ಸಹಜ ವಿವೇಕ

Update: 2023-12-31 08:38 GMT

ಮನುಷ್ಯನಿಗೆ ಎಷ್ಟೋ ಸಾಮರ್ಥ್ಯ, ವಿವೇಕ, ಕೌಶಲ್ಯ ಮತ್ತು ಜ್ಞಾನಗಳು ಅಪ್ರಯತ್ನವಾಗಿ ಮತ್ತು ಕಲಿಯದೆಯೇ ಬಂದಿರುತ್ತದೆ. ಅವುಗಳನ್ನು ಕಂಡುಕೊಳ್ಳುವುದರಲ್ಲಿ ವ್ಯಕ್ತಿ ವಿಫಲನಾದನೆಂದರೆ ಅಥವಾ ಅವುಗಳ ಸ್ವರೂಪಕ್ಕೆ ವಿರುದ್ಧವಾಗಿ ವ್ಯಕ್ತಿ ಇರುವರೆಂದರೆ ಅಲ್ಲೇನೋ ಸಮಸ್ಯೆಇದೆ ಎಂದೇ ಅರ್ಥ.

ಜೀವಂತವಾಗಿರುವವು ಸಹಜವಾಗಿ ಬದಲಾಗುತ್ತಿರುತ್ತವೆ. ಜೀವಂತವಾಗಿರುವ ಸಸಿಯೊಂದು ದಿನದಿನಕ್ಕೂ ಬೆಳೆಯುತ್ತಾ ತನ್ನ ಸ್ವರೂಪದಲ್ಲಿ ಬದಲಾವಣೆಯನ್ನು ತೋರುತ್ತಿರುತ್ತದೆ. ಈ ಬದಲಾವಣೆ ಬೆಳವಣಿಗೆ ಮತ್ತು ವಿಕಾಸ. ಆದರೆ ನಿರ್ಜೀವ ಮರದ ತುಂಡು ಕೂಡಾ ಬದಲಾಗುತ್ತದೆ. ಆದರೆ ಅದು ಕೊಳೆಯುವ ಅಥವಾ ನಶಿಸುವ ಕಡೆಗಿನ ಬದಲಾವಣೆಯಾಗಿರುತ್ತದೆ. ಜಗತ್ತಿನ ಎಲ್ಲಾ ವಸ್ತುಗಳು ಜೀವಂತವಾಗಿದ್ದರೂ ಅಥವಾ ನಿರ್ಜೀವವಾಗಿದ್ದರೂ ಬದಲಾವಣೆಗೆ ಒಳಗಾಗಿಯೇ ಇರುತ್ತವೆ. ನಿರ್ಜೀವವಾಗಿರುವ ದೊಡ್ಡದೊಡ್ಡಕಲ್ಲಿನ ಕಟ್ಟಡಗಳ ಸ್ಮಾರಕಗಳೂ, ಕಲ್ಲುಗುಡ್ಡಗಳು ಕೂಡಾ ನಶಿಸುವ ದಿಕ್ಕಿನಲ್ಲಿ ಬದಲಾಗುತ್ತಿರುತ್ತವೆ. ಆದರೆ ಹೊರಗಿನ ಕಣ್ಣಿಗೆ ಕಾಣಿಸುವಷ್ಟು ದೊಡ್ಡ ಪ್ರಮಾಣದ ಸವೆಯುವಿಕೆ ಅದಾಗಿರುವುದಿಲ್ಲ.

ವಿಶ್ವದಲ್ಲಿ ಪ್ರತಿಯೊಂದು ಜೀವವೂ ಮತ್ತು ವಸ್ತುವೂ ಅದರದೇ ಆದಂತಹ ರಚನೆ, ಸಾಮರ್ಥ್ಯ, ಬಾಳಿಕೆಯ ಕಾಲಾವಧಿಯನ್ನು ಹೊಂದಿರುತ್ತವೆ. ಅದರ ಪ್ರಕಾರ ಯಾವುದೇ ಜೀವಿಗಾದರೂ ತಾನು ಹೇಗಿರಬೇಕು ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ಕೂಡಾ ಪ್ರಾಥಮಿಕವಾದ ಜ್ಞಾನ, ಕೌಶಲ್ಯ ಮತ್ತು ವಿವೇಕಗಳಿರುತ್ತವೆ.

ವಲಸೆ ಹೋಗುವ ಪಕ್ಷಿಗಳು ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ ಅಥವಾ ಬದಲಾಗುವ ಹವಾಮಾನದ ವೈಪರೀತ್ಯ ತಮ್ಮ ಉಳಿವಿಗೆ ಮಾರಕವಾಗುತ್ತವೆ ಎಂದು ಅರಿತು ಸ್ಥಳ ಬದಲಾವಣೆ ಮಾಡುತ್ತವೆ ಅಥವಾ ತಾವು ಗೂಡುಕಟ್ಟಿ, ಮೊಟ್ಟೆ ಇಟ್ಟು, ಅವುಗಳಿಗೆ ಅಗತ್ಯವಿರುವ ಆಹಾರವನ್ನು ಒದಗಿಸಿ ಆ ಮರಿಗಳನ್ನು ಸಶಕ್ತರನ್ನಾಗಿ ಮಾಡುವ ಹೊಣೆಗಾರಿಕೆಗೆ ಪೂರಕವಾದ ಅವಕಾಶವನ್ನು ಕಂಡುಕೊಳ್ಳುತ್ತವೆ. ಹಾಗೆಯೇ ಬಿರುಗಾಳಿ, ಚಂಡಮಾರುತ ಅಥವಾ ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಎದುರಾಗುತ್ತವೆ ಎಂದರೆ ಮುನ್ನಾಗಿಯೇ ಗ್ರಹಿಸಿ ಅಲ್ಲಿಂದ ಹೊರಟು ಸುರಕ್ಷಿತ ಪ್ರದೇಶಗಳನ್ನು ಸೇರುವಂತಹ ಸಾಮರ್ಥ್ಯ ಅವುಗಳಿಗೆ ಇವೆ.

ಪ್ರಕೃತಿ ಇಂತಹ ಸಾಮರ್ಥ್ಯ, ಕೌಶಲ್ಯ ಮತ್ತು ವಿವೇಕಗಳನ್ನು ಮನುಷ್ಯನಿಗೆ ನೀಡದೇ ವಂಚಿಸಿಲ್ಲ. ಆದರೆ ಅವನಿಗೆ ಅವುಗಳು ಇವೆ ಎಂಬ ಅರಿವೇ ಇರುವುದಿಲ್ಲ. ಅದಕ್ಕೆ ಕಾರಣ ಅವನು ಬಹು ಬೇಗ ನೈಸರ್ಗಿಕವಾದ ಸಹಜತೆಯಿಂದ ಸಾಮಾಜಿಕವಾದ ಅಸಹಜತೆಗೆ ಪಲ್ಲಟಗೊಳ್ಳುವುದು.

ಮನುಷ್ಯನ ಬಹುದೊಡ್ಡ ಸಮಸ್ಯೆ ಎಂದರೆ ವ್ಯಕ್ತಿಗತವಾದ ತನ್ನತನವನ್ನೂ ಮತ್ತು ಸಾಮಾಜಿಕವಾದ ತಮ್ಮತನವನ್ನೂ ಕಂಡುಕೊಳ್ಳದಿರುವುದು. ಮನುಷ್ಯನಿಗೆ ಏಕಾಂಗಿಯಾಗಿ ಮತ್ತು ಸಾಮೂಹಿಕವಾಗಿ ಬದುಕುವ ಜ್ಞಾನ, ಕೌಶಲ್ಯ ಮತ್ತು ವಿವೇಕಗಳು ಅನುವಂಶೀಯವಾಗಿ ಬಂದಿರುವವು.

ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯಗಳನ್ನು, ಪ್ರತಿಭೆ, ಕೌಶಲ್ಯಗಳನ್ನು ಮತ್ತು ಅವನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಅರಿತುಕೊಂಡು, ತನ್ನ ಚಟುವಟಿಕೆಗಳಲ್ಲಿ ಬಳಸುತ್ತಿದ್ದಾನೆಂದರೆ ಅಂತಹ ವ್ಯಕ್ತಿ ತನ್ನತನವನ್ನು ನನಸಾಗಿಸಿಕೊಳ್ಳುವವರು ಎಂದರ್ಥ. ತನ್ನತನದ ಈ ಬಗೆಯ ಸಾಕಾರಕ್ಕೆ Self-actualization ಎಂದು ಕರೆಯುತ್ತಾರೆ. ತನ್ನತನವನ್ನು ಸಾಕಾರಗೊಳಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಯಾವುದೋ ಪ್ರಸಂಗಗಳಿಂದ ಅಥವಾ ಯಾರೋ ವ್ಯಕ್ತಿಗಳಿಂದ ಪ್ರೇರಣೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯೂ ಬರುವುದಿಲ್ಲ. ತನ್ನತನವನ್ನು ನನಸಾಗಿಸಿಕೊಂಡಿರುವ ವ್ಯಕ್ತಿಯು ತನ್ನ ಜೀವನವನ್ನು ಸದಾ ಹೊಸತನದಿಂದಲೇ ಬರಮಾಡಿಕೊಳ್ಳುತ್ತಿರುತ್ತಾನೆ ಮತ್ತು ತನ್ನ ಎಲ್ಲಾ ಹಳೆಯ ಅನುಭವಗಳನ್ನು ಒಪ್ಪಿಕೊಂಡು ಮತ್ತು ಅವಕ್ಕೆ ಮಾನ್ಯತೆಯನ್ನೂ ನೀಡುತ್ತಾನೆ. ಸರಳವಾಗಿ ಹೇಳುವುದಾದರೆ ಹಳೆಯ ಅನುಭವ, ಅರಿವು, ಪ್ರಸಂಗಗಳೆಲ್ಲವೂ ಹಳತಾಗಿ ಉದುರಿರುವ ಎಲೆಗೊಬ್ಬರವಾಗಿರುತ್ತದೆ ಮತ್ತು ಹೊಸ ವಿಷಯಗಳು, ಅನುಭವಗಳು ಹೊಸತಿನ ಚಿಗುರೆಲೆಗಳಾಗಿರುತ್ತವೆ.

ಅಮೆರಿಕದ ಮನಶ್ಶಾಸ್ತ್ರಜ್ಞ ಅಬ್ರಹಾಂ ಮ್ಯಾಸ್ಲೋ ವಿವರಿಸುವಂತೆ ತನ್ನತನವನ್ನು ಸಾಕಾರಗೊಳಿಸಿಕೊಳ್ಳುವ ವ್ಯಕ್ತಿಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಕ್ಕೆ ತಕ್ಕಂತೆ ಕೆಲಸಗಳನ್ನು ಸಹಜವಾಗಿ ಮಾಡುತ್ತಾ ಆತ್ಮತೃಪ್ತಿಯನ್ನು ಹೊಂದಿರುತ್ತಾರೆ.

ತನ್ನತನವನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಮೊದಲಿಗೆ ಅಗತ್ಯವಿರುವ ಎರಡು ಮುಖ್ಯ ಅಂಶಗಳೆಂದರೆ, ಆಂತರಿಕ ಶೋಧನೆ ಮತ್ತು ಕಾರ್ಯ ತತ್ಪರವಾಗುವುದು. ಅಂದರೆ ತನ್ನಲ್ಲಿ ಅಡಕವಾಗಿರುವ ಸಾಮರ್ಥ್ಯಗಳೇನು ಎಂದು ಕಂಡುಕೊಳ್ಳುವುದು ಮತ್ತು ಅವುಗಳನ್ನು ಸಾಕಾರಗೊಳಿಸಲು ಸಾಧ್ಯತೆಗಳನ್ನು ಕಂಡುಕೊಂಡು ಆ ದಿಕ್ಕಿನಲ್ಲಿ ಕೆಲಸ ಮಾಡುವುದು.

ಮನುಷ್ಯನ ಅಂತರಾಳಕ್ಕೆ ಆನುವಂಶೀಯವಾಗಿ ಬಂದಿರುವ ಜ್ಞಾನವೆಂದರೆ ತಾನು ಸಂಘಜೀವಿ ಎಂಬುದು. ಅವನ ಮನಸ್ಸು ತನ್ನ ಪ್ರವೃತ್ತಿಯಂತೆ ತಾನುಳಿಯಬೇಕು ಎಂಬ ಧೋರಣೆಯಲ್ಲಿ ಸ್ವಾರ್ಥದಿಂದ ವರ್ತಿಸಲು ಮುಂದಾದರೂ, ವ್ಯಕ್ತಿಗೆ ತಾನು ಸಂಘಜೀವಿಯಾಗಿರುವ ಕಾರಣದಿಂದ ಒಳಿತನ್ನು ಪಡೆಯಲು ತಾನು ಒಳ್ಳೆಯವನಾಗಿರಬೇಕು ಎಂಬ ಸಾಮಾನ್ಯ ಜ್ಞಾನ ಮೂಲಸ್ತರದಲ್ಲೇ ಇರುತ್ತದೆ.

ತನ್ನ ಒಂದು ಕ್ರಿಯೆಗೆ ಯಾವುದೋ ಒಂದು ಪ್ರತಿಕ್ರಿಯೆ ಸಿಗುತ್ತದೆ. ಆ ಪ್ರತಿಕ್ರಿಯೆ ತಾನು ಎದುರು ನೋಡದೇ ಇರದಾಗಿರಬಹುದು ಮತ್ತು ತಾನು ಇಷ್ಟಪಡುವಂತದ್ದಾಗಿಲ್ಲದಿರಬಹುದು. ಹಾಗಿದ್ದಾಗಲೂ ತಾನು ಹೇಗೆ ವರ್ತಿಸಬೇಕು ಎಂಬ ಸಿದ್ಧತೆ ಕೂಡಾ ವ್ಯಕ್ತಿಯ ಕಾದು ನೋಡುವ ವಿವೇಕದಲ್ಲಿರುತ್ತದೆ. ಆ ವಿವೇಕವೂ ಮನುಷ್ಯನಿಗೆ ಆನುವಂಶೀಯವಾಗಿ ಬಂದಿರವ ಗುಣ.

ಜಾಗ್ರತೆಯಿಂದ ಮತ್ತು ಪ್ರಜ್ಞೆಯಿಂದ ಗಮನಿಸಿ ನೋಡುವುದು, ಪ್ರಾಮಾಣಿಕತೆ, ಆತ್ಮಾವಲೋಕನ, ತನ್ನ ಮನಸ್ಸನ್ನು ನೋಡಿಕೊಳ್ಳುವ, ಅದರ ವರ್ತನೆ ಮತ್ತು ಆಲೋಚನೆಯ ಗತಿಯನ್ನು ಗಮನಿಸುವ ಹಾಗೂ ಅದರ ಸ್ವಾತಂತ್ರ್ಯವನ್ನು ತನ್ನ ವಿಷಯದಲ್ಲಿ ಮತ್ತು ಇತರರ ವಿಷಯದಲ್ಲಿ ಬಳಸುವಂತಹ ವಿವೇಕ ಇರುತ್ತದೆ. ಅದರ ಆಧಾರದಲ್ಲಿ ತನ್ನೊಳಗಿನ ಮತ್ತು ಹೊರಗಿನ ವ್ಯವಹಾರದಲ್ಲಿ ಮೌಲ್ಯಗಳನ್ನು ಗುರುತಿಸುವುದು ಕೂಡಾ ಸಹಜವಾದಂತ ವಿವೇಕವೇ ಆಗಿರುತ್ತದೆ. ಏಕೆಂದರೆ ಮನುಷ್ಯನಿಗೆ ಅನುವಂಶೀಯವಾಗಿಯೇ ತಾನೊಂದು ಸಂಘಜೀವಿ ಎಂಬ ಅರಿವು ಇರುತ್ತದೆ.

ಅಬ್ರಹಾಂ ಮ್ಯಾಸ್ಲೋ ಮನುಷ್ಯನಿಗೆ ಜಾಗೃತಿ, ಪ್ರಾಮಾಣಿಕತೆ, ತನ್ನನ್ನು ತಾನು ಪರೀಕ್ಷಿಸಿ ಕೊಳ್ಳುವ ಮತ್ತು ತನ್ನ ವ್ಯಕ್ತಿಗತ ಸ್ವಾತಂತ್ರ್ಯವನ್ನು ವಿವೇಕ ಪೂರ್ಣವಾಗಿ ಬಳಸುವ ಎಲ್ಲಾ ಸಾಮರ್ಥ್ಯಗಳೂ ಸಹಜವಾಗಿ ಇವೆ ಎಂದು ವಿವರಿಸುತ್ತಾರೆ.

ಅಂತಿಮವಾಗಿ ಹೇಳುವುದಾದರೆ, ಮನುಷ್ಯ ತನ್ನತನವನ್ನು ನನಸು ಮಾಡಿಕೊಳ್ಳುವ ಅಥವಾ ಸಾಕಾರಗೊಳಿಸಿಕೊಳ್ಳುವುದರ ಮೂಲಕ ನೆಮ್ಮದಿ ಯಿಂದ ಬಾಳುತ್ತಾನೆ. ಅದನ್ನು ಗುರುತಿಸಿಕೊಳ್ಳುವುದಕ್ಕೆ ಮತ್ತು ಸಾಕಾರಗೊಳಿಸಿ ಕೊಳ್ಳುವುದಕ್ಕೆ ಪರಸ್ಪರ ಸಹಕರಿಸಬೇಕು. ಏಕೆಂದರೆ ನಾವು ನೈಸರ್ಗಿಕವಾಗಿಯೇ ಸಂಘಜೀವಿ. ಆನುವಂಶೀಯವಾಗಿಯೇ ಸಂಘಜೀವನದ ವಿವೇಕ ನಮ್ಮಲ್ಲಿದೆ. ಒಂದು ವೇಳೆ ನಾವು ನಮ್ಮ ಪರಸ್ಪರರಲ್ಲಿ ಭೇದ ಹುಟ್ಟಿಸುತ್ತಿದ್ದೇವೆ, ದ್ವೇಷವನ್ನು ಹುಟ್ಟಿಸಿ ಕಂದಕವನ್ನು ತೋಡುತ್ತಿದ್ದೇವೆ ಅಥವಾ ಒಟ್ಟಾಗಿ ಬಾಳುವ ಪ್ರಕ್ರಿಯೆಯಲ್ಲಿ ಬಿಕ್ಕಟ್ಟನ್ನು ಉಂಟು ಮಾಡುತ್ತಿದ್ದೇವೆಂದರೆ ಮನಸ್ಸು ರೋಗಗ್ರಸ್ತವಾಗಿದೆ ಎಂದೇ ಅರ್ಥ. ರೋಗದ ಕಾರಣ ಮತ್ತು ಪರಿಣಾಮಗಳನ್ನು ಕಂಡುಕೊಳ್ಳುವಷ್ಟು ವಿವೇಕ ಉಂಟಾದರೆ ಮುಂದಿನ ಚಿಕಿತ್ಸೆಗೆ ತಾವಾಗಿಯೇ ಒಳಪಡಲು ಸಾಧ್ಯ. ಜೀವಂತವಾಗಿರುವ ನಮ್ಮ ಬದಲಾವಣೆ ವಿಕಾಸದ ಕಡೆಗೋ ಅಥವಾ ವಿನಾಶದಕಡೆಗೋ ಎಂದು ಗಮನಿಸಿಕೊಳ್ಳಲು ಸಾಧ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ