ಅತಿಮನ

Update: 2023-10-22 09:08 GMT

ಬಹಳಷ್ಟು ಜನ ಖಿನ್ನತೆ (ಡಿಪ್ರೆಶನ್), ಆತಂಕ (ಆಂಕ್ಸೈಟಿ) ಅಂತನ್ನುವ ವಿಷಯಗಳನ್ನೆಲ್ಲಾ ತೀವ್ರವಾದ ಮನೋರೋಗ ಅಥವಾ ಮನೋವೇದನೆಗಳೆಂಬಂತೆ ಬಲು ಗಂಭೀರವಾಗಿ ದಿಟ್ಟಿಸುವುದುಂಟು. ಗಂಭೀರವೇನೋ ಹೌದು. ಆದರೆ ಅದನ್ನೊಂದು ಕರಾಳ ನೆರಳಲ್ಲಿ ಪ್ರೇತವನ್ನಿರಿಸುವಂತೆ ನೋಡುವ ಅಗತ್ಯವಿಲ್ಲ.

ಖಿನ್ನತೆ ಮತ್ತು ಆತಂಕಗಳು ಮನಸ್ಸು ಎಂಬೋ ಆಕಾಶ ಇರುವವರಿಗೆಲ್ಲಾ ಸರ್ವೇ ಸಾಮಾನ್ಯವಾದ ಕಾರ್ಮೋಡಗಳು. ಕೆಲವೊಮ್ಮೆ ದಟ್ಟವಾಗಿರುತ್ತವೆ. ಕೆಲವೊಮ್ಮೆ ತೆಳುವಾಗಿರುತ್ತವೆ. ಕಾರ್ಮೋಡಗಳು ಆಕಾಶದ ಸ್ವರೂಪವನ್ನೇ ಬದಲಾಯಿಸದು. ಅವೇ ತಮ್ಮ ಸಾಂದ್ರತೆಗನುಗುಣವಾಗಿ ಸಮಯವನ್ನು ಅನುಸರಿಸಿ ಕರಗಿ ಹೋಗುತ್ತವೆ, ಹಾಗೇ ಇಲ್ಲವಾಗುತ್ತವೆ. ಖಿನ್ನತೆ ಮತ್ತು ಆತಂಕಗಳೂ ಈ ಕಾರ್ಮೋಡಗಳಂತೆಯೇ ಕರಗುತ್ತವೆ, ಅಡಗುತ್ತವೆ.

ಯಾವುದೋ ರೈಲಿಗೋ ಅಥವಾ ಬಸ್ಸಿಗೋ ಎಂದು ಹೋಗುವಾಗ ತಾನು ಸರಿಯಾದ ಸಮಯಕ್ಕೆ ತಲುಪುತ್ತೇನೋ ಇಲ್ಲವೋ, ನಾನು ಹೋಗುವಷ್ಟರಲ್ಲಿ ರೈಲು ಅಥವಾ ಬಸ್ಸು ತಪ್ಪಿಹೋಗುವುದೋ ಏನೋ, ತುಂಬಾ ಜನಸಂದಣಿ ಇದ್ದರೆ ಕುಳಿತುಕೊಳ್ಳಲು ಸೀಟು ಇರಲಿ, ಹತ್ತಲು ಆಗುವುದೋ ಇಲ್ಲವೋ; ಇವೆಲ್ಲವೂ ಆತಂಕಗಳೇ.

ಬಸ್ ನಿಲ್ದಾಣಕ್ಕೆ ಹೋದ ಮೇಲೆ ಒಂದೈದು ನಿಮಿಷಕ್ಕೆ ಮುಂಚೆ ಬಸ್ ಹೊರಟು ಹೋಯಿತು ಎಂದಾಗ ನಿರಾಸೆ ಆಗುತ್ತದೆ, ಅಯ್ಯೋ ಎಂಬ ಉದ್ಗಾರ ಬರುತ್ತದೆ. ಛೇ, ಎಂಥಾ ಕೆಲಸ ಆಯ್ತು. ಒಂದೈದು ನಿಮಿಷ ಮುಂಚೆ ಬಂದಿದ್ದರೆ; ಅಂತ ಒಂದು ಕಡೆ ಬೇಸರದಿಂದ ಕುಳಿತುಕೊಳ್ಳುವುದೂ ಅಥವಾ ಕುಳಿತುಕೊಳ್ಳಲೂ ಜಾಗವಿಲ್ಲದೆ ನಿಂತುಕೊಳ್ಳುವುದೂ ಕೂಡಾ ಖಿನ್ನತೆಯೇ. ಆದರೆ ಅದು ದೀರ್ಘ ಕಾಲದ್ದಲ್ಲ. ಇನ್ನು ಮುಂದಿನ ಬಸ್ ಬರಲು ಎರಡು ಗಂಟೆಗಳಷ್ಟು ತಡವಾಗುತ್ತದೆ ಎಂದರೆ, ಅಷ್ಟರಲ್ಲಿ ಇಲ್ಲೇ ಯಾರದ್ದೋ ಮನೆಗೆ ಹೋಗಿ ಬರೋಣ ಅಥವಾ ಅಲ್ಲೊಂದು ಕೆಲಸ ಮುಗಿಸಿಕೊಂಡು ಬಿಡೋಣ, ಅಥವಾ ಒಂದು ಪುಸ್ತಕ ಓದಿಬಿಡೋಣ; ಎಂದೇನೋ ಆಲೋಚಿಸಿ ಆ ದಿಕ್ಕಿನಲ್ಲಿ ಕೆಲಸ ಮಾಡುವುದಿದೆಯಲ್ಲಾ, ಅದು ಮನಸ್ಸು ತನ್ನ ಮೇಲೆರಗುವ ಖಿನ್ನತೆ ಅಥವಾ ಆತಂಕಗಳನ್ನು ಹಿಮ್ಮೆಟ್ಟಿಸಲು ಮಾಡುವಂತಹ ರಕ್ಷಣಾ ತಂತ್ರಗಳೇ ಆಗಿರುತ್ತವೆ.

ಆತಂಕ ಭಯಕಾರಿ, ಖಿನ್ನತೆ ಒತ್ತಡಕಾರಿ. ಮನಸ್ಸು ತನಗುಂಟಾಗುವ ಭಯ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಲು ಎಷ್ಟೋ ತಂತ್ರಗಳನ್ನು ಸುಪ್ತಾವಸ್ಥೆಯಲ್ಲಿಯೇ ಹೊಂದಿರುತ್ತದೆ. ಭಯ ಮತ್ತು ಒತ್ತಡವನ್ನು ಉಂಟುಮಾಡುವಂತಹ ವಾಸ್ತವವನ್ನು ಎದುರಿಸಲು ಮನಸ್ಸು ಒಂದಷ್ಟು ಕಾಪುತೋಡುಗಳನ್ನು ಹೊಂದಿರುತ್ತದೆ.

ಬೇಸರವಾಗುತ್ತಿದೆ ಎಂದು ಸಂಗೀತ ಕೇಳುವುದು, ಚಲನಚಿತ್ರ ನೋಡುವುದು, ಪ್ರವಾಸ ಹೋಗುವುದು, ಪುಸ್ತಕ ಓದುವುದು, ತೋಟದಲ್ಲಿ ಕೆಲಸ ಮಾಡುವುದು, ಯಾರನ್ನೋ ಭೇಟಿಯಾಗಿ ಕಷ್ಟ ಸುಖ ಮಾತಾಡಿಕೊಳ್ಳುವುದು; ಇವೆಲ್ಲವೂ ಮನಸ್ಸು ತನ್ನ ಮೇಲೆ ಎರಗುವ ಭಯ ಮತ್ತು ಒತ್ತಡಗಳನ್ನು ನಿವಾರಿಸಿಕೊಳ್ಳಲು ಅಥವಾ ಎದುರಿಸಲು ಆಯ್ದುಕೊಂಡ ತಂತ್ರಗಳೇ ಆಗಿವೆ.

ನನಗೆ ಬೇಜಾರಾದಾಗ ವಾಕ್ ಹೋಗುತ್ತೇನೆ, ಯಾರೊಂದಿಗೋ ಫೋನ್ ಮಾಡಿ ಮಾತಾಡುತ್ತೇನೆ, ಮಲಗಿಕೊಂಡು ನಿದ್ರೆ ಹೋಗಿಬಿಡುತ್ತೇನೆ, ಎರಡು ಪೆಗ್ ಹಾಕುತ್ತೇನೆ, ಸಿಗರೇಟು ಸೇದಿಬಿಡುತ್ತೇನೆ, ಧ್ಯಾನ ಮಾಡ್ತೇನೆ, ಪ್ರಾರ್ಥನೆ ಮಾಡ್ತೇನೆ ಎಂದೆಲ್ಲಾ ಹೇಳುವವರು ಖಿನ್ನತೆ ಮತ್ತು ಆತಂಕಗಳಿಂದ ಮುಕ್ತವಾಗಲು ವಿವಿಧ ತಂತ್ರಗಳನ್ನು ಉಪಯೋಗಿಸು ತ್ತಿದ್ದಾರೆಂದೇ ಅರ್ಥ. ಖಿನ್ನತೆ ಮತ್ತು ಆತಂಕಗಳು ಬರುವಷ್ಟೇ ಸಹಜವಾಗಿ ವಿವಿಧ ರಕ್ಷಣಾತಂತ್ರಗಳೂ ಕೂಡಾ ಸಹಜವಾಗಿ ರೂಢಿಗೆ ಬರುವುದು. ವ್ಯಕ್ತಿ ತಾನು ಇಂತಹ ಕಾಪುತೋಡುಗಳನ್ನು ಅಥವಾ ರಕ್ಷಣಾ ತಂತ್ರಗಳನ್ನು ಉಪಯೋಗಿಸಿಕೊಳ್ಳುತ್ತಿದ್ದೇನೆ ಎಂಬ ಅರಿವೇ ಇಲ್ಲದಂತೆ ಅವುಗಳನ್ನು ಬಳಸುತ್ತಿರುತ್ತಾನೆ.

ಹಾಗೆಯೇ ಈ ರಕ್ಷಣಾತಂತ್ರಗಳು ಸಕಾರಾತ್ಮಕವಾಗಿಯೇ ಕೆಲಸ ಮಾಡುವುದಾದರೂ, ಕೆಲವೊಮ್ಮೆ ಅವುಗಳು ವಾಸ್ತವ ಸಂಗತಿಗಳಿಗಿಂತ ಅನಗತ್ಯವಾಗಿ ಮುನ್ನೆಲೆಗೆ ಬರುವ ಸಾಧ್ಯತೆಗಳೂ ಇರುತ್ತವೆ. ಆಗ ಅದು ನಿಷ್ಪ್ರಯೋಜಕವೂ ಆಗುತ್ತದೆ, ಖಿನ್ನತೆ ಮತ್ತು ಆತಂಕಗಳನ್ನು ಹೆಚ್ಚಿಸುವಂತಹ ವಿಷಯಗಳೂ ಆಗಿಬಿಡುತ್ತವೆ. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವವರಂತೆ ಸಣ್ಣ ರಕ್ಷಣಾತಂತ್ರವೇ ಸಾಕಾಗಿರುವಾಗ ಬಹು ದೊಡ್ಡ ರಕ್ಷಣಾತಂತ್ರವನ್ನು ಉಪಯೋಗಿಸುವಂತಹ ಮನಸ್ಥಿತಿ.

ಮುಂಜಾಗರೂಕತೆಯಾಗಿ ಇರುವುದು ಆತಂಕದ ಮನಸ್ಸಿನ ಒಂದು ರಕ್ಷಣಾ ವಿಧಾನವೇನೋ ಸರಿ. ಆದರೆ, ಅದು ಅತಿರೇಕಕ್ಕೆ ಹೋದರೆ, ಅದೇ ಬಾಧೆಯಾಗಿ ಹಿಂಸೆ ಕೊಡಲು ಪ್ರಾರಂಭಿಸಬಹುದು. ಮೊದಲಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಬಸ್ ನಿಲ್ದಾಣಕ್ಕೆ ಬೇಗ ಬರಬೇಕೆಂದರೆ ಮಧ್ಯಾಹ್ನದ ಬಸ್ಸಿಗೆ ಬೆಳಗ್ಗೆಯೇ ಬಂದು, ಅಲ್ಲಿಯೇ ಪದೇ ಪದೇ ಇತರರನ್ನು ಕೇಳುತ್ತಾ, ತಾನು ಹತ್ತಲಿರುವ ಬಸ್ಸಿಗಾಗಿ ಎದುರು ನೋಡುತ್ತಾ, ಅತ್ತ ಇತ್ತ ಹೋದರೆ ಎಲ್ಲಿ ತಪ್ಪಿ ಹೋಗುವುದೋ ಎಂದು ಎಲ್ಲಿಯೂ ಹೋಗದೇ ಕಾಯುವುದು ಮುಂಜಾಗರೂಕತೆಯಾಗುವುದಿಲ್ಲ, ಅತಿಗೇಡಿತನವಾಗುತ್ತದೆ. ಯಾವುದನ್ನು ರಕ್ಷಣಾತಂತ್ರವೆನ್ನುತ್ತೇವೋ ಅದೇ ರೋಗವಾಗಿ ಕಾಡುವುದು. ಇದರ ಮಹಾಲಕ್ಷಣವೇ ಅತಿರೇಕತೆ. ಯಾವುದು ಅತಿರೇಕವಾಗಿರುತ್ತದೆಯೋ ಆ ರಕ್ಷಣಾತಂತ್ರವೇ ರೋಗವಾಗಿ ಮಾರ್ಪಾಡಾಗುವುದು. ಇದಕ್ಕೆ ಅತ್ಯಂತ ಅಗತ್ಯವಿರುವ ವಿವೇಕ ಅಥವಾ ಪ್ರಜ್ಞೆಯೆಂದರೆ ತಾವು ಯಾವುದನ್ನು ಅತಿಯಾಗಿ ಮಾಡುತ್ತಿದ್ದೇವೆ ಎಂದು ಗಮನಿಸುವುದು.

ಅತಿರೇಕವಾಗಿದೆ ಅಥವಾ ಇಲ್ಲ ಎಂದು ಗಮನಿಸುವುದು ಹೇಗೆಂದರೆ ವಾಸ್ತವ ವಿಷಯಗಳನ್ನು ಗಮನಿಸಿ ಅದಕ್ಕೆ ಅಗತ್ಯ ಮತ್ತು ಅನಗತ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳುವುದು. ಅಗತ್ಯ ಮತ್ತು ಅನಗತ್ಯಗಳ ಅರಿವು ಬಂತೆಂದರೆ ಅತಿರಥನಂತೆ ಮನಸ್ಸು ಅತಿಮನವಾಗಿ ಉಪದ್ರವ ಕೊಡುತ್ತಾ ಮೆರೆಯಲಾರದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ