ಮೃಗೀಯ ವರ್ತನೆ

Update: 2024-05-12 07:38 GMT

ಪಶುತ್ವ ಅಥವಾ ಪಶುತನ ಎನ್ನುವುದನ್ನು ಕೇಡಿನ ಉದ್ದೇಶ, ಹಗೆತನ ಅಥವಾ ಸೇಡನ್ನು ತೀರಿಸಿಕೊಳ್ಳುವ ಮನೋಭಾವಕ್ಕೆ ಆರೋಪಿಸಿಬಿಡುತ್ತಾರೆ. ಬದ್ಧದ್ವೇಷ, ಬದ್ಧವೈರ ಅಥವಾ ಕಡುಸೇಡು ಪದಗಳೆಲ್ಲಾ ಮನುಷ್ಯನಲ್ಲಿ ಸೂಚಿಸುವುದೇನೆಂದರೆ ಆ ವ್ಯಕ್ತಿಯು ತನ್ನಲ್ಲಿ ಹುಟ್ಟಿರುವ ವೈರಕ್ಕೆ ಅಥವಾ ದ್ವೇಷಕ್ಕೆ ತಾನು ಬದ್ಧವಾಗಿರುತ್ತಾನೆ ಎಂದು. ಈ ದ್ವೇಷ ಇಬ್ಬರು ವ್ಯಕ್ತಿಗಳ ನಡುವೆ, ಗುಂಪುಗಳ ನಡುವೆ ಅಥವಾ ಸಮುದಾಯಗಳ ನಡುವೆ, ದೇಶಗಳ ನಡುವೆ; ಒಟ್ಟಿನಲ್ಲಿ ತನ್ನ ಹೊರತಾದ ಮತ್ತೊಂದರ ಗುರುತಿನ ಬಗ್ಗೆ ಅಸಹನೆ ಮತ್ತು ಅದನ್ನು ನಾಶಪಡಿಸುವಂತಹ ಮನಸ್ಥಿತಿಯನ್ನು ಹೊಂದಿರುವಂತಹದ್ದು. ಕೆಲವು ಸಲ ಸಾಂದರ್ಭಿಕವಾಗಿ ಅಡಗಿದ್ದು, ಎಷ್ಟೋ ಕಾಲದ ನಂತರವೂ ಈ ದ್ವೇಷವು ಹೊರಗೆ ಬರುವುದು.

ಒಟ್ಟಾರೆ ಬದ್ಧದ್ವೇಷ ಅಥವಾ ಕಡುವೈರ ಎನ್ನುವುದನ್ನು ಮೃಗೀಯ ಮನೋಭಾವ ಎನ್ನುವುದು ಸರಿಯಾದ ಗುರುತಿಸುವಿಕೆಯೇ ಆಗಿರುತ್ತದೆ. ಜೊತೆಗೆ ಸಾಂಸ್ಕೃತಿಕ ಅಥವಾ ಧಾರ್ಮಿಕ ಸಮೂಹಗಳ ನಡುವಿನ ಈ ಬಗೆಯ ಬದ್ಧದ್ವೇಷ ಮುಗಿಯುವುದೇ ಇಲ್ಲವೇನೋ ಎನ್ನುವಷ್ಟು ದೀರ್ಘಕಾಲ ಮನುಷ್ಯರಲ್ಲಿ ಮೃಗೀಯ ಮನೋಭಾವ ಇರುತ್ತದೆ.

ಮನುಷ್ಯನಿಗೆ ಇಂತಹ ದ್ವೇಷ ಪಶುತ್ವದ್ದೇ ಕೊಡುಗೆ. ಈ ಜಗತ್ತಿನಲ್ಲಿ ಮನುಷ್ಯನ ಬದುಕಿಗೆ ಜೈವಿಕವಾಗಿಯೂ, ಮಾನಸಿಕವಾಗಿಯೂ ಮೂಲ ಮಾದರಿ ಎಂದರೆ ಪ್ರಾಣಿಗಳದ್ದೇ! ಪ್ರಾಣಿಗಳೇ ಮನುಷ್ಯನ ಮೊದಲ ಶಿಕ್ಷಕರು. ಉಣ್ಣುವ, ಓಡುವ, ಹೋರಾಡುವ, ಬದುಕುವ ಅನೇಕ ಮಾದರಿಗಳನ್ನು ಪ್ರಾಣಿಗಳನ್ನೇ ನೋಡಿದ ಮನುಷ್ಯ ಕಲಿತಿದ್ದು. ಜೊತೆಗೆ ಮನುಷ್ಯನಿಗೂ ಪ್ರಾಣಿಗಳಿಗೆ ಇರುವಂತಹ ಪ್ರವೃತ್ತಿಗಳು ತೀರಾ ನೈಸರ್ಗಿಕವಾಗಿಯೇ ಇರುತ್ತದೆ. ಆದರೆ ಮನುಷ್ಯನಿಗೆ ಇರುವಂತಹ ಮನಸ್ಸು ಮತ್ತು ವಿವೇಕದ ಕಾರಣದಿಂದ ಅವನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ಗಮನಿಸುತ್ತಾನೆ, ಗ್ರಹಿಸುತ್ತಾನೆ ಮತ್ತು ಅದನ್ನು ಸ್ಮರಣೆಯಲ್ಲಿ ಇಟ್ಟುಕೊಂಡು ಪರಾಮರ್ಶನ ಮಾಡುತ್ತಾನೆ, ತನ್ನದಾಗಿಸಿಕೊಳ್ಳುತ್ತಾನೆ ಮತ್ತು ಅದನ್ನು ತನ್ನ ಕಲ್ಪನೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ.

ಮನುಷ್ಯನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವುದರಲ್ಲಿ ಅವನ ಬಯಕೆಗಳು ಮತ್ತು ಕಲ್ಪನೆಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಇದು ಮನುಷ್ಯನ ಮಾನಸಿಕ ಸ್ಥಿತಿಯ ಅಥವಾ ಮನೋಭಾವದ ಮುಖ್ಯ ಲಕ್ಷಣ. ಪ್ರಾಣಿಗಳು ನೈಸರ್ಗಿಕವಾಗಿ ಪೂರೈಸಿಕೊಳ್ಳುವ ತನ್ನ ಅಗತ್ಯಗಳನ್ನೇ ಮನುಷ್ಯ ತನಗೆ ಬೇಕಾದ ರೀತಿಯಲ್ಲಿ ಶಿಷ್ಟ ಅಥವಾ ನಾಗರಿಕವೆಂದು ಕರೆದುಕೊಂಡು ಪೂರೈಸಿಕೊಳ್ಳುತ್ತಾನೆ.

ಜಾತಿ ಅಂದರೆ ಹುಟ್ಟಿನ ಆಧಾರದಲ್ಲಿ ಗುಂಪುಗಳನ್ನು ಮಾಡಿಕೊಳ್ಳುವುದು ನೇರವಾಗಿ ಮೃಗೀಯ ಪ್ರವೃತ್ತಿ. ತಾವು ಹುಟ್ಟಿದ ಬಗೆ ಮತ್ತು ಗುಂಪಿನಲ್ಲಿ ಸಹಜವಾಗಿ ಹೊಂದಿಕೊಂಡು ಅದರಲ್ಲಿ ತಮ್ಮ ಹಿತವನ್ನು ಕಂಡುಕೊಳ್ಳುವುದು ಪ್ರಾಣಿಯ ನೈಸರ್ಗಿಕ ಬುದ್ಧಿ. ಅದರಿಂದ ಹೊರತಾಗಿ ಬದುಕಲು ಅವಕ್ಕೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭಯ. ತನ್ನ ಜಾತಿಯ ಗುಂಪಿನಿಂದ ಹೊರತಾಗಿ ಮತ್ತೊಂದು ಜಾತಿಯ ಗುಂಪಿನ ಬಗ್ಗೆ ಆಲೋಚಿಸಲು ಅವಕ್ಕೆ ಸಾಧ್ಯವಿಲ್ಲ. ಅದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ತಮ್ಮ ಗುಂಪಿನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತವೆ. ಈ ಹೋರಾಟಕ್ಕೆ ಬೇಕಾಗಿರುವಂತಹ ಧೈರ್ಯ ಅವುಗಳಲ್ಲಿ ಇರುತ್ತದೆ.

ನೆನಪಿಡೋಣ, ಧೈರ್ಯದ ತಾಯಿ ಭಯ. ಭಯದಿಂದಲೇ ಧೈರ್ಯ ಹುಟ್ಟುವುದು. ಭಯವಾದಾಗ, ಆ ಭಯದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಅಸ್ತಿತ್ವಕ್ಕೆ ಭಯವನ್ನು ಒಡ್ಡುತ್ತಿರುವ ವಿಷಯದೊಂದಿಗೆ ಹೋರಾಡಲು ತನ್ನಲ್ಲಿರುವ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕ್ರೋಡೀಕರಿಸಿಕೊಳ್ಳುತ್ತದೆ. ಅದೇ ಧೈರ್ಯ. ಇಂತಹ ಹೋರಾಟವು ರೂಢಿಯಾದಂತೆ, ಇದರಲ್ಲಿ ಸಿಗುವಂತಹ ಪುನರಾವರ್ತಿತವಾದ ಯಶಸ್ಸುಗಳಿಂದ ಧೈರ್ಯವು ಮೂಡುತ್ತದೆ ಮತ್ತು ವೀರತ್ವವು ರೂಪುಗೊಳ್ಳುತ್ತದೆ. ಒಂದು ವೇಳೆ ಈ ಹೋರಾಟದಲ್ಲಿ ಅಪಜಯವುಂಟಾದರೆ ಅದು ಪಲಾಯನಕ್ಕೆ ಬದಲಾಗುತ್ತದೆ. ಹೋರಾಟ ಅಥವಾ ಪಲಾಯನ; ಯಾವುದಾದರೂ ತನ್ನ ಅಸ್ತಿತ್ವದ ಉಳಿವಿಗೇ!

ಹುಟ್ಟಿದಾಗಿನಿಂದ ಒಟ್ಟಿಗೆ ವಾಸಿಸುವ ಪ್ರಾಣಿಗಳ ಪ್ರವೃತ್ತಿಯೇ ಜಾತಿಯ ಹುಟ್ಟಿಗೆ ಕಾರಣ. ಅವುಗಳಿಗೆ ಭಿನ್ನ ಜಾತಿಗಳ ವ್ಯವಸ್ಥೆ, ಆಂತರ್ಯ, ಆಶಯಗಳು ತಿಳಿಯದ ಕಾರಣ ಅವು ಇತರ ಜಾತಿಗಳ ಸಮೂಹಗಳನ್ನು ಬೆದರಿಕೆ ಎಂದು ಭಾವಿಸುತ್ತವೆ. ಹಾಗೂ ತಮ್ಮ ಭಯವನ್ನು ಮೆಟ್ಟಲು ಅಥವಾ ಮೀರಲು ತಾವೇ ಆಕ್ರಮಣಕಾರಿಯಾಗಿ ಅವುಗಳ ಜೊತೆಗೆ ಹೋರಾಡಲು ಮುಂದಾಗುತ್ತವೆ. ಮನುಷ್ಯನೂ ಇದೇ ರೀತಿಯಲ್ಲಿ ಮಾನಸಿಕವಾಗಿ ಮಾಡುತ್ತಾನೆ. ಅದನ್ನು ತನ್ನದು ಇತರರಿಗಿಂತ ತಮ್ಮ ಗುಂಪು ಶ್ರೇಷ್ಠ ಎಂದೋ, ತಾವು ಸಾಮಾಜಿಕ ಶ್ರೇಣಿಯಲ್ಲಿ ಮೇಲು ಎಂದೋ ಸಂಕಲಿತ ಮನಸ್ಥಿತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಾರೆ. ಪ್ರಾಣಿಗಳು ದೈಹಿಕವಾಗಿ ಇತರ ಗುಂಪಿನ ಮೇಲೆ ಮೇಲುಗೈ ಸಾಧಿಸಲು ಯತ್ನಿಸುವಂತೆ ಮನುಷ್ಯ ಮಾನಸಿಕವಾಗಿ ಮೇಲುಗೈ ಸಾಧಿಸಲು ಯತ್ನಿಸುತ್ತಾನೆ.

ಪ್ರಾಣಿಗಳು ಸಹಜವಾಗಿ ಮಾಡುವ ಸಂತಾನೋತ್ಪತ್ತಿಯ ಚಟುವಟಿಕೆಗಳನ್ನು ಮನುಷ್ಯ ತನ್ನ ಬಯಕೆ, ಸೃಜನಶೀಲತೆಯಂತೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ನಿಶ್ಚಿತಾರ್ಥ, ಮದುವೆ, ಪ್ರೇಮವೇ ಮೊದಲಾದ ಪರಿಕಲ್ಪನೆ ಮತ್ತು ವ್ಯವಸ್ಥೆಗಳಲ್ಲಿ ರೂಪಿಸಿಕೊಂಡ. ಹಾಗೆಯೇ ಪ್ರಾಣಿಗಳು ತಮ್ಮ ಲೈಂಗಿಕ ಸಂಗಾತಿಗಳನ್ನು ಇತರ ಪ್ರಾಣಿಗಳು ಕೂಡುವುದನ್ನು ಸಹಿಸುವುದಿಲ್ಲ. ತಮ್ಮ ದೈಹಿಕ ಬಲದ ಆಧಾರದಲ್ಲಿ ಹೋರಾಡುತ್ತವೆ. ಸಾಧ್ಯವೇ ಆಗದಿದ್ದಾಗ ಬಿಟ್ಟುಬಿಡುತ್ತವೆ. ಅದನ್ನು ಮನುಷ್ಯನು ಕೂಡಾ ಸಂಗಾತಿಯ ನಿಷ್ಠೆಯನ್ನಾಗಿ ಬದಲಿಸಿಕೊಳ್ಳುತ್ತಾನೆ. ಪತಿವ್ರತಾಧರ್ಮವೆಂದೋ, ಏಕಪತ್ನಿವ್ರತವೆಂದೋ ಕರೆದುಕೊಳ್ಳುತ್ತಾನೆ.

ಪ್ರಾಣಿಗಳ ಮತ್ತೊಂದು ಪ್ರಬಲವಾದ ಗುಣವೆಂದರೆ ತಮ್ಮ ಇರುವಿನ ವ್ಯಾಪ್ತಿಯ ಎಲ್ಲೆಗಳನ್ನು ಗುರುತಿಸಿಕೊಳ್ಳುವುದು. ಅದನ್ನು ಕಾಪಾಡಿಕೊಳ್ಳುವುದು. ಅದರಲ್ಲಿ ಯಾವುದೇ ಇತರ ಪ್ರಾಣಿಗಳ ಅತಿಕ್ರಮಣವನ್ನು ಸಹಿಸದಿರುವುದು. ಅದೇ ಪ್ರವೃತ್ತಿಯನ್ನು ಮನುಷ್ಯ ಶಿಷ್ಟವಾಗಿ ಮತ್ತು ವ್ಯಾವಹಾರಿಕವಾಗಿ ಕಾಪಾಡಿಕೊಂಡು ಬಂದಿರುವುದು ದೇಶದ ವ್ಯವಸ್ಥೆಯಲ್ಲಿ.

ಒಟ್ಟಾರೆ ಮೃಗೀಯ ಪ್ರವೃತ್ತಿಗಳೆಂದು ಏನನ್ನು ಹೇಳುತ್ತಾರೋ ಅವೆಲ್ಲವನ್ನೂ ಮನುಷ್ಯರು ತಮ್ಮೊಳಗೆ ಸಾಗಿಸುತ್ತಿದ್ದಾರೆ. ಮೃಗೀಯ ಭಾವನೆಗಳನ್ನೇ ಸಾಮಾಜೀಕರಣಗೊಳಿಸುವ ಹಂತಗಳಲ್ಲಿ ಮೃಗತ್ವವನ್ನು ಮನುಷ್ಯತ್ವದಿಂದ ಬೇರೆಯಾಗಿಸುವ ಪ್ರಯತ್ನವನ್ನೇನೋ ಮಾಡುತ್ತಾರೆ. ಆದರೆ ಅಷ್ಟಾಗಿ ಅದು ಯಶಸ್ಸಾಗುವುದಿಲ್ಲ. ಪ್ರಾಣಿಗಳಿಗೆ ಇಲ್ಲದ ಅರಿವು ಮನುಷ್ಯನಿಗೆ ಇದ್ದರೂ, ಅರಿಯುವ, ಗ್ರಹಿಸುವ ಮತ್ತು ಅದನ್ನು ಅಭಿವ್ಯಕ್ತಿಸುವ ಮಾನುಷ ಗುಣಗಳನ್ನು ಮೀರುವ ಪಶುತನಕ್ಕೇ ಶರಣಾಗಿಬಿಡುತ್ತಾನೆ. ತನ್ನಲ್ಲಿರುವ ಪಶುತ್ವ ಎನ್ನುವ ನೈಸರ್ಗಿಕವಾದ ಗುಣದ ಮೇಲೆ ತನ್ನ ಮೇಲುಗೈಯನ್ನು ಸಾಧಿಸಿ ತನ್ನ ಆಶಯದ ಮನುಷ್ಯತ್ವದ ಗುಣವನ್ನು ಸಾಧಿಸಿಕೊಳ್ಳಲು ಈ ಮನುಷ್ಯನಿಗೆ ಇನ್ನೂ ಅದೆಷ್ಟು ಅರಿವು, ಅಧ್ಯಯನ, ಅನುಭವ, ತರಬೇತಿ ಬೇಕೋ ಗೊತ್ತಿಲ್ಲ!

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಯೋಗೇಶ್ ಮಾಸ್ಟರ್,

contributor

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು