡ್ಕರ್

ಏಕೆಂದರೆ ಒಂದೊಂದು ಮತಧರ್ಮಗಳ ಆಶಯಗಳು ಒಂದೊಂದು ತೆರನಾಗಿವೆ. ಹೀಗಾಗಿಯೇ ನಮ್ಮ ಸಮಾಜದಲ್ಲಿ ಹತ್ತು ಹಲವು ಮತಧರ್ಮಗಳಿವೆ. ಭಾರತದ ಪ್ರಜೆಯಾಗಿ ಪ್ರತಿಯೊಬ್ಬರೂ ತಮ್ಮ ಖಾಸಗಿ ಮತ್ತು ವೈಯಕ್ತಿಕ ನೆಲೆಯಲ್ಲಿ ತಮ್ಮ ತಮ್ಮ ಮತಧರ್ಮಗಳನ್ನು ಅನುಸರಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವೇ ನೀಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೂ ಒಂದು ಪ್ರೇರಣೆಯ ಅಗತ್ಯವಿದ್ದು ಅದರಲ್ಲಿ ಹಲವರು ತಮ್ಮ ತಮ್ಮ ಧರ್ಮವು ಬೋಧಿಸುವ ನೈತಿಕತೆಯಿಂದಲೂ ಪ್ರೇರಣೆಯನ್ನು ಪಡೆದುಕೊಳ್ಳುತ್ತಾರೆ. ಅದು ಅವರವರ ಹಕ್ಕು ಮತ್ತು ಸ್ವಾತಂತ್ರ್ಯ.

ಧಾರ್ಮಿಕ ಮೂಲದಿಂದ ಪಡೆದುಕೊಳ್ಳುವ ನೈತಿಕತೆಯು ಆಯಾ ಧರ್ಮನಿಷ್ಠವಾಗಿರುತ್ತದೆ. ಅದು ತನ್ನ ಧರ್ಮವು ಬೋಧಿಸುವ ನೈತಿಕ ಮಾನದಂಡಗಳೇ ಪರಮ ಸತ್ಯ ಎಂದು ಕೂಡ ಭಾವಿಸುತ್ತದೆ. ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಅದನ್ನು ನಂಬುವುದಕ್ಕೆ ಮತ್ತು ಆಚರಿಸುವುದಕ್ಕೆ ನಮ್ಮ ಸಂವಿಧಾನದಲ್ಲಿ ಸ್ವಾತಂತ್ರ್ಯವಿದೆ.

ಆದರೆ ಹಲವು ಮತಧರ್ಮ, ಭಾಷೆ, ನಂಬಿಕೆಗಳುಳ್ಳ ಭಾರತವು ತನ್ನ ಸಾರ್ವಜನಿಕ, ಆಡಳಿತಾತ್ಮಕ ಮತ್ತು ರಾಜಕೀಯ ಬದುಕಿನಲ್ಲಿ ಆಚರಿಸಬೇಕಿರುವುದು ಸಾಂವಿಧಾನಿಕ ನೈತಿಕತೆಯನ್ನೇ ಹೊರತು ಧಾರ್ಮಿಕ ಮೂಲದ ನೈತಿಕತೆಯನ್ನಲ್ಲ.

ಸಾಂವಿಧಾನಿಕ ನೈತಿಕತೆಯು ನಮ್ಮ ಸಂವಿಧಾನದ ಮೌಲ್ಯಗಳಿಂದ ಪ್ರೇರಣೆ ಯನ್ನು ಪಡೆದುಕೊಳ್ಳುತ್ತದೆ. ಅರ್ಥಾತ್ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ತಾನು ವೈಯಕ್ತಿಕವಾಗಿ ನಂಬುವ ಧರ್ಮ ನಿಷ್ಠ ನೈತಿಕತೆ ಮತ್ತು ಸಂವಿಧಾನ ನಿಷ್ಠ ನೈತಿಕತೆಯ ನಡುವೆ ವೈರುಧ್ಯ ಏರ್ಪಟ್ಟರೆ ಆ ಜನಪ್ರತಿನಿಧಿ ಸಾಂವಿಧಾನಿಕ ನೈತಿಕತೆಯನ್ನೇ ಸಾರ್ವಜನಿಕ ಜೀವನದಲ್ಲಿ ಅನುಸರಿಸಬೇಕು.

ಆದ್ದರಿಂದಲೇ ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಒಳಗೊಂಡ ಭಾರತೀಯ ಪ್ರಭುತ್ವವು, ಯಾವುದೇ ಧರ್ಮಕ್ಕೇ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆದರೆ ‘‘ಭಾರತಕ್ಕೆ ಈ ಬಗೆಯ ಸಾಂವಿಧಾನಿಕ ನೈತಿಕತೆ ಅಭ್ಯಾಸವಿಲ್ಲ’’ ಎಂದು ಅಂಬೇಡ್ಕರ್ ವ್ಯಾಖ್ಯಾನಿಸುತ್ತಾರೆ. ಆದ್ದರಿಂದ ಅದನ್ನು ವಿಶೇಷ ಮುತುವರ್ಜಿ ಕೊಟ್ಟು ಸಾಮಾಜಿಕ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಅರಗಿಸಿಕೊಳ್ಳಬೇಕು ಎಂದು ತಮ್ಮ ೧೯೪೮ರ ನವೆಂಬರ್ ೨೫ರಂದು ದೇಶಕ್ಕೆ ಸಂವಿಧಾನವನ್ನು ಅರ್ಪಿಸಿ ಮಾಡಿದ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸು ತ್ತಾರೆ. ಹೀಗಾಗಿ ಎಲ್ಲಕ್ಕಿಂತ ಮೊದಲು ನಮ್ಮ ಜನಪ್ರತಿನಿಧಿಗಳು ತಮ್ಮ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಈ ಸಾಂವಿಧಾನಿಕ ನೈತಿಕತೆಗೆ ಬದ್ಧರಾಗಿರಬೇಕು.

ಸಾಂವಿಧಾನಿಕ ನೈತಿಕತೆ ಎಂದರೇನು?

ಮೊದಲಿಗೆ ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಗಳಿಗೆ ಬದ್ಧರಾಗಿರುವುದು ಮತ್ತು ಅದನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಪಾಲಿಸುವುದು. ಆದರೆ ಭಾರತೀಯ ಸಮಾಜಕ್ಕೆ ಈ ಬಗೆಯ ನೈತಿಕತೆಯನ್ನು ಪಾಲಿಸಿ ಅಭ್ಯಾಸವೇ ಇಲ್ಲ.

ಹಾಗೆ ನೋಡಿದರೆ ಇತರ ದೇಶಗಳ ಸಂವಿಧಾನಗಳು ಸಾಮಾನ್ಯವಾಗಿ ನಾಗರಿಕರ ಮೂಲಭೂತ ಹಕ್ಕುಗಳ ಮತ್ತು ಮೌಲ್ಯಗಳ ಸನ್ನದಾಗಿ ಮಾತ್ರ ಇರುತ್ತದೆ. ಆದರೆ ಭಾರತದ ಸಂವಿಧಾನದಲ್ಲಿ ಅವನ್ನು ಮಾತ್ರವಲ್ಲದೆ ಆಡಳಿತ ವ್ಯವಸ್ಥೆಯನ್ನು ಕೂಡ ಸಂವಿಧಾನದ ಭಾಗವಾಗಿಸಿದೆ. ಇದರ ಬಗ್ಗೆ ಸಂವಿಧಾನ ಸಭೆಯಲ್ಲಿ ಆಕ್ಷೇಪ ಎತ್ತಿದಾಗ ಅಂಬೇಡ್ಕರ್ ಅವರು:

‘‘ಅದಕ್ಕೆ ಕಾರಣ ನಮ್ಮ ಸಮಾಜಕ್ಕೆ ಸಾರ್ವಜನಿಕ ಜೀವನದಲ್ಲಿ ಶ್ರೇಷ್ಠ-ಕನಿಷ್ಠ, ಮಾನದಂಡಗಳಿಲ್ಲದೆ ಸಮಾನತೆ, ಸರ್ವ ಸಮಾನ ಕಾನೂನಿನ ಆಡಳಿತ ಇತ್ಯಾದಿಗಳುಳ್ಳ ಸಾಂವಿಧಾನಿಕ ನೈತಿಕತೆಯನ್ನು ಪಾಲಿಸಿ ಅಭ್ಯಾಸವೇ ಇಲ್ಲದಿರುವುದರಿಂದ ಇಡೀ ಆಡಳಿತ ವ್ಯವಸ್ಥೆಯನ್ನು ಸಂವಿಧಾನದ ಭಾಗವಾಗಿ ಮಾಡಬೇಕಾಯಿತು. ಏಕೆಂದರೆ ಆಡಳಿತದ ಸ್ವರೂಪವನ್ನು ಬದಲಾಯಿಸುವ ಮೂಲಕವೂ ಸಂವಿಧಾನ ವಿರೋಧಿ ಆಶಯಗಳ ಆಡಳಿತ ಜಾರಿಗೆ ತರುವ ಸಾಧ್ಯತೆ ಭಾರತದಲ್ಲಿದೆ’’ ಎಂದು ವಿವರಿಸಿದ್ದರು.

ಹೀಗೆ ಸಾಂವಿಧಾನಿಕ ನೈತಿಕತೆ ಅರ್ಥಾತ್ ಸಾರ್ವಜನಿಕ ನೈತಿಕತೆಯಲ್ಲಿ ಎಲ್ಲರೂ ಸಮಾನರು ಎಂಬ ಮೌಲ್ಯ ಆಡಳಿತದ ಮತ್ತು ರಾಜಕೀಯ ಜೀವನದ ಪ್ರತಿಯೊಂದು ಅಂಗದಲ್ಲೂ ಪ್ರತಿಕ್ಷಣದಲ್ಲೂ ಅಭಿವ್ಯಕ್ತಗೊಳ್ಳುವಂತಿರಬೇಕು.

ಆದ್ದರಿಂದ ಜನರಿಂದ ಆಯ್ಕೆಯಾದ ರಾಜಕೀಯ ಪ್ರತಿನಿಧಿಗಳು ಸಂವಿಧಾನವನ್ನು ಹೇಗೆ ಜಾರಿ ಮಾಡಬೇಕು ಎಂಬ ತರಬೇತಿ ಕೊಡುವಾಗ ತರಬೇತಿ ನೀಡಬೇಕಿದ್ದದ್ದು ಸಾಂವಿಧಾನಿಕ ನೈತಿಕತೆಯ ಬಗ್ಗೆ. ಪ್ರೇರಣೆ ನೀಡಬೇಕಿದ್ದದ್ದು ಸಾಂವಿಧಾನಿಕ ಮೌಲ್ಯಗಳ ಪ್ರೇರಣೆಗಳು. ಹೀಗಾಗಿ ಶಾಸಕರ ತರಬೇತಿ ವಿಷಯದಲ್ಲಿ ಪರೋಕ್ಷವಾಗಿಯೂ ಧಾರ್ಮಿಕ ಪ್ರೇರಣೆ ಅಂಶವನ್ನು ಸೇರಿಸಲೇ ಬಾರದಾಗಿತ್ತು.

ಹಿಂದುತ್ವವೇ ಸಂವಿಧಾನಕ್ಕೂ ಪ್ರೇರಣೆ ಎನ್ನುವ ಕಾಲದಲ್ಲಿ...

ಅದರಲ್ಲೂ ಮೋದಿ ಅಧಿಕಾರಕ್ಕೆ ಬಂದಮೇಲೆ ಈ ದೇಶದ ಸೆಕ್ಯುಲರಿಸಂ ಎಂದರೆ ಹಿಂದುತ್ವವೇ ಎಂದಾಗಿ ಬಿಟ್ಟಿದೆ. ಏಕೆಂದರೆ ಹಿಂದುತ್ವ ವಾದಿಗಳ ಪ್ರಕಾರ ಹಿಂದುತ್ವ ಒಂದು ಮತಧರ್ಮವಲ್ಲ. ಬದಲಿಗೆ ಜೀವನ ದರ್ಶನ. ಭಾರತೀಯ ಜೀವನ ದರ್ಶನ. ಆದ್ದರಿಂದ ಪ್ರಭುತ್ವವು ಹಿಂದುತ್ವವನ್ನು ಪಾಲಿಸಿದರೆ ಅದು ಸಂವಿಧಾನ ವಿರೋಧಿಯಲ್ಲ ಎಂಬ ವಾದವನ್ನು ಬಹಳ ಪ್ರಬಲವಾಗಿ ಹಿಂದುತ್ವ ಫ್ಯಾಶಿಸ್ಟರು ಬಳಸುತ್ತಿದ್ದಾರೆ. ಹಿಂದುತ್ವದ ಜೀವನ ದರ್ಶನವೇ ಸಂವಿಧಾನಕ್ಕೂ ಪ್ರೇರಣೆಯೆಂದು ಭಾವಿಸಬೇಕು. ಹೀಗಾಗಿ ಸಂವಿಧಾನಕ್ಕೂ ಉನ್ನತವಾದದ್ದು ಹಿಂದುತ್ವ. ಅದರಿಂದ ಪ್ರೇರಣೆ ಪಡೆಯುವುದು ಅಸಾಂವಿಧಾನಿಕವಲ್ಲ ಅಥವಾ ಅದರಂತೆ ಪ್ರಭುತ್ವವನ್ನು ನಡೆಸುವುದು ಕೂಡ ಸಂವಿಧಾನ ಬಾಹಿರವಾಗುವುದಿಲ್ಲ ಎಂಬ ವಿಚಿತ್ರ ಆದರೂ ಆತಂಕಕಾರಿ ವಾದಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಲಾಗುತ್ತಿದೆ. ಕೆಲವು ಹಿಂದುತ್ವವಾದಿ ನ್ಯಾಯಾಧೀಶರು ಅದನ್ನು ಸಂಪೂರ್ಣವಾಗಿ ಪುರಸ್ಕರಿಸಿ ಸಾಂವಿಧಾನಿಕ ಕೋರ್ಟಿನಲ್ಲಿ ತೀರ್ಪುಗಳನ್ನು ಕೊಡುತ್ತಿರುವ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ. ಅಂದರೆ ಸುಪ್ರೀಂ ಕೋರ್ಟಿನ ತೀರ್ಮಾನಗಳ ಮೂಲಕವೇ ಹಿಂದುತ್ವವು ಸಂವಿಧಾನಕ್ಕಿಂತ ಉನ್ನತವಾದದ್ದು ಮತ್ತು ಪ್ರೇರಣಾ ಶಕ್ತಿ ಎಂದು ಘೋಷಿಸಿ ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಹುನ್ನಾರಗಳು ನಡೆಯುತ್ತಿವೆ.

ಇಂತಹ ಹೊತ್ತಿನಲ್ಲಿ ಸಂವಿಧಾನದ ನಡಾವಳಿಗಳನ್ನು ಕಲಿಸಲು ಸಂವಿಧಾನದಿಂದ ಪ್ರೇರಣೆಯನ್ನು ಪಡೆಯದೆ ನಿರ್ದಿಷ್ಟ ಮತಧರ್ಮಗಳಿಂದ ನೈತಿಕತೆ ಪಡೆದುಕೊಳ್ಳುವ, ಅದರಲ್ಲೂ ಘೋಷಿತ ಹಿಂದುತ್ವವಾದಿಗಳಿಂದ ಪ್ರೇರಣೆ ಪಡೆದುಕೊಳ್ಳುವ ಯೋಜನೆ ಸಾಂವಿಧಾನಿಕ ನೈತಿಕತೆಗೆ ತದ್ವಿರುದ್ಧ ವಾದದ್ದು. ಈ ಬಾರಿ ಕಾಂಗ್ರೆಸ್ ಪಡೆದುಕೊಂಡಿರುವ ಜನಾದೇಶಕ್ಕೂ ತದ್ವಿರುದ್ಧವಾದದ್ದು.

ಆದರೆ ಇದು ಕೇವಲ ಸ್ಪೀಕರ್ ಖಾದರ್ ಸಮಸ್ಯೆ ಮಾತ್ರವಲ್ಲ. ಗ್ಯಾರಂಟಿಗಳ ಜೊತೆಗೆ ಸಂವಿಧಾನ ವಿರೋಧಿ ಹಿಂದುತ್ವದ ಸರಕಾರ ಕಳೆದ ಐದು ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ಸಂವಿಧಾನ ಬಾಹಿರ ಕ್ರಮಗಳನ್ನು ರದ್ದು ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ಮಾತ್ರ ಹಲವಾರು ರಾಜಿಗಳನ್ನು ಮಾಡಿಕೊಳ್ಳುತ್ತಿದೆ. ಈ ತರಬೇತಿ ಕಾರ್ಯಕ್ರಮದ ಹಿಂದುತ್ವವಾದಿ ಆಹ್ವಾನಿತರು ಅದಕ್ಕೆ ಒಂದು ಉದಾಹರಣೆಯಷ್ಟೆ.

ಮುಂದುವರಿದಿರುವ ಮೃದು ಹಿಂದುತ್ವ

ಪಠ್ಯಪುಸ್ತಕಗಳಲ್ಲಿ ಹಿಂದುತ್ವವಾದಿಗಳು ಸೇರಿಸಿದ್ದ ಅತ್ಯಂತ ಮನುವಾದಿ ಮತ್ತು ಮುಸ್ಲಿಮ್ ವಿರೋಧಿ ತಿದ್ದುಪಡಿಗಳನ್ನು ತೆಗೆದುಹಾಕುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿತ್ತು. ಹಾಗೆಯೇ ಅತ್ಯಂತ ಮನುವಾದಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸದೆ ಇರುವುದು ಇನ್ನೊಂದು. ಇವೆರಡು ರಾಜ್ಯದಲ್ಲಿ ಮತ್ತೆ ಸಾಂವಿಧಾನಿಕ ನೈತಿಕತೆಯನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ಕೊಟ್ಟ ಆಶ್ವಾಸನೆಗಳು.

ಆದರೆ ಪಠ್ಯ ಪುಸ್ತಕದಲ್ಲಿ ಮೇಲ್ನೋಟಕ್ಕೆ ಕೆಲವು ತಿದ್ದುಪಡಿಗಳು ಆಗಿವೆಯಾದರೂ, ಶಾಲೆಗಳಿಗೆ ಸರಕಾರವು ಕಳಿಸಿಕೊಟ್ಟಿರುವ ಸುತ್ತೋಲೆಯಲ್ಲಿ ಯಾವುದೇ ಪ್ರಮುಖ ಹಿಂದುತ್ವವಾದಿ ತಿದ್ದುಪಡಿಗಳನ್ನು ಹಿಂದೆಗೆದುಕೊಂಡೇ ಇಲ್ಲ. ಟಿಪ್ಪುಸುಲ್ತಾನ್ ಪಠ್ಯವನ್ನಂತೂ ಮುಟ್ಟಿಯೇ ಇಲ್ಲ.

ಹಾಗೆಯೇ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣನೀತಿ ರದ್ದುಗೊಳಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ‘‘ಈಗ ಅದರಲ್ಲೂ ಒಳ್ಳೆಯ ಅಂಶಗಳಿವೆ. ರದ್ದು ಮಾಡುವ ಬದಲಿಗೆ ಅದರಲ್ಲಿನ ಒಳ್ಳೆಯ ಅಂಶಗಳನ್ನು ಉಳಿಸಿಕೊಂಡು ಹೈಬ್ರಿಡ್ ಶಿಕ್ಷಣ ನೀತಿ ಜಾರಿಗೆ ತರುವುದಾಗಿ’’ ಘೋಷಿಸುತ್ತದೆ. ಬಿಜೆಪಿ ಸರಕಾರದ ಕಾಲದಲ್ಲಿ ಕೇಂದ್ರದ ದುಷ್ಟ ಶಿಕ್ಷಣ ನೀತಿಯನ್ನು ಮೊತ್ತ ಮೊದಲಿಗೆ ಕರ್ನಾಟಕದಲ್ಲೇ ಜಾರಿಗೆ ತರುವ ಹಿಂದುತ್ವ ಬದ್ಧತೆ ತೋರಿದ ಉನ್ನತ ಅಧಿಕಾರಿಗಳನ್ನೇ ಕಾಂಗ್ರೆಸ್ ಸರಕಾರವು ಮುಂದುವರಿಸಿದೆ.

ಇನ್ನೊಂದು ಕಡೆ ಗೃಹಮಂತ್ರಿ ಪರಮೇಶ್ವರ್ ಅವರು ಅಧಿಕಾರಕ್ಕೆ ಬಂದ ನಂತರ ಪರಮ ಹಿಂದುತ್ವವಾದಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ ಮತ್ತು ಬಜರಂಗ ದಳವನ್ನು ನಿಷೇಧಿಸುವ ಪ್ರಸ್ತಾಪವೇ ಇಲ್ಲವೆಂದು ಮತ್ತೊಮ್ಮೆ ಘೋಷಿಸಿದ್ದಾರೆ.

ಮನುವಾದವನ್ನು ಪ್ರತಿಪಾದಿಸಿದ ಉಪಮುಖ್ಯಮಂತ್ರಿ!

ಮತ್ತೊಂದು ಕಡೆ ಕಾಂಗ್ರೆಸ್ನ ರಾಜ್ಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳೂ ಆದ ಡಿ.ಕೆ. ಶಿವಕುಮಾರ್ ಅವರು ಮೊನ್ನೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ತನಗೆ ಮಾರ್ಗದರ್ಶನ ಮಾಡುತ್ತಿರುವುದು ಸಂವಿಧಾನವೆಂದು ಹೇಳದೆ ನಾಡಿನ ಪ್ರಖ್ಯಾತ ಜ್ಯೋತಿಷಿಗಳು ಎಂದು ಬಹಿರಂಗವಾಗಿ ಘೋಷಿಸಿದರು. ಅಷ್ಟು ಮಾತ್ರವಲ್ಲ. ಭಾರತದ ಭವಿಷ್ಯಕ್ಕಾಗಿ ಭಾರತೀಯ ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ ಎಂದು ಪ್ರತಿಪಾದಿಸಿದರು.

ಮುಂದುವರಿದು ಸಂಸ್ಕೃತಿಯ ಭಾಗವಾಗಿ ಒಂದು ಸಂಸ್ಕೃತ ಶ್ಲೋಕವನ್ನು ಉದ್ಧರಿಸಿದರು ಹಾಗೂ ಅದರ ತಾತ್ಪರ್ಯವನ್ನು ವಿವರಿಸಿದರು. ಅದೇನೆಂದರೆ:

‘‘ಹೆಣ್ಣು, ರಾಜ್ಯ ಮತ್ತು ವಿದ್ಯೆಗಳು ಯಾವಾಗಲೂ ರಾಜನ ಅಧೀನದಲ್ಲಿರ ಬೇಕು. ಹೆಣ್ಣು ತಾಯಿಯೇ ಆಗಿದ್ದರೂ, ಹೆಂಡತಿಯೇ ಆಗಿದ್ದರೂ, ಮಗಳೇ ಆಗಿದ್ದರೂ ಪುರುಷ ಅವರ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು’’

ಎಂದು ಪ್ರತಿಪಾದಿಸಿದರು!

ಹಿಂದುತ್ವವಾದಿಗಳದ್ದೂ ಹೆಣ್ಣಿನ ಬಗ್ಗೆ ಇದೇ ತಿಳುವಳಿಕೆಯಲ್ಲವೇ?

ಇಂತಹ ಗ್ರಹಿಕೆಯಿಂದಾಗಿಯೇ ಅಲ್ಲವೇ ಮನುವಾದದ ಪ್ರತಿಪಾದನೆ ಕಾಂಗ್ರೆಸ್ನ ನಾಯಕರಿಗೆ ತಪ್ಪುಎನಿಸದೆ ಹೋಗುವುದು?

ಮನುವಾದಿಗಳನ್ನು ತಮ್ಮ ವೇದಿಕೆಗಳಿಗೂ ಕರೆಯುವುದು ತಪ್ಪು ಎನಿಸದಿರುವುದು ಇದೇ ಕಾರಣಕ್ಕೆ ಅಲ್ಲವೇ?

ಕಾಂಗ್ರೆಸ್ನ ಸಂಘಾನುಸಂಧಾನ ನಿಲ್ಲಬೇಕು

ಹೀಗಾಗಿ ಸ್ಪೀಕರ್ ಖಾದರ್ ಅವರು ಮಾಡಿದ ತಪ್ಪುಅವರ ವೈಯಕ್ತಿಕ ನೆಲೆಯದ್ದಲ್ಲ.

- ಕಾಂಗ್ರೆಸ್ ಅನುಸರಿಸುತ್ತಾ ಬಂದಿರುವ ಮೃದು ಹಿಂದುತ್ವವಾದಿ ರಾಜಕೀಯದಲ್ಲಿ ಖಾದರ್ ಅವರ ತಪ್ಪುಗಳ ಬೇರುಗಳಿವೆ.

- ಹಿಂದುತ್ವದ ವಿರುದ್ಧ ಸಂಘರ್ಷ ಮಾಡದೆ ಅದನ್ನು ಓಲೈಸುತ್ತಾ ಹಿಂದೂ ವೋಟುಗಳನ್ನು ಪಡೆದುಕೊಳ್ಳಬೇಕೆಂದೂ ಎಂಥಾ ರಾಜಿಗೂ ಸಿದ್ಧವಾಗುವ ಕಾಂಗ್ರೆಸಿನ ರಾಜಿ ರಾಜಕೀಯದಲ್ಲಿ ಖಾದರ್ ಅವರ ತೀರ್ಮಾನದ ನೆಲೆಗಳಿವೆ.

- ಹಿಂದೂ ವೋಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಮುಚ್ಚಿದ್ದ ರಾಮಮಂದಿರದ ಬೀಗವನ್ನು ತೆಗೆದು ಹಿಂದುತ್ವದ ಕೈಗಿತ್ತ ರಾಜೀವ್ ಗಾಂಧಿ ಯವರ ನೇತೃತ್ವದ ಮೃದು ಹಿಂದುತ್ವ ಹಾಗೂ ಅವಕಾಶವಾದಿ ರಾಜಕೀಯದಲ್ಲಿ ಅದರ ಬೇರುಗಳಿವೆ.

-೧೯೯೨ರಲ್ಲಿ ಬಾಬರಿ ಮಸೀದಿ ಕೆಡವಿದ ಬಿಜೆಪಿ ಮತ್ತು ಆರೆಸ್ಸೆಸ್ನ ಸಂವಿಧಾನ ದ್ರೋಹಿ ಮತ್ತು ಜನವಿರೋಧಿ ಹಿಂದುತ್ವವನ್ನು ಹಿಂದೂಗಳ ನಡುವೆ ಬಯಲುಗೊಳಿಸದೆ ಹಿಂದೂ ವೋಟುಗಳನ್ನು ಕಳೆದುಕೊಳ್ಳುವ ಭಯದಲ್ಲಿ ಆರೆಸ್ಸೆಸ್ನ ಮೇಲೆ ನಿಷೇಧವು ತಾನಾಗಿಯೇ ರದ್ದಾಗುವಂತೆ ಮಾಡಿದ ಪಿ.ವಿ. ನರಸಿಂಹರಾವ್ ಅವರ ನೇತೃತ್ವದ ಮೃದು ಹಿಂದುತ್ವದ ರಾಜಕೀಯದಲ್ಲಿ ಅದರ ಬೇರುಗಳಿವೆ...

- ಸುಪ್ರೀಂ ಕೋರ್ಟ್ ತೀರ್ಮಾನದ ನಂತರ ರಾಮಮಂದಿರಕ್ಕೆ ಶಿಲಾನ್ಯಾಸವಾದ ನಂತರ, ಇತರ ಎಲ್ಲಾ ವಿರೋಧ ಪಕ್ಷಗಳಂತೆ ಕಾಂಗ್ರೆಸ್ ಕೂಡ ಬಾಬರಿ ಮಸೀದಿ ಕೆಡವಿದ್ದು ತಪ್ಪುಎಂದು ಹೇಳುವುದನ್ನೇ ಕೈಬಿಟ್ಟು ೨೦೨೦ ರಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಹಣಸಂಗ್ರಹ ಮಾಡಿದ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..

-ಭಾರತ್ ಜೋಡೊ ಅಭಿಯಾನದಲ್ಲಿ ಶ್ರೀರಂಗಪಟ್ಟಣದಲ್ಲಿ ಮೂರು ದಿನ ತಂಗಿದ್ದರೂ ಹಿಂದುತ್ವದ ಬಾಯಿಗೆ ಬಲಿಯಾಗುತ್ತೇವೆನ್ನುವ ಅಳುಕಿನಲ್ಲಿ ಟಿಪ್ಪು ಮಸೀದಿಗೆ ಭೇಟಿ ನೀಡದ ರಾಹುಲ್ ಗಾಂಧಿಯವರ ನಡೆಯಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..

-ಇದೀಗ ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಸರಕಾರವೇ ಬಿಜೆಪಿಯೂ ನಾಚುವಂತೆ ಸರಕಾರಿ ಹಣದಲ್ಲಿ ನೂರಡಿ ಎತ್ತರದ ರಾಮ, ಹನುಮ, ಕೌಸಲ್ಯಾರ ಪ್ರತಿಮೆ ಮತ್ತು ದೇವಸ್ಥಾನಗಳನ್ನು ಕಟ್ಟುತ್ತಾ ಹಿಂದುತ್ವ ರಾಜಕಾರಣದ ನಕಲು ಮಾಡುತ್ತಿರುವ ಮೃದು ಹಿಂದುತ್ವದ ರಾಜಕೀಯದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..

-ಮಧ್ಯಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದೂ ವೋಟುಗಳನ್ನು ಆಕರ್ಷಿಸುವ ಸಲುವಾಗಿ ಬಾಬಾಗಳನ್ನು ಓಲೈಸುವುದರಲ್ಲಿ ಬಿಜೆಪಿಗೆ ಸಡ್ಡು ಹೊಡೆಯುತ್ತಿರುವ ಕಾಂಗ್ರೆಸ್ನ ಮೃದು ಹಿಂದುತ್ವದಲ್ಲಿ ಖಾದರ್ ತಪ್ಪುಗಳ ಬೇರುಗಳಿವೆ..

ಈ ತಪ್ಪುಗಳ ಮೂಲದಲ್ಲಿರುವುದು ಶತ್ರುವನ್ನು ಶತ್ರುವೆಂದು ಭಾವಿಸದ ಅವಕಾಶವಾದಿ ರಾಜಕೀಯದಲ್ಲಿ.

ಹೀಗಾಗಿ ನೈಜ ಪ್ರಜಾತಂತ್ರವಾದಿಗಳಿಗೆ ಇವು ಮತ್ತು ಖಾದರ್ ಆಹ್ವಾನಿಸಿದಂತಹವರು ಸಂವಿಧಾನದ ಶತ್ರುಗಳು ಎಂದು ಅನಿಸಿದಷ್ಟು ಕಾಂಗ್ರೆಸ್ಗೆ ಅನಿಸುವುದೇ ಇಲ್ಲ.

ಏಕೆಂದರೆ ಕಾಂಗ್ರೆಸ್ ಬಿಜೆಪಿಗಿಂತ ಭಿನ್ನವಾದರೂ ಅವುಗಳ ನಡುವಿನ ಅಂತರವೇನೂ ಜಾಸ್ತಿ ಇಲ್ಲ.

ಆದ್ದರಿಂದ ಕಾಂಗ್ರೆಸ್ನ ಈ ಮೃದು ಹಿಂದುತ್ವವಾದಿ ತಪ್ಪುಗಳು ಕೇವಲ ಕಾಂಗ್ರೆಸನ್ನು ದುರ್ಬಲಗೊಳಿಸಿಲ್ಲ. ಇಡೀ ದೇಶದ ಅಡಿಪಾಯವನ್ನೇ ಅಸ್ಥಿರಗೊಳಿಸಿವೆ.

ಹೀಗಾಗಿ ಖಾದರ್ ತಪ್ಪುಗಳನ್ನು ಮಾತ್ರ ಟೀಕಿಸುತ್ತಾ ಅದರ ಬೇರಿನಲ್ಲಿರುವ ಕಾಂಗ್ರೆಸ್ನ ಮೃದು ಹಿಂದುತ್ವದ ಅಡಿಪಾಯವನ್ನು ಮರೆತರೆ ಕಾಂಗ್ರೆಸ್ಗೂ ಒಳ್ಳೆಯದಾಗುವುದಿಲ್ಲ. ದೇಶಕ್ಕೂ ಒಳ್ಳೆಯದಾಗುವುದಿಲ್ಲ.

ಹೀಗಾಗಿ ಕಾಂಗ್ರೆಸ್ ಸರಕಾರದ ಸಂಘಾನುಸಂಧಾನ ನಿಲ್ಲಲು ಬಿಜೆಪಿ-ಫ್ಯಾಶಿಸಂ ವಿರೋಧಿಗಳು ತಾವೇ ವಕಾಲತ್ತು ವಹಿಸಿ ಅಧಿಕಾರಕ್ಕೆ ತಂದ ಕಾಂಗ್ರೆಸ್ ಸರಕಾರದ ವಿರುದ್ಧವೂ ಸಂಘರ್ಷಕ್ಕೆ ಸಿದ್ಧವಾಗಬೇಕು.

ಇಲ್ಲವಾದಲ್ಲಿ ಈ ದ್ರೋಹದಲ್ಲಿ ಪ್ರಜಾತಂತ್ರವಾದಿ ವಿರೋಧಿಗಳ ಪಾಲೇ ಹೆಚ್ಚಾಗಿಬಿಟ್ಟೀತು!

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಶಿವಸುಂದರ್

contributor

Similar News