ಬೀಜದಂಥ ಮರ

Update: 2023-08-27 05:56 GMT

ಒಬ್ಬ ವಯಸ್ಕ ವ್ಯಕ್ತಿ ವರ್ತಿಸುವ ರೀತಿಯನ್ನು, ಆಲೋಚಿಸುವ ಬಗೆಯನ್ನು ಮತ್ತು ಮಾಡುವ ಕ್ರಿಯೆ ಅಥವಾ ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಆ ವ್ಯಕ್ತಿಯ ಬಾಲ್ಯದ ಅನುಭವಗಳನ್ನು ಊಹಿಸಲು ಅಥವಾ ಗ್ರಹಿಸಲು ಸಾಧ್ಯ. ಮಗುವಿನ ಮನಸ್ಸೆಂಬ ಹಸಿಗೋಡಿಯಲ್ಲಿ ಹಿರಿಯರು ಎಂತೆಂತದ್ದೋ ಹರಳುಗಳನ್ನು ನೆಟ್ಟಿರುವರು. ಹಸನಾದ ಸುಪ್ತಚೇತನವೆಂಬ ಒಳಮನಸ್ಸಿನಲ್ಲಿ ಎಂತೆಂತದ್ದೋ ಬೀಜಗಳನ್ನು ಸುಮ್ಮನೆ ಎಸೆದಿರುವರು. ಎಸೆದಿರುವವರಿಗೂ ತಿಳಿಯದೆ, ಬಿತ್ತಿಸಿಕೊಂಡವರಿಗೂ ತಿಳಿಯದೆ ಅದು ಬೆಳೆದಿರುತ್ತದೆ ಮತ್ತು ಫಸಲನ್ನು ಕೊಟ್ಟಿರುತ್ತದೆ.

ಒಂದು ವ್ಯಕ್ತಿ, ಕುಟುಂಬವು ಮತ್ತು ಸಮಾಜವು ಸುಸ್ಥಿತಿಯಲ್ಲಿರಬೇಕೆಂದರೆ ಮಗುವಿನ ಮಗುತನವನ್ನು ಅತಿ ಎಚ್ಚರಿಕೆಯಿಂದ ಕಾಪಾಡಬೇಕು. ಒಂದು ಮಗು ಹುಟ್ಟಿದಾಗಿನಿಂದ ಹದಿಹರೆಯಕ್ಕೆ ಬರುವವರೆಗಿನ ಅವಧಿಗೆ ಬಾಲ್ಯ ಎನ್ನುವುದು. ಅಂದರೆ ಸುಮಾರು ಹನ್ನೆರಡು ವರ್ಷಗಳವರೆಗೆ. ಅದು ಬಹಳ ಮುಖ್ಯವಾದದ್ದು. ವ್ಯಕ್ತಿಯ ಜೀವನದಲ್ಲಿ ಉಳಿದೆಲ್ಲಾ ಹಂತಗಳಿಂದ ಬಾಲ್ಯ ಅತ್ಯಂತ ಕಡಿಮೆ ಸಮಯದ್ದು. ಆದರೆ ಇಡೀ ಬದುಕಿನ ಎಲ್ಲಾ ವಯಸ್ಸಿನ ಹಂತಗಳ ಅಡಿಪಾಯ ಆಗುವಂತಹದ್ದು. ದೈಹಿಕ ಬೆಳವಣಿಗೆಯ ವಿಷಯದಲ್ಲಿ ಅತ್ಯಂತ ವೇಗವಾಗಿ ಬದಲಾವಣೆ ಆಗುವುದು. ಮಾನಸಿಕ ಪ್ರಭಾವದ ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಆಳವಾದ ಪ್ರಭಾವದ್ದು. ಈ ಅವಧಿಯ ಅನುಭವಗಳು, ಪ್ರಭಾವಗಳು, ನೋವು, ಒತ್ತಡವೇ ಮುಂತಾದವು ಜೀವನಪೂರ್ತಿ ಇರುವ ಸಾಧ್ಯತೆಗಳಿರುತ್ತವೆ. ಈ ಅವಧಿಯು ಒಬ್ಬ ವ್ಯಕ್ತಿಯ ಇಡೀ ಬದುಕಿನ ಭೂಮಿಕೆಯನ್ನು ಸಿದ್ಧ ಪಡಿಸುವಂತಹದ್ದು. ಬಾಲ್ಯ ನೋಡುನೋಡುತ್ತಿದ್ದಂತೆ ಬಹು ಬೇಗ ಕಳೆದೇ ಹೋಗುತ್ತದೆ ಮತ್ತು ಅದರ ಪರಿಣಾಮ ಹಾಗೂ ಪ್ರಭಾವಗಳನ್ನು ವಯಸ್ಕರಾದ ಮೇಲೆ ಹೇಗಿರುತ್ತದೆ ಎಂದು ಹದಿಹರೆಯದಲ್ಲೇ ಲಕ್ಷಣಗಳನ್ನು ತೋರಿಸುತ್ತಾ ಹೋಗುತ್ತಾರೆ.

ಮಗುವಿಗೆ ಸ್ವಾಭಾವಿಕ ಗ್ರಹಿಕೆ, ಸ್ವಭಾವ, ಸಾಮರ್ಥ್ಯ ಎಲ್ಲವೂ ಇರುತ್ತದೆ. ಅದರ ಜೊತೆಗೆ ಗಮನಿಸುವ, ಗ್ರಹಿಸುವ, ಕಲಿಯುವ, ಪ್ರಯೋಗಿಸುವ ಆಸಕ್ತಿ ಮತ್ತು ಶಕ್ತಿ ಇರುತ್ತದೆ. ವಯಸ್ಕರಿಗಿಂತ ಭಿನ್ನವಾಗಿರುವ ಆಲೋಚನೆ, ಕಲ್ಪನೆ, ಭಾವನೆ ಮತ್ತು ಉದ್ದೇಶಗಳನ್ನು ಹೊಂದಿರುತ್ತವೆ. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನೆಗಳ ವಿಷಯದಲ್ಲಿ ಸೂಕ್ಷ್ಮವಾಗಿಯೂ ಇರುತ್ತದೆ. ಅದರ ಈ ಎಲ್ಲಾ ಗುಣ, ಸ್ವಭಾವ, ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ತನ್ನದು ಅದು ತಿಳಿಯದೇ ಹೊಂದಿರುತ್ತದೆ. ತನಗೆ ಒಂದು ಬಗೆಯ ಅರಿವು ಇದೆ ಎಂಬುದನ್ನು ಕೂಡಾ ಅರಿವಿಲ್ಲದೆಯೇ ಹೊಂದಿರುತ್ತದೆ. ಒಂದು ಮಗುವಿನ ಇವೆಲ್ಲದರ ಒಟ್ಟು ಮೊತ್ತವನ್ನು ಮಗುತನ ಎನ್ನುತ್ತೇವೆ.

ಆ ಮಗುತನವೋ ಬಹಳ ಸೂಕ್ಷ್ಮವಾಗಿದ್ದು ಸುಲಭವಾಗಿ ಹಾನಿಗೊಳಗಾಗುವುದು. ಒಳ್ಳೆಯ, ಕೆಟ್ಟ, ಬೇಕು, ಬೇಡ, ಅಗತ್ಯ, ಅನಗತ್ಯಗಳ ವಿವೇಚನೆ ಹೊಂದಿರುವುದಿಲ್ಲ. ಸಾಮಾಜೀಕರಣ ತಿಳಿಯದ ಪಶುತನಕ್ಕೆ ತುಂಬಾ ಸಮೀಪವಿರುತ್ತದೆ. ಮನಸ್ಸು ಮೆದುವಾಗಿಯೂ ಮತ್ತು ಫಲವತ್ತಾಗಿಯೂ ಇರುತ್ತದೆ. ಭಾವನೆಗಳು ತನ್ನ ಹಿತ ಅಹಿತಗಳನ್ನು ಮಾತ್ರ ಅವಲಂಬಿಸಿರುತ್ತವೆ. ಆತ್ಮ ಕೇಂದ್ರಿತವಾಗಿದ್ದು, ಸಹಜವಾಗಿ ಸ್ವಾರ್ಥಿಯಾಗಿರುತ್ತದೆ. ಹೊಣೆಗಾರಿಕೆ, ನೈತಿಕತೆ, ಕರ್ತವ್ಯ, ಹಕ್ಕು, ದೂರದೃಷ್ಟಿ ಬಗ್ಗೆ ಅರಿವಿರುವುದಿಲ್ಲ. ತನ್ನ ಉಳಿವಿನ ಬಗ್ಗೆ ಸಹಜವಾದ ಭಯವನ್ನು ಹೊಂದಿರುತ್ತದೆ. ಆ ಹೊತ್ತಿನ ಖುಷಿ ಸಿಗುವುದರ ಬಗ್ಗೆ ಸಹಜವಾದ ಆಸೆಗೆ ಮಾರುಹೋಗುತ್ತದೆ. ಸ್ವನಿಯಂತ್ರಣ ಮತ್ತು ಸಂಯಮ ಇರುವುದಿಲ್ಲ.

ಮಗುತನವು ಪ್ರಾಣಿಗಳಂತೆ ಅತ್ಯಂತ ನೈಸರ್ಗಿಕವೂ ಮತ್ತು ಸ್ಪರ್ಧೆಯಿಂದ ಮಾತ್ರವೇ ತನ್ನ ಉಳಿವು ಎಂಬ ಗುಣವು ಸ್ವಾಭಾವಿಕವಾಗಿರುತ್ತದೆ. ಪೈಪೋಟಿ ಎಂಬುದು ಅಂಡಾಣು ಮತ್ತು ವೀರ್ಯಾಣುಗಳ ಮಿಲನದ ಸಮಯದಿಂದಲೇ ಪ್ರಾರಂಭವಾಗಿದ್ದು ಅದು ಮುಂದುವರಿದಿರುತ್ತದೆ. ಹಾಗಾಗಿ ನಾನು, ನನ್ನದು, ನನಗೆ ಎಂಬುದು ಬಹಳ ಗಾಢವಾಗಿರುತ್ತದೆ. ಆದ್ದರಿಂದ ಕುಟುಂಬ ಮತ್ತು ಸಮಾಜ ಮಗುವನ್ನು ಸಮಾಜದಲ್ಲಿ ಮತ್ತು ನೈಸರ್ಗಿಕ ಪರಿಸರದಲ್ಲಿ ಬಾಳಲು ಸಿದ್ಧಗೊಳಿಸುವುದು. ಈ ಪ್ರಕ್ರಿಯೆಯಲ್ಲಿ ಹಿರಿಯರು ಸೂಕ್ತವಾಗಿ ವರ್ತಿಸಬೇಕು.

ಮಗುವಿನ ದೇಹ, ಮನಸ್ಸು ಮತ್ತು ಭಾವನೆಗಳೆಲ್ಲವೂ ಸೂಕ್ಷ್ಮವೂ, ದುರ್ಬಲವೂ ಮತ್ತು ಪರಾವಲಂಬಿಯೂ ಆಗಿರುವುದರಿಂದ ಸುಲಭವಾಗಿ ಹಿರಿಯರ ಅಧೀನದಲ್ಲಿರುತ್ತದೆ. ಹಿರಿಯರು ಮಗುವನ್ನು ಸಿದ್ಧಗೊಳಿಸುವ ವಿಷಯದಲ್ಲಿ ಸೂಕ್ಷ್ಮತೆ ಇಲ್ಲದೇ ವರ್ತಿಸಿದರೆ, ಮುಂದಿನ ಪರಿಣಾಮಗಳ ಬಗ್ಗೆ ಅರಿವು ಇಲ್ಲದೇ ನಡೆದುಕೊಂಡರೆ, ಆ ಮಗುವು ಬೆಳೆಬೆಳೆಯುತ್ತಾ ವಯಸ್ಕನಾದಾಗ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ತನ್ನ ಜೊತೆಯಲ್ಲಿರುವವರಿಗೆ ತೊಡಕಾಗಿ ಪರಿಣಮಿಸಿ, ತನಗೂ ಹಾನಿ ಮಾಡಿಕೊಳ್ಳುವ ಬಹಳಷ್ಟು ಸಾಧ್ಯತೆಗಳಿರುತ್ತವೆ. ಹಾಗಾಗಿ ಮಗುವಿನ ಆರಂಭಿಕ ಹತ್ತು ವರ್ಷಗಳಲ್ಲಿ ಬಹಳಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.

ಈ ಸಮಯಕ್ಕೆ ತಕ್ಕುದಲ್ಲದ ತಮ್ಮ ಅನುಭವದ ರೂಢಿ, ಅಜ್ಞಾನ, ತಮ್ಮದೇ ಮಾನಸಿಕ ಸಮಸ್ಯೆಗಳು, ಒತ್ತಡ, ಭ್ರಾಮಕ ಮನಸ್ಥಿತಿಗಳಿಂದಾಗಿ ಶಿಶುಮನದ ಸೂಕ್ಷ್ಮತೆಯನ್ನು ಅರಿಯದೆ, ತಾವು ಮಗುವನ್ನು ಸಾಕುತ್ತಿದ್ದೇವೆ ಎಂದೇ ತಪ್ಪುಗಳನ್ನು ಮಾಡುತ್ತಿರುತ್ತದೆೆ. ಫಲವಾಗಿ ಮಗುವು ವಯಸ್ಕವಾಗುವ ಹೊತ್ತಿಗೆ ಸಾಕಷ್ಟು ಸಮಸ್ಯೆಗಳ ವ್ಯಕ್ತಿಯಾಗಿ ರೂಪುಗೊಂಡಿರುತ್ತಾನೆ.

ಮಗು ಎಂದು ಎದುರು ಕಾಣುವ ದೇಹವನ್ನು ಕಾಪಾಡುವುದಕ್ಕಿಂತ ಮಗುತನ ಎಂಬ ಅದರ ಸೂಕ್ಷ್ಮವಾದ ಸ್ವಭಾವವನ್ನು ಜತನ ಮಾಡುವ ಅಗತ್ಯವಿದೆ.

ಕ್ರೌರ್ಯ, ದೌರ್ಜನ್ಯ, ತಿರಸ್ಕಾರ, ಕಿರುಕುಳ, ದಬ್ಬಾಳಿಕೆಗಳಿಂದ ಮಗುವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಕುಟುಂಬಗಳು, ಸಮುದಾಯಗಳು, ಸರಕಾರಗಳು, ಸಂಘ ಸಂಸ್ಥೆಗಳೆಲ್ಲವೂ ಈ ಹೊಣೆಯನ್ನು ಹೊರಬೇಕಿದೆ. ಹೀಗೆ ಮಾಡುವುದೇ ಮಕ್ಕಳ ಹಕ್ಕಿನ ರಕ್ಷಣೆಯನ್ನು ಮಾಡುವುದಾಗಿದೆ. ಮಕ್ಕಳ ಮಗುತನದ ಅನುಭವವನ್ನು ರಕ್ಷಿಸಬೇಕಿದೆ.

ಮಗುವಿನ ಆರೋಗ್ಯ, ಉಳಿವು, ಕ್ಷೇಮ ಮತ್ತು ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ತೊಡಕನ್ನುಂಟು ಮಾಡುವುದು ಮತ್ತು ಇವನ್ನು ನಿರ್ಲಕ್ಷಿಸುವುದನ್ನು ಕೂಡಾ ದೌರ್ಜನ್ಯ ಎನ್ನಲಾಗುತ್ತದೆ. ಯಾರೂ ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಕೂಡದು.

ಮಗುವು ತನ್ನ ದೇಹ ಹಾಗೂ ಮನಸ್ಸು ವಿಕಾಸವಾಗಲು ಮತ್ತು ತನ್ನ ಬದುಕಿಗೆ ಅಗತ್ಯವಿರುವ ಶಿಕ್ಷಣವನ್ನು ಪಡೆಯಲು ಅಡ್ಡಿಪಡಿಸುವಂತೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು, ಮದುವೆ ಮಾಡುವುದೂ ಕೂಡಾ ಮಗುತನದ ಮೇಲೆ ದಾಳಿಯೇ. ಇಂಥವೆಲ್ಲವೂ ಕೂಡಾ ಮಗುವಿನ ಉಳಿವು, ಅಭಿವೃದ್ಧಿ, ಘನತೆ ಮತ್ತು ಆರೋಗ್ಯದ ಮೇಲೆ ತೀವ್ರವಾದ ನಕಾರಾತ್ಮಕವಾದ ಪರಿಣಾಮಗಳನ್ನು ಬೀರುವುದು.

ಮಗುವಿನ ಶಾರೀರಿಕ ಬೆಳವಣಿಗೆ ಮತ್ತು ಆರೋಗ್ಯ, ಭಾವನೆಗಳು, ಶಿಕ್ಷಣ; ಈ ವಿಷಯಗಳಲ್ಲಿ ನಿರ್ಲಕ್ಷ್ಯ ಮಾಡುವುದು ಕೂಡಾ ಶೋಷಣೆಯೇ ಆಗುತ್ತದೆ.

ಮಗುವಿನ ಮಗುತನವನ್ನು ಉಳಿಸುವುದರಲ್ಲಿ ಮನುಕುಲದ ವರ್ತಮಾನ ಮತ್ತು ಭವಿಷ್ಯವೇ ನಿರ್ಧಾರವಾಗುತ್ತದೆ.

ಮಗುವೇ ನಮ್ಮ ಕುಟುಂಬದ, ಸಮಾಜದ, ಸರಕಾರದ ಮತ್ತು ರಾಷ್ಟ್ರದ ಕೇಂದ್ರವಾಗಬೇಕು. ಶಿಶುಕೇಂದ್ರಿತವಾಗಿ ನಾವು ಆಲೋಚಿಸದಿದ್ದರೆ, ಯೋಜನೆಗಳನ್ನು ಮಾಡದಿದ್ದರೆ ನಮಗೆ ದೂರದೃಷ್ಟಿ ಇಲ್ಲ, ಈಗಿನ ಮತ್ತು ಮುಂದಿನ ಪೀಳಿಗೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದೇ ಅರ್ಥ. ಇನ್ನೇನು ಹೊರಗೆ ಪೊಲೀಸ್, ಕಾನೂನು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಂಡರೂ ಅವೆಲ್ಲಾ ಮೇಲ್ಮೈ ನಿರ್ವಹಣೆಗೆ ಮಾತ್ರ. ಹೆದರಿಕೆಯಿಂದ ಪರಿವರ್ತನೆ ಸಾಧ್ಯವೇ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು