ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಲೋಕಸಭಾ ಸ್ಪೀಕರ್ ಸಮ್ಮತಿ
ಹೊಸದಿಲ್ಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬುಧವಾರ ಸ್ವೀಕರಿಸಿದ್ದಾರೆ. ಅವಿಶ್ವಾಸ ನಿರ್ಣಯದ ಕುರಿತ ಚರ್ಚೆಗೆ ದಿನಾಂಕವನ್ನು ನಿಗದಿಪಡಿಸಿ ಸದನಕ್ಕೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪಸ್ಪೀಕರ್ ಗೌರವ್ ಗೊಗೋಯಿ ಅವರು ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗಾಗಿ ನೋಟಿಸ್ ಸಲ್ಲಿಸಿದ್ದರು. ಗೌರವ್ ಗೊಗೊಯಿ ಅವರು ಲೋಕಸಭಾ ಕಾರ್ಯಾಲಯದಲ್ಲಿ ಬುಧವಾರ ಬೆಳಗ್ಗೆ 9:20ರ ವೇಳೆಗೆ ಅವಿಶ್ವಾಸ ನಿರ್ಣಯ ಮಂಡನೆಗಾಗಿನ ನೋಟಿಸ್ ಸಲ್ಲಿಸಿದರು.
ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕೇವಲ 13 ಕಾರ್ಯನಿರ್ವಹಣಾ ಕಲಾಪಗಳು ಬಾಕಿಯಿವೆ. ನಿಯಮಮಾವಳಿ ಪ್ರಕಾರ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಅವರು 10 ದಿನಗಳೊಳಗೆ ಚರ್ಚೆಗಿಡಬೇಕಾಗುತ್ತದೆ.
ಎಲ್ಲಾ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ನಿರ್ಣಯವನ್ನು ಮಂಡಿಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಓಂ ಬಿರ್ಲಾ ತಿಳಿಸಿದರು.
‘‘ಅವಿಶ್ವಾಸ ನಿರ್ಣಯ ಮಂಡನೆಗೆ ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳ ಬೆಂಬಲ ಲಭಿಸಿದೆ. ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರ್ನ ಸರಕಾರವು ಯಾವುದೆಲ್ಲಾ ಕ್ರಮಗಳನ್ನು ಕೈಗೊಂಡಿದೆಯೆಂಬುದನ್ನು ಅವಿಶ್ವಾಸ ನಿರ್ಣ ಯ ಮಂಡನೆಗೆ ನೋಟಿಸ್ ನೀಡಿರುವ ಈಶಾನ್ಯ ಭಾರತದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ತಿಳಿಯಬಯಸಿದ್ದಾರೆ’’ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಣಿಪುರ ನರಳುತ್ತಿದೆ ಹಾಗೂ ಪ್ರಧಾನಿಯವರಿಂದ ಈ ಬಗ್ಗೆ ಹೇಳಿಕೆಯನ್ನು ಪಡೆಯಲು ನಾವು ಹಲವಾರು ದಿನಗಳಿಂದ ಯತ್ನಿಸುತ್ತಾ ಬಂದಿದ್ದೇವೆ’’ ಎಂದು ಚೌಧುರಿ ಹೇಳಿದರು.
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ನ ಮುಖ್ಯ ಕಾರ್ಯಾಲಯದಲ್ಲಿ ನಡೆ ಸಭೆಯಲ್ಲಿ ಇಂಡಿಯಾ ಪ್ರತಿಪಕ್ಷ ಮೈತ್ರಿಕೂಟದ 26 ಪಕ್ಷಗಳ ಸದನ ನಾಯಕರು ಹಾಗೂ ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಭಾಗವಹಿಸಿದ್ದರು. ಲೋಕಸಭೆಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಬೇಕಾದರೆ ಕನಿಷ್ಠ 50 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಸದಸ್ಯರ ಬೆಂಬಲದ ಅಗತ್ಯವಿದೆ.
ಲೋಕಸಭೆಯಲ್ಲಿ ಮತ್ತೆ ‘ಮಣಿಪುರ’ ಕೋಲಾಹಲ
ತರುವಾಯ, ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಬುಧವಾರವೂ ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದ್ದವು. ಕಾರ್ಗಿಲ್ ವಿಜಯದಿವಸದ ದಿನದ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ಸದನವು ಶ್ರದ್ದಾಂಜಲಿಯನ್ನು ಆರ್ಪಿಸಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕರು ಪ್ರತಿಭಟನೆ ನಡೆಸತೊಡಗಿದರು.
ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ವಿಪಕ್ಷ ಸದಸ್ಯರು ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗಿದರು. ಸದನದ ಘನತೆಯನ್ನು ಎತ್ತಿಹಿಡಿಯಲು ಸಂಯಮದಿಂದ ವರ್ತಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಪದೇ ಪದೇ ಪ್ರತಿಭಟನಾ ನಿರತ ಸದಸ್ಯರನ್ನು ಒತ್ತಾಯಿಸಿದರು. ಆದಾಗ್ಯೂ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಿಲ್ಲಿಸದೆ ಇದ್ದಾಗ ಪ್ರಶ್ನೋತ್ತರ ವೇಳೆಯನ್ನು 20 ನಿಮಿಷಗಳಿಗೆ ಮೊಟಕುಗೊಳಿಸಲಾಯಿತು ಮತ್ತು ಸದನವನ್ನು ಮಧ್ಯಾಹ್ನದವರೆಗೆ ಉಂದೂಡಲಾಯಿತು.
ತರುವಾಯ, ಗೊಗೊಯಿ ಅವರಲ್ಲದೆ, ಬಿಆರ್ಎಸ್ ಪಕ್ಷದ ಸಂಸದ ನಾಮ ನಾಗೇಶ್ವರ ರಾವ್ ಕೂಡಾ ಕೇಂದ್ರ ಸಚಿವ ಸಂಪುಟದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆಪ್ಎಸ್) ಇಂಡಿಯಾ ಮೈತ್ರಿಕೂಟದಿಂದ ಹೊರಗುಳಿದಿದೆ.
‘‘ ಇಂಡಿಯಾ ಮೈತ್ರಿಕೂಟವು ಒಗ್ಗಟ್ಟಿನಿಂದಿದೆ. ಕಾಂಗ್ರೆಸ್ ಪಕ್ಷದ ನಾಯಕ ಸದನದಲ್ಲಿ ನಿರ್ಣಯವನ್ನು ಮಂಡಿಸಲಿದ್ದಾರೆ. ಸರಕಾರದ ದುರಹಂಕಾರವನ್ನು ಮುರಿಯಲು ಹಾಗೂ ಮಣಿಪುರದ ಬಗ್ಗೆ ಅದು ಮಾತನಾಡುವಂತೆ ಮಾಡಲು ಕೊನೆಯ ಅಸ್ತ್ರವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ನಾವು ಭಾವಿಸುತ್ತೇವೆ’’ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಚೇತಕ ಮಾಣಿಕ್ಕಮ್ ಟಾಗೋರ್ ತಿಳಿಸಿದ್ದಾರೆ.
ಆದರೆ ಮಣಿಪುರ ವಿಷಯದ ಕುರಿತ ಚರ್ಚೆಗೆ ಕೇಂದ್ರ ಗೃಹ ಸಚಿವ ಉತ್ತರಿಸಲು ಸಿದ್ಧರಿದ್ದಾರೆಂದು ಕೇಂದ್ರ ಸರಕಾರವು ಹೇಳಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಪ್ರತಿಪಕ್ಷಗಳಿಗೆ ತಾನು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ಸರಕಾರವು ಮಣಿಪುರ ಬಗ್ಗೆ ಚರ್ಚೆಗೆ ಸಿದ್ಧವಾಗಿದೆ ಹಾಗೂ . ಈ ಮಹತ್ವದ ವಿಷಯವನ್ನು ಬಗೆಹರಿಸಲು ಎಲ್ಲಾ ಪಕ್ಷಗಳ ಸಹಕಾರವನ್ನು ತಾನು ಬಯಸುವುದಾಗಿ ಅವರು ಟ್ವೀಟಿಸಿದ್ದಾರೆ.