ನಾನು ಯಾರು?

Update: 2023-12-10 04:17 GMT

ನಾನು ಯಾರು ಎಂಬ ವಿಷಯವೊಂದು ಹುಡುಕಾಟಕ್ಕೆ ಯೋಗ್ಯವಾದದ್ದು ಅಂತ ಯಾರಿಗಾದರೂ ಅನ್ನಿಸಿದರೆ, ಅವರು ತಮ್ಮತನ ಮತ್ತು ತಾವು ನಿರ್ವಹಿಸುವ ಪಾತ್ರಗಳ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಎಂದರ್ಥ. ನಾನು ಯಾರು ಅಥವಾ ನಾನು ಏನು? ಎಂಬ ಪ್ರಶ್ನೆ ಸುಲಭವಾಗಿ ಎಲ್ಲರಲ್ಲಿಯೂ ಹುಟ್ಟಲಾರದಂತೆ ಅವರ ಪಾತ್ರಗಳಲ್ಲಿ ತಾದ್ಯಾತ್ಮತೆ ಹೊಂದಿರುವುದು ಸಾಮಾನ್ಯ ಮನಸ್ಸಿನ ಪ್ರಮುಖ ಲಕ್ಷಣ.

ಇಲ್ಲಿ ಎರಡು ಬಗೆಯ ವಿಷಯಗಳು ಇವೆ. ಒಂದು ವ್ಯಕ್ತಿಯ ತನ್ನತನ ಅಥವಾ ತನ್ನ ವ್ಯಕ್ತಿತ್ವ ಹಾಗೂ ಮತ್ತೊಂದು ತಾನು ನಿರ್ವಹಿಸುವ ಪಾತ್ರಗಳು. ತನ್ನ ಬಗ್ಗೆ ತಾನು ಹೊಂದಿರುವಂತಹ ಚಿತ್ರಣವೇ ತನ್ನತನ. ಇದು ಅನೇಕ ಪ್ರಭಾವಗಳಿಂದ ರೂಪುಗೊಂಡಿರುತ್ತದೆ. ನಾವು ಯಾರೊಂದಿಗೆ ಸಂಪರ್ಕಗಳನ್ನು ಹೊಂದಿರುತ್ತೇವೆ, ಯಾರ್ಯಾರೊಂದಿಗೆ ವ್ಯವಹರಿಸಿರುತ್ತೇವೆ, ಯಾವುದ್ಯಾವುದಕ್ಕೆ ಪ್ರತಿಕ್ರಿಯೆಗಳನ್ನು ನೀಡಿರುತ್ತೇವೆ, ನಾವು ಯಾವುದ್ಯಾವುದನ್ನು ಮಾಡಲು ಪ್ರೇರಣೆಗಳನ್ನು ಎಲ್ಲೆಲ್ಲಿಂದ, ಯಾರ್ಯಾರಿಂದ ಪಡೆದಿರುತ್ತೇವೆ; ಇತ್ಯಾದಿಗಳೆಲ್ಲಾ ಸಮಗ್ರವಾಗಿ ನಮ್ಮತನದ ಚಿತ್ರಣವನ್ನು ನಾವೇ ಕಟ್ಟಿಕೊಂಡಿರಲು ಸಾಧ್ಯವಾಗಿರುತ್ತದೆ.

ನಮ್ಮ ತಿಳುವಳಿಕೆ, ವರ್ತನೆ, ಸಾಮರ್ಥ್ಯ, ಗುಣವಿಶೇಷಣಗಳು; ಇತ್ಯಾದಿಗಳೆಲ್ಲಾ ನಮ್ಮ ಸ್ವಭಾವವನ್ನು ಅಥವಾ ಮನೋಧರ್ಮವನ್ನು ರೂಪಿಸಿರುತ್ತವೆ. ಉದಾಹರಣೆಗೆ ನಾನು ಸ್ನೇಹಮಯಿ ಅಥವಾ ಕರುಣಾಮಯಿ ಅಥವಾ ಜೀವಪ್ರೇಮಿ ಅಥವಾ ಪ್ರಾಣಿಪ್ರೇಮಿ ಇತ್ಯಾದಿ ಗುಣಗಳಿಂದ ಗುರುತಿಸಿಕೊಳ್ಳುವುದು. ವ್ಯಕ್ತಿಯೊಬ್ಬನು ತಾನು ಕರುಣಾಮಯಿ ಎಂದು ಅಂತರಂಗದಲ್ಲಿ ಗುರುತಿಸಿಕೊಂಡಿದ್ದಾನೆಂದರೆ ಆ ಕರುಣೆ ಅವನ ನಡೆ, ನುಡಿ, ವ್ಯವಹಾರ ಮತ್ತು ಆಲೋಚನೆಗಳಲ್ಲೆಲ್ಲಾ ವ್ಯಕ್ತವಾಗುತ್ತಿರುತ್ತದೆ. ಎಂತಹ ಮೋಸಗಾರನಿಗೂ ಕರುಣೆ ತೋರಿಸಲು ಶಕ್ತನಾಗಿರುತ್ತಾನೆ. ಮಗುವೊಂದು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸುವುದರಲ್ಲಿ, ತಿದ್ದುವುದರಲ್ಲಿ ಕರುಣೆಯನ್ನು ಹೊಂದಿರುತ್ತಾರೆ. ಹೀಗೆ ತನ್ನ ತಾನು ಅನೇಕ ಗುಣಗಳ ಒಟ್ಟಾರೆ ಮೊತ್ತವಾದ ತನ್ನ ವ್ಯಕ್ತಿತ್ವವನ್ನು ತಾನು ಬಿಂಬಿಸುತ್ತಿರುತ್ತಾನೆ. ಅದು ಸಕಾರಾತ್ಮಕವಾಗಿರಬಹುದು, ನಕಾರಾತ್ಮಕವಾದ ಗುಣಗಳಿರಬಹುದು ಅಥವಾ ಎರಡರ ಸಮ್ಮಿಶ್ರದ ಗುಣಗಳ ಮೊತ್ತವೇ ಆಗಿದ್ದಿರಬಹುದು. ‘‘ನನಗೆ ಬೇಗ ಕೋಪ ಬಂದುಬಿಡುತ್ತೆ, ನನಗೆ ಕೋಪ ಬಂದರೆ ನಾನು ಏನು ಮಾಡ್ತೀನಿ ಅಂತ ನನಗೇ ಗೊತ್ತಾಗಲ್ಲ’’ ಅಂತ ಹೇಳಿಕೊಳ್ಳುವವರು ಉಂಟು. ಒಟ್ಟಾರೆ ವ್ಯಕ್ತಿ ತನ್ನ ವ್ಯಕ್ತಿತ್ವದ ಚಿತ್ರಣವೊಂದನ್ನು ತಾನೇಕಟ್ಟಿಕೊಂಡಿರುತ್ತಾನೆ.

ಹೀಗೆ ಪ್ರಜ್ಞಾಪೂರ್ವಕವಾಗಿ ಆಲೋಚಿಸಲಿ ಬಿಡಲಿ, ಅವರ ಆಂತರ್ಯಕ್ಕೆ ಅವರ ವ್ಯಕ್ತಿತ್ವದ ಬಗೆ ಏನು ಎಂದು ತಿಳಿದಿರುತ್ತದೆ. ತಾನು ಅಂತರ್ಮುಖಿಯೋ, ಬಹಿರ್ಮುಖಿಯೋ! ಮಗುವಾಗಿ, ಒಡಹುಟ್ಟುವಾಗಿ, ಸ್ನೇಹಿತರಾಗಿ, ಪಾಲುದಾರನಾಗಿ, ಸಂಗಾತಿಯಾಗಿ ತಮ್ಮತಮ್ಮ ಪಾತ್ರಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಬಗ್ಗೆ, ಯಾವ ಪಾತ್ರವನ್ನು ತಾನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದರ ಬಗ್ಗೆ ಅದಕ್ಕೆ ತಿಳಿದಿರುತ್ತದೆ. ಉದಾಹರಣೆಗೆ ಕರುಣಾಮಯಿಯ ಉದಾಹರಣೆಯನ್ನೇ ತೆಗೆದುಕೊಂಡರೆ ವ್ಯಾಪಾರಸ್ಥನಾಗಿ ಹಣದ ಕೊರತೆ ಇರುವ ಗ್ರಾಹಕನಿಗೆ ಔದಾರ್ಯ ತೋರಿಸಿ ವಸ್ತುವನ್ನು ಹೆಚ್ಚಿನ ಲಾಭವಿಲ್ಲದೆ ಕೊಡುವವನು ತಾನು ಎಂಬ ಗುಣದರಿವು ಅವನಿಗೆ ಇರುತ್ತದೆ. ಅದಕ್ಕೆ ಆತ ಸಿದ್ಧನಾಗಿರುತ್ತಾನೆ ಕೂಡಾ.

ಆ ವ್ಯಕ್ತಿಯ ಹವ್ಯಾಸಗಳು ಅಥವಾ ರೂಢಿಗಳು ಕೂಡಾ ತನ್ನತನವನ್ನು ಬಿಂಬಿಸುವ ವ್ಯಕ್ತಿತ್ವದ ಪ್ರಕಟಣೆಗಳೇ ಆಗಿರುತ್ತವೆ. ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯವೇ ಮೊದಲಾದುವುಗಳಲ್ಲಿ ತೊಡಗಿಕೊಳ್ಳುವುದು, ಅದರಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿರುವುದರಲ್ಲಿಯೂ ಅವರ ವ್ಯಕ್ತಿತ್ವದ ಗುರುತನ್ನು ಕಾಣಬಹುದಾಗಿರುತ್ತದೆ. ಹಾಗೆಯೇ ವ್ಯಕ್ತಿಯು ತನ್ನ ಪ್ರಪಂಚವನ್ನು ಹೇಗೆ ನೋಡುತ್ತಾನೆ ಅಥವಾ ಅದರೊಂದಿಗೆ ಹೇಗೆ ವ್ಯವಹರಿಸಲು ಬಯಸುತ್ತಾನೆಂಬುದೂ ತನ್ನತನದ ವ್ಯಕ್ತಿತ್ವದ ಪ್ರಕಟಣೆಯೇ ಆಗಿರುತ್ತದೆ.

‘‘ಈ ಪ್ರಪಂಚ ಸರಿ ಇಲ್ಲಕಣ್ರೀ. ಜನರುಒಬ್ಬರಿಗೊಬ್ಬರಿಗೆ ಆಗೋದಿಲ್ಲ. ದುಡ್ಡು ಇದ್ದರೇನೇ ಪ್ರೀತಿ ಸಂಬಂಧ ಎಲ್ಲಾ. ಯಾರಿಗೆ ಯಾರೂ ಆಗೋದಿಲ್ಲ’’ ಎನ್ನುವ ಸ್ವಭಾವದ್ದೊಂದು ಬಗೆಯಾದರೆ, ಜನ ಒಬ್ಬರಿಗೊಬ್ಬರು ಆಗಬೇಕು. ಗಿವ್ ಬ್ಯಾಕ್ಟುದ ಸೊಸೈಟಿ ಅಂತ ಸಮಾಜಕ್ಕೇನಾದರೂ ಮಾಡಲು ಹಾತೊರೆಯುವ ಬಗೆ ಇನ್ನೊಂದು. ಇಂತವೆಲ್ಲವೂ ಅವರವರ ತಮ್ಮತನದ ಪ್ರಕಟಣೆಗಳೇ ಆಗಿರುತ್ತವೆ.

ವ್ಯಕ್ತಿಯತನ್ನ ವ್ಯಕ್ತಿತ್ವದ ಮೌಲ್ಯ, ಸಾಮರ್ಥ್ಯದ ಅರಿವು, ಪ್ರೇರಣೆ, ಕ್ರಿಯೆ, ಪ್ರತಿಕ್ರಿಯೆ, ಸ್ಪಂದಿಸುವ ಬಗೆ ಮತ್ತು ಜೀವಿತ ಗೊತ್ತುಗುರಿಗಳೆಲ್ಲವೂ ಅವನ ತನ್ನತನದ ಚಿತ್ರಣದ ಮೇಲೆಯೇ ಆಧರಿತವಾಗಿರುತ್ತದೆ. ಇದು ಬಾಲ್ಯದಿಂದಲೇ ರೂಪುಗೊಳ್ಳುತ್ತಾ ವಯಸ್ಕರಾಗುವ ಹೊತ್ತಿಗೆ ಬಹುಪಾಲು ನಿರ್ದಿಷ್ಟವಾಗಿರುತ್ತದೆ. ತನ್ನ ಬಗ್ಗೆ ತಾನು ಗ್ರಹಿಸಿಕೊಳ್ಳುವುದರಲ್ಲೂ ಮತ್ತು ಇತರರ ಗ್ರಹಿಕೆಗೆ ದೊರಕುವುದರಲ್ಲೂ ಒಂದು ಸ್ಪಷ್ಟತೆ ದೊರಕಿರುತ್ತದೆ. ಈ ಸ್ಪಷ್ಟತೆಯುಳ್ಳವರೇ ತಮ್ಮ ಗುರುತನ್ನು ಅಥವಾ ಐಡೆಂಟಿಟಿಯನ್ನು ಸ್ಪಷ್ಟಗೊಳಿಸಿಕೊಂಡಿರುತ್ತಾರೆ.

ಆದರೆ ಬಹಳಷ್ಟು ಜನಕ್ಕೆ ತಾನೊಬ್ಬ ವ್ಯಕ್ತಿಯಾಗಿ ರೂಪುಗೊಂಡಿರುವ ವ್ಯಕ್ತಿತ್ವದ ಗುಣ ಸ್ವಭಾವಗಳ ಮತ್ತು ತನ್ನ ಸುತ್ತಮುತ್ತಲ ಸಮಾಜವು ತನ್ನ ಗುರುತಿಸುವ ರೀತಿಗಳ ನಡುವೆ ಗೊಂದಲ ಏರ್ಪಡುತ್ತದೆ. ಅಂದರೆ ಸಮಾಜ ನೀಡುವ ಗುರುತುಗಳ ಮತ್ತು ತಾನೇ ರೂಪಿಸಿಕೊಂಡಿರುವ ಗುರುತುಗಳ ನಡುವೆ ವ್ಯತ್ಯಾಸಗಳಿರುವಾಗ ಅಥವಾ ಒಪ್ಪಿಕೊಳ್ಳಲು ಸಾಧ್ಯವಾಗದಿರುವಾಗ ಗೊಂದಲಗಳು ಉಂಟಾಗುತ್ತದೆ. ಸಮಾಜದ ಗುರುತಿಸುವಿಕೆ ಮತ್ತು ತನ್ನ ತಾನು ಗುರುತಿಸಿಕೊಳ್ಳುವಿಕೆಯ ನಡುವೆ ತಿಕ್ಕಾಟ ನಡೆಯಬಹುದು.

ಯಾವ ವ್ಯಕ್ತಿಯು ತನ್ನತನದ ವ್ಯಕ್ತಿತ್ವದ ಬಗೆಯನ್ನು ಸ್ಪಷ್ಟಪಡಿಸಿಕೊಳ್ಳುವುದರಲ್ಲಿ ವಿಫಲನಾಗಿರುತ್ತಾನೋ ಅವನು ಅಥವಾ ಅವಳು ತಾನು ನಿರ್ವಹಿಸುವ ಪಾತ್ರಗಳ ಆಧಾರದಿಂದ ಅಥವಾ ಸಮಾಜವು ಗುರುತಿಸುವ ಕುರುಹುಗಳ ಆಧಾರದಿಂದ ತನ್ನ ವ್ಯಕ್ತಿತ್ವವನ್ನು ತಾನು ಕಂಡುಕೊಳ್ಳಲು ಯತ್ನಿಸುತ್ತಾರೆ.

ಉದಾಹರಣೆಗೆ ತನ್ನತನ್ನತನದ ವ್ಯಕ್ತಿತ್ವದ ವಿಶಿಷ್ಟತೆಯನ್ನು ಗುಣ, ಸ್ವಭಾವ, ಸಾಮರ್ಥ್ಯ, ಮಿತಿ, ಪ್ರತಿಭೆ, ಆಸಕ್ತಿಗಳ ಆಧಾರದಲ್ಲಿ ಗುರುತಿಸಿಕೊಳ್ಳುವುದರ ಬದಲು ಕುಟುಂಬ ಮತ್ತು ಮನುಷ್ಯ ಪರಿಸರವು ನೀಡುವ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತದೆ. ಗಂಡ, ಹೆಂಡತಿ, ಮಗ, ಸ್ನೇಹಿತ, ಅಣ್ಣ, ತಂಗಿ; ಇತ್ಯಾದಿ. ಹಾಗೆಯೇ ಆ ಪಾತ್ರಗಳಿಗೆ ಇರುವ ವಿಶೇಷಣಗಳನ್ನು ತಾನು ಹೊಂದಲು ಯತ್ನಿಸುತ್ತಾನೆ. ಆದರೆ ಪಾತ್ರಾಧಾರಿತವಾಗಿ ಗುಣವನ್ನು ಗ್ರಹಿಸುವುದು ವಾಸ್ತವವಾಗಿ ಸಮಂಜಸವಲ್ಲ. ಉದಾಹರಣೆಗೆ ಮಮತೆ ಮತ್ತು ಕರುಣೆಯಿಂದ ಆರೈಕೆ ಮಾಡುವ ಗುಣವುಳ್ಳ ವ್ಯಕ್ತಿಯನ್ನು ತಾಯಿಹೃದಯದ ವ್ಯಕ್ತಿ ಎಂದು ಕರೆಯುವುದು. ಆದರೆ, ಇದು ಅಸಮಂಜಸ. ಮಮತೆ ಮತ್ತು ಕರುಣೆಯಿಂದ ಆರೈಕೆ ಮಾಡುವ ಗುಣವು ಲಿಂಗಾಧಾರಿತವೂ ಅಲ್ಲ, ಪಾತ್ರವೊಂದರ ನಿರ್ದಿಷ್ಟ ಗುಣಲಕ್ಷಣವೂ ಅಲ್ಲ. ಅದು ಆ ವ್ಯಕ್ತಿಯ ರೂಪುಗೊಂಡ ಸ್ವಭಾವವಾಗಿರುತ್ತದೆ.

ಧರ್ಮ, ಜಾತಿ, ಕಸುಬು, ಸಿದ್ಧಾಂತ ಮತ್ತು ವ್ಯವಹಾರಗಳಿಂದ ವ್ಯಕ್ತಿಗಳ ಗುಣಾವಗುಣಗಳನ್ನು ಗುರುತಿಸುವುದು ಕೂಡಾ ಅವೈಜ್ಞಾನಿಕವೂ ಮತ್ತು ಅವಾಸ್ತವವೂ ಆಗಿರುತ್ತದೆ. ಯಾವುದೋಒಂದು ನಿರ್ದಿಷ್ಟ ಜಾತಿ ಮತ್ತು ಧರ್ಮದವರ ಗುಣಗಳು ಉತ್ತಮ, ಇನ್ಯಾರದ್ದೋ ಅಧಮ ಎನ್ನುವುದು, ಹಾಗೆಯೇ ಆ ಸಮುದಾಯದವರು ಕರುಣಾಳುಗಳು, ಈ ಸಮುದಾಯದವರು ಕ್ರೂರಿಗಳು ಎನ್ನುವುದು ಕೂಡಾ ಅವೈಜ್ಞಾನಿಕ ಗ್ರಹಿಕೆಯೇ ಆಗಿರುತ್ತದೆ. ಹೀಗೆ ಗ್ರಹಿಸುವವರು ಮತ್ತು ಗ್ರಹಿಕೆಗೆ ಒಳಗಾಗುವವರ ಮೂಲ ಸಮಸ್ಯೆ ಎಂದರೆ ತಮ್ಮತನದ ಗುರುತನ್ನು ಹೊಂದಿಲ್ಲದೇ ಇರುವುದಾಗಿರುತ್ತದೆ. ಇದನ್ನು ಗುರುತುಗೇಡಿತನ ಎನ್ನುತ್ತೇವೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು