ಭಾವಸೂತ್ರ

Update: 2023-10-08 05:34 GMT

ಭಾವನೆಗಳು; ಅವು ನಮಗೆ ಹಾಸುತ್ತವೆ, ಅವೇ ಹೊದಿಸುತ್ತವೆ. ಅವೇ ನಮ್ಮನ್ನು ತೊಟ್ಟಿಲಲ್ಲಿಟ್ಟು ಹಿತವಾಗಿ ತೂಗುತ್ತಾ ಮುದವಾಗಿ ಚಂದದ ಕನಸುಗಳನ್ನು ಕಾಣುತ್ತಾ ನಿದ್ದೆಯಲ್ಲೂ ಮುಗುಳ್ನಗುವಂತೆ ಮಾಡುತ್ತವೆ. ಅವೇ ನಮ್ಮನ್ನು ಬೇಡವೆಂದರೂ ಬಲವಂತದಿಂದ ಮುಸುಕು ಹಾಕಿ, ಒತ್ತಿ ಉಸಿರುಗಟ್ಟುವಂತೆ ಮಾಡುತ್ತವೆ. ಶವವಸ್ತ್ರವಾಗುಷ್ಟರ ಮಟ್ಟಿಗೆ ಸುತ್ತಿ ಬಿಗಿಯುತ್ತವೆ.

ಭಾವನೆಗಳೇ ಎಲ್ಲವನ್ನೂರೂಪಿಸುವುದು.

ಯಾವ ನೋಟ, ಯಾವ ಮಾತು, ಯಾವ ಪ್ರಸಂಗ, ಯಾರ ಭೇಟಿ, ಯಾವ ನೆನಪು, ಯಾವಯಾವ ಅನುಭವಗಳು ಯಾವಯಾವ ಬಗೆಯ ಭಾವನೆಗಳನ್ನು ಮೂಡಿಸುತ್ತವೆಯೋ ಅವುಗಳಿಂದಲೇ ನಮ್ಮಲ್ಲಿ ವಿವಿಧ ಭಾವಗಳು ಹುಟ್ಟುವವು. ಅವೇನು ಸಂತೋಷವೋ, ಹಿತವೋ, ಮಧುರವೋ, ದುಃಖವೋ, ನಿರಾಸೆಯೋ, ಜಿಗುಪ್ಸೆಯೋ, ಹತಾಶೆಯೋ, ನೋವೋ, ಅವು ಕೆರಳಿಸುವವೋ, ಅರಳಿಸುವವೋ, ಕೆಣಕುವವೋ, ತಿಣುಕುವವೋ; ಭಾವನೆಗಳು ತಿಳಿನೀರ ಕೊಳವೋ, ಮಂದವಾಗಿ ಸದ್ದಿಲ್ಲದೇ ತಣ್ಣಗೆ ಹರಿಯುತ್ತಿರುವ ಹೊಳೆಯೋ, ಭೋರ್ಗರೆಯುತ್ತಾ ಕೊಚ್ಚಿ ಹರಿಯುವ ಮಹಾ ಪ್ರವಾಹವೋ; ಏನಾದರೂ ಅವು ನಮ್ಮಲ್ಲಿ ಹುಟ್ಟುವ ಭಾವನೆಗಳೇ.

ಸರಿ, ಇದರಿಂದ ನಾವು ಅರಿತುಕೊಳ್ಳಬೇಕಾಗಿರುವುದು ಭಾವನೆಗಳೇ ನಮ್ಮನ್ನು ಗಾಢವಾಗಿ ಪ್ರಭಾವಿಸುವ ವಿಷಯ ಎಂದು. ಯಾವ ವಸ್ತುವಿನಿಂದ ಎಂತಹ ಭಾವನೆ ಉಂಟಾಗುತ್ತದೆ ಎಂಬುದನ್ನು ಗುರುತಿಸುವಷ್ಟರ ಮಟ್ಟಿಗಾದರೂ ಮನೋಜಾಗೃತಿ ಅಥವಾ ಪ್ರಜ್ಞೆ ನಮ್ಮಲ್ಲಿ ಇರಬೇಕು.

ಹುಟ್ಟುವ ಭಾವಕ್ಕೆ ಯಾವುದೋ ಒಂದು ವಸ್ತುವಿನಿಂದ ಪ್ರಚೋದನೆಯನ್ನು ಪಡೆಯುತ್ತೇವೆ. ಈ ವಾಕ್ಯವನ್ನು ಎಚ್ಚರಿಕೆಯಿಂದ ಗಮನಿಸಿ. ನಮ್ಮಲ್ಲೇ ಹುಟ್ಟುವ ಭಾವಕ್ಕೆ ನಾವು ವಿವಿಧ ವಸ್ತು, ವಿಷಯ, ವ್ಯಕ್ತಿ, ಪ್ರಸಂಗ, ಅನುಭವಗಳಿಂದ ಪ್ರಚೋದನೆಯನ್ನು ಪಡೆಯುತ್ತೇವೆ. ಇಲ್ಲಿ, ಅವು ಪ್ರಚೋದಿಸುತ್ತವೆ ಎನ್ನುತ್ತಿಲ್ಲ!

ಅದು ನನ್ನಲ್ಲಿ ಅಂತಹ ಭಾವನೆಯನ್ನು ಉಂಟು ಮಾಡಿತು, ಅವರು ನನ್ನನ್ನು ಹಾಗೆ ಮಾಡಲು ಪ್ರಚೋದಿಸಿದರು ಎನ್ನುವುದು ಅರ್ಧ ಸತ್ಯ. ಅವುಗಳಿಂದ ನಾವು ಎಂತಹ ಪ್ರಚೋದನೆ ಅಥವಾ ಪ್ರೇರಣೆಯನ್ನು ಪಡೆಯಬೇಕು ಎನ್ನುವುದು ಸಂಪೂರ್ಣ ನಮ್ಮ ಹೊಣೆಗಾರಿಕೆ.

ಇಷ್ಟು ತಿಳಿದುಕೊಳ್ಳೋಣ; ಅವರು ನನ್ನನ್ನು ರೇಗಿಸುತ್ತಾರೆ, ಆ ವಿಷಯ ಅಥವಾ ವಸ್ತು ನನ್ನಲ್ಲಿ ಉದ್ರೇಕವನ್ನು ಉಂಟುಮಾಡುತ್ತದೆ, ಅಂತಹ ಸಂಗತಿಗಳು ನನ್ನನ್ನು ಕೆಣಕುತ್ತವೆ ಎನ್ನುವುದು ಹೊಣೆಗೇಡಿತನದ ಮನಸ್ಸು ಹೊಂದಿರುವ ಕಾಪುತೋಡು ಅಥವಾ ರಕ್ಷಣಾತಂತ್ರ. ತಾನು ಅಪರಾಧಿ ಭಾವದಲ್ಲಿ ಸಿಕ್ಕದಿರಲು ಮಾಡಿಕೊಳ್ಳುವಂತಹ ಒಂದು ಕಿಲಾಡಿತನ.

ಒಟ್ಟಿನಲ್ಲಿ ನಮ್ಮಲ್ಲಿ ಹುಟ್ಟುವಂತಹ ಭಾವನೆಗಳ ಜವಾಬ್ದಾರಿಯನ್ನು ನಾವೇ ಹೊತ್ತಲ್ಲಿ ವಿಷಯಗಳನ್ನು, ವಸ್ತುಗಳನ್ನು, ವ್ಯಕ್ತಿಗಳನ್ನು ಗ್ರಹಿಸುವ ವಿಷಯದಲ್ಲಿ ಎಚ್ಚರವಾಗಿರುವಂತಹ ಪ್ರಜ್ಞೆ ನಮ್ಮಲ್ಲಿ ಮೂಡುತ್ತದೆ. ಇದು ಭಾವನೆಗಳಿಲ್ಲದೇ ಇರುವುದು ಅಥವಾ ವಿಷಯಗಳಿಗೆ ಸ್ಪಂದಿಸದೇ ಇರುವುದು ಅಂತಲ್ಲ. ವಿಪರೀತವಾಗಿ ಹಿಗ್ಗಿಸುವಂತಾಗುವ ಅಥವಾ ಅತಿಯಾಗಿ ಕುಗ್ಗಿಸುವಂತಾಗುವ ವಿಷಯಗಳ ಬಗ್ಗೆ ಎಚ್ಚರವಹಿಸುವುದು. ಎಚ್ಚರಿಕೆಯಿಂದ ಗಮನಿಸುವ ಜಾಲರಿಯೊಂದನ್ನು ಇಟ್ಟುಕೊಂಡು ವಿಷಯಗಳನ್ನು ಸೋಸುವುದು. ಭಾವ ವೈಪರೀತ್ಯಗಳನ್ನು, ಅಂದರೆ ಅತಿರೇಕದ ಭಾವತೀವ್ರತೆಗಳನ್ನು ಗಮನಿಸಿ ಅವನ್ನು ತೆಳುವಾಗಿಸಿಕೊಂಡರೆ ಮನಸ್ಸಿನ ಗುಡಾಣದಲ್ಲಿ ಅವು ಹೊರೆಯಾಗಿ ಹೆಣಗಾಡುವಂತಾಗುವುದಿಲ್ಲ.

ಖಿನ್ನತೆ, ಆತಂಕ, ಒತ್ತಡಗಳಂತಹ ಸಮಸ್ಯೆಗಳು ಭಾವತೀವ್ರತೆಗಳಿಂದಲೇ ಉಂಟಾಗುವುದು. ಮನಸ್ಸೇ ಭಾವಿಸುವುದೋ, ಭಾವನೆಗಳೇ ಮನಸ್ಸನ್ನು ಪ್ರಭಾವಿಸುವುದೋ ಎಂದು ಹೇಳಲು ಪದ ಸಂಪತ್ತಿನ ಕೊರತೆ ಇದೆ ಅಥವಾ ವಿಪರೀತ ಸೂಕ್ಷ್ಮಗಳ ವ್ಯಾಖ್ಯಾನಗಳನ್ನು ಮಾಡಬೇಕಾಗುತ್ತದೆ. ಅದನ್ನು ಭಾಷ್ಯಾಕಾರರು ಮತ್ತು ಪಂಡಿತರು ಮಾಡಿಕೊಳ್ಳಲಿ.

ಒಟ್ಟಿನಲ್ಲಿ ಭಾವನೆಗಳು ಮನಸ್ಸನ್ನು ರೂಪಿಸುವವು. ರೂಪಿತವಾಗಿರುವ ಮನಸ್ಸು ಭಾವಿಸುವುದು; ಹೀಗೇ ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಅವು ಇರುತ್ತವೆ. ಅಂದರೆ ವಿಚಾರಗಳಿಂದ ಭಾವನೆಗಳು, ಭಾವನೆಗಳಿಂದ ವಿಚಾರ; ಹೀಗೇ ಎರಡೂ ಸಾಗುತ್ತಿರುತ್ತವೆ, ತಿರುಗಾ ಮುರುಗಾ ಆಗುತ್ತಲೇ ಇರುತ್ತವೆ. ಈ ಭಾವನೆ ಮತ್ತು ವಿಚಾರಗಳ ಒಟ್ಟು ಅಮೂರ್ತವಾದ ಮೂರ್ತಿಯೊಂದಿದೆ. ಅದು ನಮ್ಮತನ. ಸೆಲ್ಫ್ ಅಥವಾ ಆತ್ಮ ಅಂತೀವಲ್ಲಾ, ಅದು.

ಈ ನಮ್ಮತನದಲ್ಲೂ ಮೂಲ ಮನೋಕಾರಕ ಅಂದರೆ ಮನಸ್ಸಿನ ಸ್ವರೂಪವನ್ನು ನಿರ್ಮಿಸುವುದು ಎಂದರೆ ಅದು ಭಾವನೆಯೇ. ಆಲೋಚನೆ ಅಥವಾ ವಿಚಾರ ಎನ್ನುವುದು ಖಂಡಿತ ನಂತರದ್ದು. ಯಾವ ಬಗೆಯ ಆಲೋಚನೆಗಳನ್ನೂ ಮಾಡದಂತಹ, ವಿವೇಚನೆ, ವಿಶ್ಲೇಷಣೆಗಳನ್ನು ಮಾಡದಂತಹ, ಬರೀ ಪ್ರವೃತ್ತಿಗಳಿಂದಲೇ ತನ್ನತನವನ್ನು ಅಭಿವ್ಯಕ್ತಗೊಳಿಸುವಂತಹ ಎಳೆಯ ಮಗುವಿಗೂ ಸಂತೋಷದ ಭಾವ, ದುಃಖದ ಭಾವ, ಭಯವೇ ಮೊದಲಾದ ಭಾವಗಳು ಉಂಟಾಗುತ್ತವೆ. ಅವನ್ನು ತಾವು ಗ್ರಹಿಸಿದಂತೆ ಅವಕ್ಕೆ ಅವು ಪ್ರತಿಕ್ರಿಯಿಸುತ್ತವೆ ಕೂಡಾ. ಇದರಿಂದ ಮನುಷ್ಯನ ಮನಸ್ಸಿನ ವ್ಯಾಪಾರದಲ್ಲಿ ಭಾವಗಳೇ ಅಥವಾ ಭಾವನೆಗಳೇ ಪ್ರಾಥಮಿಕ ಎಂದು ಅರಿಯಬಹುದು.

ಭಾವನೆಗಳೇ ನಮ್ಮತನದ ಹುರುಳು. ಈ ಹುರುಳಿನ ಎಳೆಯಿಂದ ಅಥವಾ ಭಾವಸೂತ್ರದಿಂದ ವ್ಯವಹರಿಸುವುದನ್ನು ಕಲಿತರೆ ನಾವೂ ಮತ್ತು ನಮ್ಮ ಮಾನುಷ ಸಂಬಂಧಗಳು ಹದವಾಗಿ, ಮುದವಾಗಿ ಇರಲು ಸಾಧ್ಯ.

ಈ ಹುರುಳೆಳೆಗಳನ್ನು ಅಥವಾ ಭಾವಸೂತ್ರಗಳನ್ನು ಗಮನದಲ್ಲಿಟ್ಟುಕೊಳ್ಳೋಣ.

ನಾವು ನಮ್ಮಲ್ಲಿ ಯಾವ ಬಗೆಯ ಭಾವ ಉಂಟಾಗುತ್ತಿದೆ ಎಂಬುದರ ಬಗ್ಗೆ ಗಮನ ಕೊಡುವುದು. ನಾವು ಇತರರಲ್ಲಿ ವ್ಯವಹರಿಸುವಾಗ ನಮ್ಮ ಮಾತು ಮತ್ತು ವರ್ತನೆಗಳು ಯಾವ ಬಗೆಯ ಭಾವನೆಯನ್ನು ಉಂಟು ಮಾಡುವವು ಎಂಬುದರ ಬಗ್ಗೆ ಗಮನವನ್ನು ಕೊಡುವುದು. ಏಕೆಂದರೆ ಭಾವನೆಗಳೇ ಅವರಲ್ಲಿ ನೋವು, ನಲಿವುಗಳನ್ನು ಉಂಟು ಮಾಡುವುದು. ಅವರಲ್ಲಿ ನಾವು ಉಂಟು ಮಾಡುವ ಭಾವನೆಗಳಿಗೆ ಅನುಗುಣವಾಗಿ ಅವರಿಗೆ ನಮ್ಮ ಬಗ್ಗೆ ಅಭಿಪ್ರಾಯ ರೂಪುಗೊಳ್ಳುತ್ತಾ ಹೋಗುತ್ತದೆ. ಅವರಲ್ಲಿ ಭಯ, ಖಂಡನೆ, ಕೋಪ, ಮುಜುಗರ, ಅವಮಾನ, ಕೀಳರಿಮೆಯೇ ಮೊದಲಾದ ಕೇಡಿನಾಳದ ಭಾವನೆಗಳನ್ನು ಹುಟ್ಟಿಸಿ ನಮ್ಮನ್ನು ಪ್ರೀತಿಸಬೇಕು, ಗೌರವಿಸಬೇಕು ಎಂದರೆ ಅದು ಶುದ್ಧ ಅವೈಜ್ಞಾನಿಕ ಮತ್ತು ಅಪ್ರಾಯೋಗಿಕ.

ಯಾವುದೇ ಬಗೆಯ ತೀವ್ರವಾದ ಸಂತೋಷ ಅಥವಾ ತೀವ್ರವಾದ ಕೋಪವೇ ಮೊದಲಾದವು ನಮ್ಮಲ್ಲಿ ಆಗುತ್ತಿವೆಯೆಂದರೆ ನಾವು ಉನ್ಮತ್ತರಾಗುತ್ತಿದ್ದೇವೆಂದು ಅರ್ಥ. ಕೂಡಲೇ ಅಂತಹ ಅಮಲಿನಿಂದ ಹೊರಬರುವ ನಿರ್ಧಾರವನ್ನು ಮಾಡಲೇ ಬೇಕು ಮತ್ತು ಹೊರ ಬರಲೇ ಬೇಕು. ಉನ್ಮತ್ತತೆಯ ಆನಂದ ಎನ್ನುವುದು ಆನಂದವೇ ಅಲ್ಲ. ಅದು ಮತ್ತು ಅಥವಾ ಮದ.

ಬಹುಮಾನ ಗಳಿಸುವ, ಶ್ರೇಣಿಯಲ್ಲಿ ಮೇಲೆಯೇ ಇರುವಂತಹ ಆಲೋಚನೆಗಳು ಬರುತ್ತಾವೆಂದರೆ ಬಹುಮಾನ ಪಡೆಯದ, ಶ್ರೇಣಿಯಲ್ಲಿ ಕೆಳಭಾಗದಲ್ಲಿರುವವರ ಭಾವನೆಗಳನ್ನು ಕೂಡಾ ಆಲೋಚಿಸಬೇಕು. ಇದರಿಂದ ಸಹಾನುಭೂತಿ ಬೆಳೆಯುತ್ತದೆ. ಉಗ್ರವಾದ ಆನಂದದ ಕ್ರೌರ್ಯದಿಂದ ಮನಸ್ಸು ಬಚಾವಾಗಬಲ್ಲದು. ಹಗುರವಾಗಿ ಆನಂದದಿಂದ ಇರಬಲ್ಲದು. ಭಾವಸೂತ್ರದ ಮೊದಲ ಮತ್ತು ಕಡೆಯಅಭ್ಯಾಸವೇ ಕರುಣೆಯ ಕಣ್ಣುಗಳಿಂದ ಎಲ್ಲರನ್ನೂ, ಎಲ್ಲವನ್ನೂ ನೋಡುವುದನ್ನು ರೂಢಿಸಿಕೊಳ್ಳುವುದು.

ಹುಟ್ಟುವ ಭಾವನೆಗಳನ್ನು ಬಿಚ್ಚಿಡದೆ ಹೋದಾಗ ಅವು ಒಟ್ಟೊಟ್ಟಾಗಿ ಹೊರೆಯಾಗಿ ಹೆಣಗಾಡಲಾರಂಭಿಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಯೋಗೇಶ್ ಮಾಸ್ಟರ್

contributor

Similar News

ನಮಸ್ಕಾರ
ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ